Jharkhand JPSC-JSSC Stir, student hunger strike Ranchi 
ದೇಶ

Jharkhand JPSC-JSSC Stir; 14ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ, ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ

ಪ್ರಮುಖ ಮುಖ್ಯಾಂಶಗಳು

  • JPSC, JSSC ಪರೀಕ್ಷೆಯಲ್ಲಿ ಪ್ರತಿಭಟನೆ ಜುಲೈ 25ರಿಂದ ವಿದ್ಯಾರ್ಥಿಗಳಿಂದ ಪ್ರತಿಭಟನೆ.
  • ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಪೈಕಿ ಒಬ್ಬರ ಆರೋಗ್ಯದಲ್ಲಿ ಏರುಪೇರು.
  • ಪರೀಕ್ಷೆ ರದ್ದು ಹಾಗೂ ಸಿಬಿಐ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆಗೆ ಒತ್ತಾಯ.
ರಾಂಚಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ಘಟನೆ ಇಡೀ ದೇಶದಲ್ಲೇ ತಲ್ಲಣ ಸೃಷ್ಟಿಸಿತ್ತು. ಆ ಬೆನ್ನಲ್ಲೇ, ಜಾರ್ಖಂಡ್​​ನ ಸರ್ಕಾರಿ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮತ್ತೊಮ್ಮೆ ರಾಷ್ಟ್ರದ ಜನರ ಗಮನಸೆಳೆಯುವಂತೆ ಮಾಡಿದೆ.
ಹೌದು, 14ನೇ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ(JPSC) ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ(JSSC) ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಖಂಡಿಸಿ ವಿದ್ಯಾರ್ಥಿಗಳು ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ವಿದ್ಯಾರ್ಥಿಯೊಬ್ಬರು ಆರೋಗ್ಯ ಹದಗೆಟ್ಟ ಹಿನ್ನೆಲೆ, ಆ.7ರಂದು ಅವರನ್ನು ರಾಂಚಿಯ ಸ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಹುದ್ದೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಜುಲೈ 25ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಅತ್ಯಂತ ದೊಡ್ಡ ವಿದ್ಯಾರ್ಥಿ ನೇತೃತ್ವದ ಚಳುವಳಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ವಿದಾನಸಭೆಯತ್ತ ವಿದ್ಯಾರ್ಥಿಗಳು

14ನೇ ಜೆಪಿಎಸ್‌ಸಿ ಸಿವಿಲ್ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ವಿದ್ಯಾರ್ಥಿಗಳ ಸಂಘಟನೆಯು ಜಾರ್ಖಂಡ್​ ವಿಧಾನಸಭೆಯತ್ತ ಜಾಥಾ ಹಮ್ಮಿಕೊಂಡಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಪಕ್ಷ ನಾಯಕರಿಂದ ಪ್ರತಿಭಟನೆ

ಮುಂಗಾರು ಅಧಿವೇಶನದ ಮೊದಲ ದಿನ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ವಿದ್ಯಾರ್ಥಿಗಳ ಪರ ಹೋರಾಟ ನಡೆಸಿದರು. ವಿಧಾನಸಭೆ ಕಟ್ಟಡದ ಸುತ್ತಲಿನ 750 ಮೀಟರ್​ ವ್ಯಾಪ್ತಿಯಲ್ಲಿ ಆಗಸ್ಟ್​ 6ರಿಂದ ಆಗಸ್ಟ್​12ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಿಷೇಧವು ಮುಂಜಾನೆ 6ರಿಂದ ರಾತ್ರಿ10ರವರೆಗೂ ಇರಲಿದೆ.

ಸರ್ಕಾರದೊಂದಿಗೆ ಮುಕ್ತ ಮಾತುಕತೆಗೆ ಅವಕಾಶ

ಸರ್ಕಾರದೊಂದಿಗೆ ಈ ಬಗ್ಗೆ ಚರ್ಚೆ ನಡೆಸಲು ಮುಕ್ತ ಅವಕಾಶವನ್ನು ಸಿಎಂ ಹೇಮಂತ್​ ಸೂರೆನ್​ ಅವರು ಮಾಡಿಕೊಟ್ಟಿರುವ ಹಿನ್ನೆಲೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಗುರುವಾರ 11 ಸದಸ್ಯರ ನಿಯೋಗವನ್ನು ರಚಿಸಿದೆ. ಆದರೆ ಸಿಎಂ ಹೇಮಂತ್​ ಸೂರೆನ್​ ಅವರೊಂದಿಗೆ ನೇರ ಚರ್ಚೆ ಮಾಡಬೇಕು. ಬೇಡಿಕೆಗಳ ಕುರಿತು ಸಾರ್ವಜನಿಕ ಭರವಸೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ, (ಏಜೆನ್ಸೀಸ್).