
---Microsoft Clarity tracking tag-->

Election Commission: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿರುವ ಮತಕಳ್ಳತನದ ಆರೋಪಗಳಿಗೆ ತಿರುಗೇಟು ನೀಡಲು ಬಿಜೆಪಿ ದೊಡ್ಡ ಮಟ್ಟದಲ್ಲಿ ಕಾರ್ಯಪ್ರವೃತವಾಗಿದ್ದು, ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಇಂದು (ಸೋಮವಾರ. ಸೆ28) ನಡೆಸಲು ಉದ್ದೇಶಿಸಿರುವ ದೇಶವ್ಯಾಪಿ ಜಿಲ್ಲಾಮಟ್ಟದ ಪ್ರತಿಭಟನೆಗೆ ಒಂದು ದಿನ ಮುಂಚಿತವಾಗಿ, ಭಾನುವಾರ ಬಿಜೆಪಿ ತನ್ನ ಆಡಳಿತವಿರುವ ವಿವಿಧ ರಾಜ್ಯಗಳ 12ಕ್ಕೂ ಹೆಚ್ಚು ಮುಖ್ಯಮಂತ್ರಿಗಳನ್ನು ಏಕಕಾಲಕ್ಕೆ ತಮ್ಮ ತಮ್ಮ ರಾಜ್ಯಗಳಲ್ಲಿ ಮಾಧ್ಯಮಗೋಷ್ಠಿಗೆ ಇಳಿಸಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದೆ.
ಬಿಜೆಪಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ರಾಹುಲ್ ಗಾಂಧಿ ಹಾಗೂ ಇಂಡಿಯಾ ಒಕ್ಕೂಟವು ಯಾವುದೇ ಆಧಾರವಿಲ್ಲದೆ ಸ್ವಾಯತ್ತ ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಾಂವಿಧಾನಿಕ ಸಂಸ್ಥೆಗಳಿಗೆ ಮಸಿ ಬಳಿಯುವ ಮತ್ತು ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಆಳವಾದ ಸಂಚು ಇದರ ಹಿಂದೆ ಇದೆ ಎಂದು ಬಿಜೆಪಿ ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ಬಿಜೆಪಿ ಅಥವಾ ಎನ್‌ಡಿಎ ಸರ್ಕಾರವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕರು ಮಾಧ್ಯಮಗೋಷ್ಠಿ ನಡೆಸಿ ಜಂಟಿಯಾಗಿ ಪ್ರತಿಪಕ್ಷಗಳ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತ, ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ, ಕೊಂಚ ಪ್ರಕ್ಷುಬ್ಧವಾಗಿರುವ ಸಮುದ್ರದಲ್ಲಿ ಈಜುವುದು ನನಗೆ ಇಷ್ಟ. ಅದು ಕಷ್ಟಕರ ಸನ್ನಿವೇಶವೂ ಮತ್ತೊಂದು ರೀತಿಯ ಪ್ರಶಾಂತತೆ ಎಂಬುದನ್ನು ಕಲಿಸುತ್ತದೆ ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ 1,000 ಕ್ಕೂ ಹೆಚ್ಚು ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರೊಂದಿಗೆ ವರ್ಚುವಲ್ ಸಭೆ ನಡೆಸಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದೆ.
ಸಿಇಸಿ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಟವಾದ ನಂತರ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಆಯೋಗ, ಆಕ್ಷೇಪಣೆಗಳು ಕೇವಲ ಆಂತರಿಕ ಚರ್ಚೆಗಳ ಭಾಗವಾಗಿದ್ದು, ಅಂತಿಮ ನಿರ್ಧಾರಗಳನ್ನು ಆಯೋಗದ ನಿಯಮಾವಳಿಗಳ ಪ್ರಕಾರ ಸರ್ವಸಮ್ಮತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಈಗಾಗಲೇ ಎರಡು ಬಾರಿ ಸ್ಪಷ್ಟಪಡಿಸಿದೆ.
ಇದನ್ನೇ ಉಲ್ಲೇಖಿಸುತ್ತಿರುವ ಬಿಜೆಪಿ ನಾಯಕರು, ಮತ ಕಳ್ಳತನದ ಆರೋಪ ಸಂಪೂರ್ಣ ನಿರಾಧಾರ ಹಾಗೂ ರಾಜಕೀಯ ಪ್ರೇರಿತ ಎಂದಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿ, ದೇಶದಲ್ಲಿ ಯಾವುದೇ ಮತ ಕಳವಾಗಿಲ್ಲ, ರಾಹುಲ್ ಗಾಂಧಿಯವರ ಮತಿಯೇ ಕಳವಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ, ಬಿಹಾರದ ಸಾಮ್ರಾಟ್ ಚೌಧರಿ, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ, ದೆಹಲಿ ಸಿಎಂ ರೇಖಾ ಗುಪ್ತಾ, ಮಧ್ಯಪ್ರದೇಶದ ಮೋಹನ್ ಯಾದವ್ ಹಾಗೂ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರತಿಪಕ್ಷಗಳು ನಿರಂತರ ಚುನಾವಣಾ ಸೋಲುಗಳ ಭ್ರಮನಿರಸನದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ನಿಂದಿಸುತ್ತಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸುತ್ತಿದೆ ಎಂದು ಟೀಕಿಸಿದರು(ಏಜೆನ್ಸೀಸ್).