ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ರದ್ದುಗೊಳಿಸಿ ಸಿಎಂ ಹೇಮಂತ್​ ಸೊರೆನ್​ ಘೋಷಣೆ 
ದೇಶ

ಜಾರ್ಖಂಡ್​​ ವಿದ್ಯಾರ್ಥಿಗಳಿಗೆ ಮಣಿದ ಸರ್ಕಾರ: JSSC-CGL ರದ್ದುಗೊಳಿಸಿ ಸಿಎಂ ಹೇಮಂತ್​ ಸೊರೆನ್​ ಘೋಷಣೆ; 24 ದಿನಗಳ ಪ್ರತಿಭಟನೆ ಯಶಸ್ವಿ! Jharkhand Student Protest

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗಾಕಾಂಕ್ಷಿಗಳ 24 ದಿನಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ
  • ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ರದ್ದುಗೊಳಿಸಿ ಸಿಎಂ ಹೇಮಂತ್​ ಸೊರೆನ್​ ಘೋಷಣೆ
  • 2014 ರಿಂದ ನಡೆದ ಪರೀಕ್ಷೆಗಳ ತನಿಖೆಗೆ ಆಗ್ರಹ; ಕಠಿಣ ಶಿಕ್ಷೆ ಪ್ರಕಟ
ರಾಂಚಿ: ಜಾರ್ಖಂಡ್​ನಲ್ಲಿ ಕಳೆದ 24 ದಿನಗಳಿಂದ ನಡೆಯುತ್ತಿದ್ದ ಉದ್ಯೋಗಾಕಾಂಕ್ಷಿಗಳ ನಿರಂತರ ಆಕ್ರೋಶ ಹಾಗೂ ಉಗ್ರ ಪ್ರತಿಭಟನೆ (Jharkhand Student Protest) ಗೆ ಅಂತಿಮವಾಗಿ ಜಾರ್ಖಂಡ್ ಸರ್ಕಾರ ಮಣಿದಿದೆ.
ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ಬಿಸಿ ಏರುತ್ತಿದ್ದಂತೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ವಿವಾದಕ್ಕೀಳಿದಿದ್ದ ಜೆಎಸ್‌ಎಸ್‌ಸಿ-ಸಿಜಿಎಲ್ (JSSC-CGL) ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ.

ಮಾತ್ರವಲ್ಲದೆ, 2014ರಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ನೇಮಕಾತಿ ಪರೀಕ್ಷೆಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

24 ದಿನಗಳ ಕಾಲ ಮುಂದುವರಿದ ಉಗ್ರ ಪ್ರತಿಭಟನೆ

ಜಾರ್ಖಂಡ್‌ನಲ್ಲಿ ಕಳೆದ 24 ದಿನಗಳಿಂದ ಸಾವಿರಾರು ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ರಸ್ತೆಗಿಳಿದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಪರೀಕ್ಷೆಯ ಒಟ್ಟು 135 ಪ್ರಶ್ನೆಗಳಲ್ಲಿ ಬರೋಬ್ಬರಿ 120 ಪ್ರಶ್ನೆಗಳು ಸೋರಿಕೆಯಾಗಿದ್ದವು ಎಂದು ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕೇವಲ ಪರೀಕ್ಷೆ ರದ್ದತಿಗೆ ಮಾತ್ರವಲ್ಲದೆ, ಜಾರ್ಖಂಡ್ ಲೋಕಸೇವಾ ಆಯೋಗ (JPSC) ಹಾಗೂ ಜೆಎಸ್‌ಎಸ್‌ಸಿ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತರಬೇಕು ಮತ್ತು ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು.


ಕಠಿಣ ಕಾನೂನು ಜಾರಿ ಹಾಗೂ ಸಿಐಡಿ ದಾಳಿ

ವಿದ್ಯಾರ್ಥಿಗಳ ಪ್ರತಿಭಟನೆಯ ಬೆನ್ನಲ್ಲೇ ಎಚ್ಚೆತ್ತ ಜಾರ್ಖಂಡ್ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ಪರೀಕ್ಷಾ ವಂಚನೆ ಮತ್ತು ಸಂಘಟಿತ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರದ ಹೊಸ ಕಠಿಣ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಸಿಎಂ ಸೊರೆನ್ ತಿಳಿಸಿದ್ದಾರೆ. ಈ ಹೊಸ ಕಾಯ್ದೆಯಡಿಯಲ್ಲಿ ತಪ್ಪು ಮಾಡಿದವರಿಗೆ ಬರೋಬ್ಬರಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಕೋಟಿ ರೂಪಾಯಿವರೆಗೆ ದಂಡ ವಿಧಿಸುವ ಕಠಿಣ ಅವಕಾಶವಿದೆ.

ಇದೇ ವೇಳೆ, ಪರೀಕ್ಷಾ ಅಕ್ರಮಗಳ ತನಿಖೆಯನ್ನು ಚುರುಕುಗೊಳಿಸಿರುವ ಜಾರ್ಖಂಡ್ ಸಿಐಡಿ (CID) ತಂಡವು, ರಾಜಧಾನಿ ರಾಂಚಿಯಲ್ಲಿರುವ ಜೆಎಸ್‌ಎಸ್‌ಸಿ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ. ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಇದುವರೆಗೆ ಮಾಜಿ ಜೆಪಿಎಸ್‌ಸಿ ಅಧ್ಯಕ್ಷ ಎಲ್. ಖಿಯಾಂಗ್ಟೆ ಸೇರಿದಂತೆ ಒಟ್ಟು 20 ಜನರನ್ನು ಬಂಧಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.


ಟಿಡಿಪಿಎಲ್ ಚಟುವಟಿಕೆ ರದ್ದು

ಮುಂದುವರಿದು ಮಾತನಾಡಿದ ಮುಖ್ಯಮಂತ್ರಿ ಹೇಮಂತ್ ಸೊರೆನ್, ಟಿಡಿಪಿಎಲ್ (TDPL) ಸಂಸ್ಥೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಸ್ಥೆ ನಡೆಸಿದ ಪರೀಕ್ಷೆಗಳು, ಪ್ರಕಟವಾದ ಫಲಿತಾಂಶಗಳು ಹಾಗೂ ಆಯ್ಕೆ ಪ್ರಕ್ರಿಯೆ ಸೇರಿದಂತೆ ಎಲ್ಲವನ್ನೂ ರದ್ದುಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಕಟ್ಟುನಿಟ್ಟಿನ ಹೊಣೆಗಾರಿಕೆಯನ್ನು ತರುವಂತೆ ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಐತಿಹಾಸಿಕ ಹೋರಾಟಕ್ಕೆ ತಾತ್ಕಾಲಿಕ ಯಶಸ್ಸು ಸಿಕ್ಕಂತಾಗಿದ್ದು, ಸರ್ಕಾರದ ಈ ದಿಟ್ಟ ಹೆಜ್ಜೆ ಮುಂಬರುವ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜನ್ಸೀಸ್​).