4 ವರ್ಷದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್ ವಾಗ್ದಾಳಿ
- ಗಾಜಿಯಾಬಾದ್ ಅತ್ಯಾಚಾರ ಪ್ರಕರಣ
- 4 ವರ್ಷದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್ ವಾಗ್ದಾಳಿ
- ಸಿಜೆಐ ಸೂರ್ಯ ಕಾಂತ್ ಖಡಕ್ ವಾರ್ನಿಂಗ್
ನವದೆಹಲಿ: ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ (ಜು.17) ಖಾಸಗಿ ಆಸ್ಪತ್ರೆ ಹಾಗೂ ಆಯುರ್ವೇದ ವೈದ್ಯರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ನಿರಾಕರಿಸಿದ ಇವರ ನಡವಳಿಕೆಯನ್ನು ಕಂಡು ಸುಪ್ರೀಂ ಕೋರ್ಟ್ ಪೀಠವು, "ನಿಮಗೆ ಕರುಣೆ ಅನ್ನೋದೇ ಇಲ್ವಾ? ನಿಮ್ಮನ್ನು ವೈದ್ಯರೆಂದು ಕರೆದುಕೊಳ್ಳಬೇಡಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರ ತ್ರಿಸದಸ್ಯ ಪೀಠ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ಆಸ್ಪತ್ರೆ ಹಾಗೂ ವೈದ್ಯರು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಯೋಚಿಸಬೇಕು ಎಂದು ಕೋರ್ಟ್ ಖಡಕ್ ಆಗಿ ಸೂಚಿಸಿದೆ.
ನಡೆದಿದ್ದೇನು?
ಕಳೆದ ಮಾರ್ಚ್ 16 ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘೋರ ಕೃತ್ಯ ನಡೆದಿತ್ತು. ನಾಲ್ಕು ವರ್ಷದ ಪುಟ್ಟ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ನೆರೆಹೊರೆಯ ವ್ಯಕ್ತಿಯೊಬ್ಬ ಕರೆದುಕೊಂಡು ಹೋಗಿದ್ದ. ಮಗು ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು.
ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಹತ್ತಿರದ ಇಬ್ಬರು ಖಾಸಗಿ ಆಯುರ್ವೇದ ವೈದ್ಯರ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ತುರ್ತು ಚಿಕಿತ್ಸೆ ನೀಡಬೇಕಾದ ಅವರು ಮಗುವನ್ನು ದಾಖಲು ಮಾಡಿಕೊಳ್ಳಲು ಮತ್ತು ಪ್ರಾಥಮಿಕ ನೆರವು ನೀಡಲು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕೊನೆಗೆ ಮಗುವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ತಡವಾಗಿದ್ದು, ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ವೈದ್ಯರೆಂದು ಕರೆಸಿಕೊಳ್ಳುವ ಹಕ್ಕಿಲ್ಲ! ಸಿಜೆಐ ಆಕ್ರೋಶ
ಖಾಸಗಿ ಆಸ್ಪತ್ರೆಗಳು ಮತ್ತು ಸ್ಥಳೀಯ ಪೊಲೀಸರ ಈ ಬೇಜವಾಬ್ದಾರಿತನವನ್ನು ಪ್ರಶ್ನಿಸಿ ಮಗುವಿನ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ (ಜು.17) ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ವೈದ್ಯರ ನಡವಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಮೂಲಭೂತ ಕರ್ತವ್ಯವನ್ನೇ ಮರೆತ ಮೇಲೆ ನಿಮಗೆ 'ವೈದ್ಯ' ಎಂದು ಬರೆದುಕೊಳ್ಳುವ ಯಾವುದೇ ಹಕ್ಕಿಲ್ಲ. ನಿಮ್ಮಲ್ಲಿ ಅಲ್ಪಸ್ವಲ್ಪ ಮಾನವೀಯತೆ ಇದ್ದರೂ, ನಿಮ್ಮ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದಿದ್ದರೆ ನೀವೇ ಸ್ವತಃ ಮಗುವನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆಕೆ ಬಡ ಕುಟುಂಬದವಳು ಎಂದಾ? ಅಥವಾ ನಿಮ್ಮ ಶುಲ್ಕವನ್ನು ಪಾವತಿಸಲು ಅವರ ಕೈಯಲ್ಲಿ ಕಾಸಿರಲಿಲ್ಲ ಎಂದಾ ನೀವು ಇಷ್ಟು ನಿರ್ದಯವಾಗಿ ವರ್ತಿಸಿದ್ದು? ಎಂದು ನ್ಯಾಯಪೀಠವು ಪ್ರಶ್ನೆಗಳ ಸುರಿಮಳೆಗೈದಿದೆ.
ಪರಿಹಾರ ನೀಡದಿದ್ದರೆ ಕಾನೂನು ಕ್ರಮದ ಎಚ್ಚರಿಕೆ!
ಖಾಸಗಿ ಆಸ್ಪತ್ರೆಯ ಈ ಧೋರಣೆ ಅತ್ಯಂತ ಕ್ರೂರ ಮತ್ತು ಅಮಾನವೀಯ ಎಂದು ಬಣ್ಣಿಸಿದ ನ್ಯಾಯಾಲಯ, ನಾವು ಶಿಕ್ಷೆ ನೀಡಲು ಶುರು ಮಾಡಿದರೆ ಅದರ ಪರಿಣಾಮ ತುಂಬಾ ಭೀಕರವಾಗಿರುತ್ತದೆ. ಅದಕ್ಕೂ ಮುಂಚೆ ನೀವಾಗಿಯೇ ಸಂತ್ರಸ್ತ ಕುಟುಂಬದ ನೋವಿಗೆ ಸ್ಪಂದಿಸಿ, ಪರಿಹಾರವನ್ನು ನೀಡಿ ಎಂದು ಆದೇಶಿಸಿದೆ. ಒಂದು ವೇಳೆ ಆಸ್ಪತ್ರೆ ಮತ್ತು ವೈದ್ಯರು ಸ್ವಯಂಪ್ರೇರಿತರಾಗಿ ಪರಿಹಾರ ನೀಡಲು ವಿಫಲವಾದರೆ, ಕೋರ್ಟ್ ಭಾರಿ ಮೊತ್ತದ ದಂಡವನ್ನು ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ, (ಏಜನ್ಸೀಸ್).