Paper Leak Bill 2026 | ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದರೆ ಹುಷಾರ್!...ಪೇಪರ್ ಲೀಕ್' ಬಿಲ್ ಹೊಸ ಮೈಲಿಗಲ್ಲು ಎಂದ ಸಚಿವ ಜಿತೇಂದ್ರ ಸಿಂಗ್ 
ದೇಶ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದರೆ ಹುಷಾರ್!...ಪೇಪರ್ ಲೀಕ್ ಬಿಲ್ ಹೊಸ ಮೈಲಿಗಲ್ಲು ಎಂದ ಸಚಿವ ಜಿತೇಂದ್ರ ಸಿಂಗ್ | Paper Leak Bill 2026

ನವದೆಹಲಿ: ಲೋಕಸಭೆಯಲ್ಲಿ ಬಹುಚರ್ಚಿತ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಕಾಯ್ದೆ, 2026 (Paper Leak Bill 2026) ಕುರಿತಾದ ಚರ್ಚೆ ಆರಂಭಗೊಂಡಿದ್ದು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಕೇಂದ್ರ ಸಹಾಯಕ ಸಚಿವ ಜಿತೇಂದ್ರ ಸಿಂಗ್ ವಿಧೇಯಕದ ಮೇಲಿನ ಸಂವಾದಕ್ಕೆ ಚಾಲನೆ ನೀಡಿದರು. ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದಾಗಿ ಹಲವು ದಿನಗಳ ಕಾಲ ಸಂಸತ್ತಿನ ಕಲಾಪ ಸ್ತಬ್ಧಗೊಂಡ ನಂತರ ಈ ಚರ್ಚೆ ನಡೆಯುತ್ತಿದ್ದು, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವ ನಿರೀಕ್ಷೆಯಿದೆ.
ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ, 2026ರ ಕುರಿತು ಲೋಕಸಭೆಯಲ್ಲಿ ಚರ್ಚೆ ಆರಂಭಿಸಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಈ ಪ್ರಸ್ತಾವಿತ ಶಾಸನವು 2024 ರಲ್ಲಿ ಜಾರಿಗೆ ತರಲಾದ ಪೇಪರ್ ಲೀಕ್ ತಡೆ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದರು. ಭಾರತದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲೇ ಇಂತಹ ಕಾನೂನು ತಂದಿರುವುದು ಇದೇ ಮೊದಲು ಎಂದಿರುವ ಸಚಿವ ಜಿತೇಂದ್ರ ಸಿಂಗ್, ಈ ತಿದ್ದುಪಡಿಯು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರಕ್ಕಿರುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದರು.
ಇದೇ ವೇಳೆ, ಭಾರತ ಮಾತೆಯ ಮಕ್ಕಳ ಭವಿಷ್ಯದ ಜೊತೆ ಆಟವಾಡಲು ಯಾರಿಗೂ ಬಿಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪಕ್ಕೆ ಇದು ಪುಷ್ಟಿ ನೀಡುತ್ತದೆ. ಹೀಗಾಗಿ, ಈ ವಿಧೇಯಕವನ್ನು ಭಾರತೀಯ ಸಂಸತ್ತಿನ ಇತಿಹಾಸದಲ್ಲೇ ಒಂದು ಐತಿಹಾಸಿಕ ಹಾಗೂ ಮಹತ್ವದ ಮೈಲಿಗಲ್ಲು ಎಂದು ಕರೆಯಬಹುದು ಎಂದು ಅವರು ಬಣ್ಣಿಸಿದರು.
ಮುಂದುವರಿದು ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯು ಹೊಸ ವಿಷಯವೇನಲ್ಲ ಮತ್ತು ಹಿಂದಿನ ಸರ್ಕಾರಗಳ ಅವಧಿಯಲ್ಲೂ ಇಂತಹ ಘಟನೆಗಳು ಜರುಗಿದ್ದವು ಎಂದು ಪ್ರತಿಪಾದಿಸಿದರು. ಯುಪಿಎ (UPA) ಸರ್ಕಾರದ ಅವಧಿಯಲ್ಲಿ ಅಂದರೆ 2009, 2010, 2011, 2012 ಮತ್ತು 2013 ರಲ್ಲಿ ನಡೆದಿದ್ದವೆನ್ನಲಾದ ಅಕ್ರಮದ ಉದಾಹರಣೆಗಳನ್ನು ನೀಡಿದ ಅವರು, 2009 ರಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಯ ಪೇಪರ್ ಲೀಕ್ ಆಗಿತ್ತು ಹಾಗೂ 2013 ರಲ್ಲಿ ಮಹಾರಾಷ್ಟ್ರದಲ್ಲಿ ಮತ್ತೊಂದು ಪೇಪರ್ ಲೀಕ್ ನಡೆದಿತ್ತು ಎಂದು ಉಲ್ಲೇಖಿಸಿದರು.
ಪೇಪರ್ ಲೀಕ್ ತಡೆಗಟ್ಟಲು ಮತ್ತು ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯಲು ದೇಶಾದ್ಯಂತ ಬಲವಾದ ಕಾನೂನು ಚೌಕಟ್ಟನ್ನು ನಿರ್ಮಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ಶಾಸನವನ್ನು ತಂದಿದೆ ಎಂದು ಸಿಂಗ್ ಸ್ಪಷ್ಟಪಡಿಸಿದರು.

ಏನಿದು ಪೇಪರ್ ಲೀಕ್ ತಡೆ ಕಾಯ್ದೆ..?

ಈ ಹೊಸ ತಿದ್ದುಪಡಿ ವಿಧೇಯಕವು ಪರೀಕ್ಷಾ ಅಕ್ರಮ ಎಸಗುವ ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗಿನ ದಂಡವನ್ನು ಪ್ರಸ್ತಾಪಿಸುತ್ತದೆ. ಈ ಕಾಯ್ದೆಯಡಿ ಪೇಪರ್ ಲೀಕ್ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದ್ದು, ಪೇಪರ್ ಲೀಕ್ ಅಥವಾ ಅಕ್ರಮ ಎಸಗುವವರಿಗೆ ಕನಿಷ್ಠ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಸಂಘಟಿತ ಅಪರಾಧಗಳಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಮತ್ತು 10 ಕೋಟಿ ರೂ.ವರೆಗೆ ದಂಡವನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಇರುವ ಕಾನೂನಿನಲ್ಲಿ ಅಕ್ರಮಕ್ಕೆ 3 ರಿಂದ 5 ವರ್ಷ ಹಾಗೂ ಸಂಘಟಿತ ಅಪರಾಧಕ್ಕೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆಯಿದೆಯಾದರೂ, ಹೊಸ ವಿಧೇಯಕವು ವಿಚಾರಣೆಯನ್ನು ಚಾರ್ಜ್‌ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ಪೂರ್ಣಗೊಳಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲು ಅಧಿಕಾರ ನೀಡುತ್ತದೆ. ಜೊತೆಗೆ, ಅಗತ್ಯವಿದ್ದರೆ ತನಿಖೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಸಿಗಲಿದೆ.(ಏಜೆನ್ಸೀಸ್​).