ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ಮೇಲೆ ಶಾಯಿ ದಾಳಿ
- ಜಾರ್ಖಂಡ್‌ನಲ್ಲಿ 14ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿ ಪ್ರತಿಭಟನೆ
- ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ಮೇಲೆ ಶಾಯಿ ದಾಳಿ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್!
ರಾಂಚಿ: ಜಾರ್ಖಂಡ್‌ನಲ್ಲಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಭಾರಿ ಅಕ್ರಮ ಮತ್ತು ಹಗರಣಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಆಕ್ರೋಶ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಪ್ರತಿಭಟನೆ 14ನೇ ದಿನ ತಲುಪಿದ್ದು, ಶುಕ್ರವಾರ (ಆ.7) ರಾಂಚಿಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ನೇಮಕಾತಿ ಪರೀಕ್ಷೆಗಳ ಅಕ್ರಮ ಖಂಡಿಸಿ ವಿಧಾನಸಭೆ ಚಲೋ ನಡೆಸುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ (Neha Bora Ink Attack) ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಕಪ್ಪು ಶಾಯಿ ಎರಚಿರುವ ಘಟನೆ ನಡೆದಿದೆ.
ಬಿರ್ಸಾ ಚೌಕ್ ಬಳಿ ನಡೆದ ಹೈಡ್ರಾಮಾ!
ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC CGL) ಪರೀಕ್ಷೆಗಳಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಳೆದ 14 ದಿನಗಳಿಂದ ನಿರಂತರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಐತಿಹಾಸಿಕ ಹೋರಾಟಕ್ಕೆ ಬೆಂಬಲ ಸೂಚಿಸಲು ನೇಹಾ ಬೋರಾ ರಾಂಚಿಗೆ ಆಗಮಿಸಿದ್ದರು.
ಎಡಪಕ್ಷಗಳ ವಿದ್ಯಾರ್ಥಿ ಸಂಘಟನೆಗಳಾದ AISA ಮತ್ತು AISF ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಾರ್ಖಂಡ್ ವಿಧಾನಸಭೆಯತ್ತ ಮೆರವಣಿಗೆ ಹೊರಟಿದ್ದರು. ಮಾರ್ಗಮಧ್ಯೆ ಬಿರ್ಸಾ ಚೌಕ್ ಬಳಿ ತಲುಪುತ್ತಿದ್ದಂತೆ, ಜನಸಂದಣಿಯಲ್ಲಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನೇಹಾ ಬೋರಾ ಅವರ ಸಮೀಪಕ್ಕೆ ಬಂದು ಅವರ ಮುಖಕ್ಕೆ ಕಪ್ಪು ಶಾಯಿ ಎಸೆದಿದ್ದಾನೆ. ಅಲ್ಲದೆ, ಬೋರಾ ಅವರನ್ನು "ದೇಶ ವಿರೋಧಿ" ಹಾಗೂ ಉಮರ್ ಖಾಲಿದ್ ಬೆಂಬಲಿಗ ಎಂದು ಕೂಗಾಡಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಮತ್ತು ಪ್ರತಿಭಟನಾಕಾರರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ನಾನು ಇಂತಹ ದಾಳಿಗಳಿಗೆ ಹೆದರುವುದಿಲ್ಲ!
ಶಾಯಿ ದಾಳಿಯ ಬಳಿಕ ಮಾತನಾಡಿದ ನೇಹಾ ಬೋರಾ, ಸರ್ಕಾರದ ದಬ್ಬಾಳಿಕೆಗೆ ಹಾಗೂ ಇಂತಹ ಕೀಳುಮಟ್ಟದ ಕೃತ್ಯಗಳಿಗೆ ತಾವು ಎಂದಿಗೂ ಬೆದರುವುದಿಲ್ಲ ಎಂದು ಹೇಳಿದ್ದಾರೆ.
ನಾನು ದೆಹಲಿಯ ಜಂತರ್-ಮಂತರ್ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಲಾಠಿಚಾರ್ಜ್ ಹಾಗೂ ಪೆಲೆಟ್ ಗನ್ ದಾಳಿಯಂತಹ ಕಠಿಣ ಪರಿಸ್ಥಿತಿಗಳನ್ನೇ ಎದುರಿಸಿದ್ದೇನೆ. ಹಾಗಾಗಿ ಇಂತಹ ಶಾಯಿ ದಾಳಿಗಳಿಂದ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ.
ವಿದ್ಯಾರ್ಥಿಗಳು ಮತ್ತು ಯುವಕರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹಾಗೂ ಆರ್ಎಸ್ಎಸ್ ಗೂಂಡಾಗಳು ಈ ರೀತಿಯ ವರ್ತನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
14 ದಿನಗಳಿಂದ ಮುಂದುವರಿದಿರುವ ಉಪವಾಸ ಸತ್ಯಾಗ್ರಹ
ಮತ್ತೊಂದೆಡೆ, ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಉಗ್ರರೂಪ ತಾಳಿದೆ. ಜೆಜೆಕೆಎಂ ನಾಯಕ ದೇವೇಂದ್ರ ನಾಥ್ ಮಹ್ತೊ ಸೇರಿದಂತೆ ಆರು ಮಂದಿ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಚರ್ಚೆಗೆ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿಕೆ ನೀಡಿದ್ದರೂ, ತಮಗೆ ಇದುವರೆಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.
ಜುಲೈ 25 ರಂದು ಆರಂಭವಾದ ಈ ವಿದ್ಯಾರ್ಥಿ ಚಳವಳಿಯು ಈಗ ಜಾರ್ಖಂಡ್ ಇತಿಹಾಸದಲ್ಲೇ ಅತಿ ದೊಡ್ಡ ಪ್ರತಿಭಟನೆಯಾಗಿ ರೂಪುಗೊಂಡಿದೆ. ಪರೀಕ್ಷೆಗಳನ್ನು ಕೂಡಲೇ ರದ್ದುಗೊಳಿಸಿ ಮರುಪರೀಕ್ಷಾ ದಿನಾಂಕ ಘೋಷಿಸಬೇಕು ಎಂಬುದು ವಿದ್ಯಾರ್ಥಿಗಳ ಪಟ್ಟಾಗಿದ್ದು, ಈ ಹೈಡ್ರಾಮಾ ಮತ್ತು ಶಾಯಿ ದಾಳಿಯ ಘಟನೆಯು ಜಾರ್ಖಂಡ್ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ, (ಏಜನ್ಸೀಸ್).