Gyanesh Kumar Ticket Offer: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವಂತೆ ವಿಮಾನ ಪ್ರಯಾಣದ ವೇಳೆ ತಮಗೆ ಸಲಹೆ ನೀಡಿದ್ದರು ಎಂದು ಕೇರಳ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್ ಹೇಳಿಕೆ ನೀಡಿದ್ದು, ರಾಷ್ಟ್ರ ರಾಜಕೀಯದಲ್ಲಿ ಹೊಸ ಕೋಲಾಹಲವನ್ನೇ ಎಬ್ಬಿಸಿತ್ತು. ಸದ್ಯ ಈ ಹೇಳಿಕೆಗೆ ಕೇರಳ ಬಿಜೆಪಿ ನಾಯಕ ಜಿಜಿ ಜೋಸೆಫ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಜಿಜಿ ಜೋಸೆಫ್, ರಾಜಕೀಯ ಪಕ್ಷದ ಕಾರ್ಯಕರ್ತರು ಸಾಮಾನ್ಯವಾಗಿ ಇಂತಹ ಗೌಪ್ಯ ಚರ್ಚೆಗಳು ಮತ್ತು ಸಭೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಆದರೆ ಥಾಮ್ಸನ್ ಅವರ ಈಚಿನ ಹೇಳಿಕೆಗಳಿಂದಾಗಿ ತಾವು ಇದನ್ನು ಬಹಿರಂಗಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.
2017 ರ ಘಟನೆಯನ್ನು ನೆನಪಿಸಿಕೊಂಡಿರುವ ಜೋಸೆಫ್, ಆ ಸಮಯದಲ್ಲಿ ನಾನು ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷನಾಗಿದ್ದೆ. ಕೇರಳದ ಸಂಘ ಪರಿವಾರದ ನಾಯಕರು ಗೌರವಿಸುವ ಹಿರಿಯ ನಾಯಕರೊಬ್ಬರು ನನಗೆ ಕರೆ ಮಾಡಿ ಜಿಜಿ ಥಾಮ್ಸನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಹೇಳಿದರು. ಥಾಮ್ಸನ್ ಅವರು ನಮ್ಮೊಂದಿಗೆ ಬರಲು ಆಸಕ್ತಿ ಹೊಂದಿದ್ದಾರೆ ಎಂದು ಅವರು ನನಗೆ ತಿಳಿಸಿದ್ದರು. ನಂತರ ತಾವು ಆಹ್ವಾನಿಸಿದಂತೆ ಥಾಮ್ಸನ್ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು ಎಂದು ಜೋಸೆಫ್ ಹೇಳಿದ್ದಾರೆ.
ಇದನ್ನೂ ಓದಿ:12 ಸಿಎಂ vs ರಾಹುಲ್ ಗಾಂಧಿ!...ಬಿಜೆಪಿಯ ಈ ತಂತ್ರಗಾರಿಕೆ ಹಿಂದಿನ ಉದ್ದೇಶವೇನು..? | Election Commission
ಅಷ್ಟೇ ಅಲ್ಲದೆ, ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಥಾಮ್ಸನ್ ಅವರನ್ನು ಕೇಂದ್ರ ಸರ್ಕಾರದ ಸ್ವಾಮ್ಯದ ಕೊಚ್ಚಿನ್ ಶಿಪ್‌ಯಾರ್ಡ್‌ನ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಅವರು 2017 ರಿಂದ 2020 ರವರೆಗೆ ಆ ಹುದ್ದೆಯಲ್ಲಿದ್ದರು ಎಂದು ಜೋಸೆಫ್ ತಿಳಿಸಿದ್ದಾರೆ. ಥಾಮ್ಸನ್ ಇದಕ್ಕಿಂತಲೂ ದೊಡ್ಡ ಹುದ್ದೆಯನ್ನು ನಿರೀಕ್ಷಿಸಿದ್ದರು ಎಂಬ ಸಂಶಯ ನನಗಿದೆ ಎಂದಿರುವ ಜೋಸೆಫ್, ತಮ್ಮ ಪೋಸ್ಟ್‌ನ ಕೊನೆಯಲ್ಲಿ ಥಾಮ್ಸನ್ಗೆ ಸಿಗದ ದ್ರಾಕ್ಷಿ ಹುಳಿ ಎಂದು ಟಾಂಗ್ ನೀಡಿದ್ದಾರೆ.
ಜೋಸೆಫ್ ಅವರ ಈ ಆರೋಪಗಳಿಗೆ ಜಿಜಿ ಥಾಮ್ಸನ್ ಅವರಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಜೆಪಿಯ ಆಫರ್ ಕುರಿತು ಥಾಮ್ಸನ್ ನೀಡಿದ್ದ ಹೇಳಿಕೆ ಹಾಗೂ ಅದರ ನಂತರ ಉಂಟಾದ ರಾಜಕೀಯ ಕಾಳಗದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ, ಹೊಸ ಮತದಾರರ ನಮೂನೆಗಳಲ್ಲಿನ ಬದಲಾವಣೆ ಹಾಗೂ ಮತದಾರರ ಡೇಟಾ ಲಭ್ಯತೆಯ ಕುರಿತು ಮೂವರ ಸದಸ್ಯರ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂಬ ವರದಿಗಳ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಥಾಮ್ಸನ್ ಹೇಳಿಕೆಯನ್ನು ಪ್ರಸ್ತಾಪಿಸಿ, ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
2016 ರಲ್ಲಿ ದೆಹಲಿಗೆ ಪ್ರಯಾಣಿಸುವಾಗ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪತ್ತನಂತಿಟ್ಟ ಕ್ಷೇತ್ರದಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ನನಗೆ ಸಲಹೆ ನೀಡಿದ್ದರು ಎಂದು ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್ ಗಂಭೀರ ಆರೋಪ ಮಾಡಿದ್ದರು. ತಾವು ಆ ಪ್ರಸ್ತಾಪವನ್ನು ತಕ್ಷಣವೇ ತಿರಸ್ಕರಿಸಿದ್ದಾಗಿ ತಿಳಿಸಿರುವ ಥಾಮ್ಸನ್, ಜ್ಞಾನೇಶ್ ಕುಮಾರ್ ಅವರ ಈ ನಡೆ ತಮಗೆ ಅಚ್ಚರಿ ತಂದಿತ್ತು ಎಂದಿದ್ದಾರೆ.
2019 ರ ಪತ್ತನಂತಿಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆಂಟೋ ಆಂಟೋನಿ ಗೆಲುವು ಸಾಧಿಸಿದರೆ, ಸಿಪಿಐ(ಎಂ)ನ ವೀಣಾ ಜಾರ್ಜ್ ಎರಡನೇ ಸ್ಥಾನ ಹಾಗೂ ಬಿಜೆಪಿಯ ಕೆ. ಸುರೇಂದ್ರನ್ ಮೂರನೇ ಸ್ಥಾನ ಪಡೆದಿದ್ದರು.(ಏಜೆನ್ಸೀಸ್).