ಲಖನೌ: ಕೇವಲ ಆರು ತಿಂಗಳಲ್ಲಿ 11 ಪ್ರಕರಣಗಳಲ್ಲಿ ಒಟ್ಟು 23 ಮಂದಿಗೆ ಮರಣದಂಡನೆ ವಿಧಿಸಿದ್ದ ನ್ಯಾಯಾಧೀಶರೊಬ್ಬರನ್ನು ಹೈಕೋರ್ಟ್ ಆದೇಶದ ಮೇರೆಗೆ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಭಾನುವಾರ(ಅ. 25) ವರದಿಯಾಗಿದೆ.
ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ತ್ವರಿತ ವಿಚಾರಣಾ ನ್ಯಾಯಾಲಯದ (ಫಾಸ್ಟ್-ಟ್ರ್ಯಾಕ್ ಕೋರ್ಟ್) ಪೀಠಾಧೀಶರಾಗಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರನ್ನು, ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.
ನ್ಯಾ. ರವಿ ಕುಮಾರ್ ದಿವಾಕರ್ ಅವರನ್ನು ಮುಜಫರ್ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಮತ್ತು ಅವರ ಸ್ಥಾನಕ್ಕೆ ಶಿವ ಕುಮಾರಿ ಅವರು ತ್ವರಿತ ವಿಚಾರಣಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ನ್ಯಾ. ರವಿ ಕುಮಾರ್ ದಿವಾಕರ್ ಅವರು, ಈ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ 11 ಪ್ರಕರಣಗಳಲ್ಲಿ ಒಟ್ಟು 23 ಮಂದಿಗೆ ಮರಣದಂಡನೆ ವಿಧಿಸಿದ್ದರು. ಇತ್ತೀಚೆಗೆ, ಆಗಸ್ಟ್ ತಿಂಗಳಲ್ಲಿ ಅಂದಿನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಕೆ. ಸಿಂಗ್ ಅವರು ಹೊರಡಿಸಿದ ಆಡಳಿತಾತ್ಮಕ ಆದೇಶಗಳ ಮೂಲಕ, ಕೊಲೆ ಮತ್ತು ಇತರ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ, ವಿಚಾರಣೆಯ 97 ಪ್ರಕರಣಗಳನ್ನು ತಮ್ಮ ನ್ಯಾಯಾಲಯದಿಂದ ಹಿಂಪಡೆದ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.
'ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್' (NDPS) ಕಾಯ್ದೆಯ ಅಡಿಯಲ್ಲಿ ದಾಖಲಾದ, ಸುಮಾರು ಒಂದು ದಶಕ ಹಳೆಯದಾದ ಪ್ರಕರಣವೊಂದರಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ನೀಡಿದ 35 ಪುಟಗಳ ತೀರ್ಪಿನಲ್ಲಿ, ಕಾನೂನುಬದ್ಧ ಕಾರ್ಯವಿಧಾನವನ್ನು ಅನುಸರಿಸದೆ, ಈಗಾಗಲೇ ವಿಚಾರಣೆ ಆರಂಭಗೊಂಡಿರುವ ಪ್ರಕರಣಗಳನ್ನು ಆಡಳಿತಾತ್ಮಕ ಆದೇಶಗಳ ಮೂಲಕ ಹಿಂಪಡೆಯಬಹುದೇ ಎಂದು ದಿವಾಕರ್ ಪ್ರಶ್ನಿಸಿದ್ದಾರೆ. ಅಲ್ಲದೆ, ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಜಿಲ್ಲಾ ನ್ಯಾಯಾಧೀಶರು ಚಲಾಯಿಸುವ ಆಡಳಿತಾತ್ಮಕ ಅಧಿಕಾರಗಳ ಮಿತಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).