ಜಮ್ಮುವಿನ ಬನ್ ತಲಾಬ್ ಬಳಿ ದುರಸ್ತಿ ಕಾರ್ಯದ ವೇಳೆ ಹಳೆಯ ಸೇತುವೆ ಕುಸಿತ
- ಜಮ್ಮುವಿನ ಬನ್ ತಲಾಬ್ ಬಳಿ ದುರಸ್ತಿ ಕಾರ್ಯದ ವೇಳೆ ಹಳೆಯ ಸೇತುವೆ ಕುಸಿತ
- ಅವಶೇಷಗಳಡಿ ಸಿಲುಕಿದ ಆರು ಮಂದಿ!
- ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಜಮ್ಮು: ಶಾಂತವಾಗಿದ್ದ ಜಮ್ಮುವಿನ ಬನ್ ತಲಾಬ್ ಪ್ರದೇಶದಲ್ಲಿ ಶುಕ್ರವಾರ (ಮೇ.1) ಮಧ್ಯಾಹ್ನ ದಿಢೀರನೆ ಕೇಳಿಬಂದ ಆ ಶಬ್ದ ಅಲ್ಲಿನ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ವರ್ಷಗಳ ಹಳೆಯ ಸೇತುವೆಯೊಂದು ದುರಸ್ತಿ ಕಾರ್ಯ ನಡೆಯುತ್ತಿದ್ದಾಗಲೇ ಕುಸಿದು ಬಿದ್ದಿದ್ದು (Jammu Bridge Collapse), ಕಾಯಕದಲ್ಲಿದ್ದ ಕಾರ್ಮಿಕರ ಪಾಲಿಗೆ ಈ ಸೇತುವೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಏನಿದು ಘಟನೆ?
ಜಮ್ಮುವಿನ ಬನ್ ತಲಾಬ್ ಬಳಿ 2002 ರಲ್ಲಿ ನಿರ್ಮಾಣವಾಗಿದ್ದ ಹಳೆಯ ಸೇತುವೆಯೊಂದು ಇತ್ತೀಚೆಗೆ ಶಿಥಿಲಾವಸ್ಥೆಗೆ ತಲುಪಿತ್ತು. ಸೇತುವೆಯ ಅಡಿಪಾಯ ಶಿಥಿಲಗೊಂಡಿದ್ದರಿಂದ ಅದನ್ನು ಬಲಪಡಿಸಲು ಸರ್ಕಾರ ಟೆಂಡರ್ ನೀಡಿತ್ತು. ಅದರಂತೆ ಶುಕ್ರವಾರ (ಮೇ.1) ಕಾರ್ಮಿಕರು ಸೇತುವೆಯ ಕೆಳಭಾಗದಲ್ಲಿ ಅಡಿಪಾಯ ಗಟ್ಟಿಗೊಳಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ, ದುರಾದೃಷ್ಟವಶಾತ್ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ.
ಅವಶೇಷಗಳಡಿ ಸಿಲುಕಿದ ಆರು ಮಂದಿ!
ದುರಂತ ಸಂಭವಿಸಿದಾಗ ಸ್ಥಳದಲ್ಲಿ ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಣ್ಣು ಮುಚ್ಚಿ ಬಿಡುವುದರೊಳಗೆ ಸೇತುವೆಯ ಕಾಂಕ್ರೀಟ್ ರಾಶಿ ಅವರ ಮೇಲೆ ಬಿದ್ದಿದೆ. ಆರಂಭಿಕ ವರದಿಗಳ ಪ್ರಕಾರ, ಆರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಇಬ್ಬರು ಕಾರ್ಮಿಕರನ್ನು ಹೇಗೋ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇನ್ನುಳಿದ ನಾಲ್ವರು ಕಾರ್ಮಿಕರ ಸ್ಥಿತಿ ಈಗಲೂ ಅತಂತ್ರವಾಗಿದ್ದು, ಅವಶೇಷಗಳ ಅಡಿಯಲ್ಲೇ ಹೂತು ಹೋಗಿದ್ದಾರೆ.
ಸ್ಥಳಕ್ಕೆ ಧಾವಿಸಿದ NDRF ಮತ್ತು SDRF ತಂಡಗಳು
ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಜಿಪಿಎಸ್ ಮತ್ತು ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿವೆ. ಪ್ರಸ್ತುತ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಶಾಸಕ ಶಾಮ್ ಲಾಲ್ ಶರ್ಮಾ ಹೇಳಿದ್ದೇನು?
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಬಹಳ ಹಳೆಯ ಸೇತುವೆ, ಇದರ ಅಡಿಪಾಯ ಸಂಪೂರ್ಣವಾಗಿ ಹೊರಬಂದಿದ್ದರಿಂದ ದುರಸ್ತಿ ಕಾರ್ಯಕ್ಕೆ ಟೆಂಡರ್ ನೀಡಲಾಗಿತ್ತು. ಕೆಲಸಕ್ಕಾಗಿ ಅಗೆಯುವ ಕಾರ್ಯ ನಡೆದಿದೆ.
ಈ ವೇಳೆ ಸೇತುವೆಯ ಮೇಲ್ಭಾಗದಲ್ಲಿ ವಾಹನಗಳ ಸಂಚಾರದಿಂದ ಉಂಟಾದ ಕಂಪನವೇ ಈ ಕುಸಿತಕ್ಕೆ ಕಾರಣವಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಒಳಗಿರುವ ನಾಲ್ವರನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಅವರು ತಿಳಿಸಿದ್ದಾರೆ, (ಏಜನ್ಸೀಸ್).