ರಾಯಗಢ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ರಾಯಗಢ ಜಿಲ್ಲೆಯ ದಿವ್ಯಾಗರ್ ಕಡಲತೀರದಲ್ಲಿ ದುರಂತವೊಂದು ಸಂಭವಿಸಿದೆ. ಪುಣೆಯಿಂದ ಪ್ರವಾಸಕ್ಕೆ ತೆರಳಿದ್ದ ಎಂಟು ಮಂದಿ ವಿದ್ಯಾರ್ಥಿಗಳು ಸಮುದ್ರದ ಪ್ರಬಲ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಪುಣೆ ಜಿಲ್ಲೆಯ ಆಲಂದಿಯಲ್ಲಿರುವ ವಿನ್ನರ್ಸ್ ಅಕಾಡೆಮಿ ಎಂಬ ಖಾಸಗಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ದೊಡ್ಡ ಗುಂಪು ಪ್ರವಾಸಕ್ಕಾಗಿ ದಿವ್ಯಾಗರ್ ಕಡಲತೀರಕ್ಕೆ ಬಂದಿತ್ತು. ಈ ತಂಡದಲ್ಲಿ 25 ಹುಡುಗರು, 17 ಹುಡುಗಿಯರು ಹಾಗೂ 6 ಮಂದಿ ಶಿಕ್ಷಕರು ಸೇರಿದಂತೆ ಒಟ್ಟು 48 ಜನರ ದೊಡ್ಡ ದಂಡು ಇತ್ತು.
ಎಲ್ಲರೂ ಕಡಲತೀರದ ಸೌಂದರ್ಯವನ್ನು ಸವಿಯುತ್ತಾ ಖುಷಿಯಿಂದ ಕಾಲ ಕಳೆಯುತ್ತಿದ್ದರು. ಸಂಜೆ 5:30 ರ ಸುಮಾರಿಗೆ ಈ ವಿದ್ಯಾರ್ಥಿಗಳು ಸಮುದ್ರಕ್ಕಿಳಿದಿದ್ದಾರೆ. ಆದರೆ, ನೀರಿನ ಆಳ ಮತ್ತು ಸಮುದ್ರದ ಅಲೆಗಳ ತೀವ್ರತೆಯನ್ನು ಊಹಿಸಲು ವಿಫಲರಾದ ಪರಿಣಾಮ, ಏಕಾಏಕಿ ಬಂದ ಪ್ರಬಲ ನೀರಿನ ಸೆಳೆತಕ್ಕೆ ಸಿಲುಕಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ವಾಟರ್ ಸ್ಪೋರ್ಟ್ಸ್ ತಂಡದವರು ತಮ್ಮ ಪ್ರಾಣದ ಹಂಗನ್ನು ತೊರೆದು ರಕ್ಷಣೆಗೆ ಧಾವಿಸಿದ್ದಾರೆ. ನೀರಿನಲ್ಲಿ ಮುಳುಗಿದ್ದ ಎಂಟು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಅವತಿ ತಮ್ಮ ಸಿಬ್ಬಂದಿಯೊಂದಿಗೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದರು. ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ಹಾಗೂ ಇತರೆ ಕಾನೂನು ಪ್ರಕ್ರಿಯೆಗಳಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ ವಿದ್ಯಾರ್ಥಿಗಳನ್ನು ತನ್ಮಯ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೇ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಸಂಕರ್, ರಾಜ್‌ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಂ ಭಂಡವಾಳ್ಕರ್ ಮತ್ತು ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ಹದಿಹರೆಯದ ಮುದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಸಂತಾಪ ಸೂಚಿಸಿದ್ದು, ಎಕ್ಸ್ (X) ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಘಟನನ್ನು ಅತ್ಯಂತ ದುಃಖಕರ ಮತ್ತು ಹೃದಯವಿದ್ರಾವಕ ಎಂದು ಬಣ್ಣಿಸಿದ್ದಾರೆ. ಮೃತದೇಹಗಳನ್ನು ಪಾಲಕರ ಬಳಿಗೆ ತಲುಪಿಸಲು ಸ್ಥಳೀಯ ಆಡಳಿತವು ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಮತ್ತೊಂದೆಡೆ, ಈ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ಆದೇಶಿಸಿದ್ದಾರೆ. ಈ ಘಟನೆಗೆ ನೇರವಾಗಿ ಜವಾಬ್ದಾರರಾದ ಅಕಾಡೆಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಾಗೆಯೇ, ಇನ್ಮುಂದೆ ಶಾಲಾ-ಕಾಲೇಜುಗಳ ಪ್ರವಾಸಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ತಿಳಿಸಿದ್ದಾರೆ, (ಏಜೆನ್ಸೀಸ್).