ದೆಹಲಿ ಕಾರು ಸ್ಫೋಟದ ದೃಶ್ಯ ಮತ್ತು ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್
- ದೆಹಲಿ ಕಾರು ಸ್ಫೋಟ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬೆಳಕಿಗೆ
- ಭಾರತದಲ್ಲಿ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಂಚು
- ಉಗ್ರ ಸಂಘಟನೆ ನಿಧಿ ಸಂಗ್ರಹ ಮಾಡುತ್ತಿರುವುದು ಬಹಿರಂಗ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ( Delhi Blast ) ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಾಕಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಭಾರತದಲ್ಲಿ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಪ್ರಮುಖ ಉಗ್ರ ಸಂಘಟನೆಯೊಂದು ನಿಧಿ ಸಂಗ್ರಹ ಮಾಡುತ್ತಿರುವುದು ಬಹಿರಂಗವಾಗಿದೆ.
ದೆಹಲಿ ಸ್ಫೋಟದ ಹಿಂದೆ ಪಾಕಿಸ್ತಾನದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಇದೇ ಸಂಘಟನೆಗೆ ಸೇರಿದ ಅನೇಕ ಶಿಬಿರಗಳು ಹಾಗೂ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡದುರುಳಿಸಿತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಸ್ಫೋಟ ನಡೆದಿದೆ. ಅಲ್ಲದೆ, ಭಾರತದಲ್ಲಿ ಮತ್ತೊಂದು ದಾಳಿ ನಡೆಸಲು ಫಿದಾಯಿನ್ ಅಥವಾ ಆತ್ಮಾಹುತಿ ಗುಂಪನ್ನು ರಚಿಸಲು ಜೈಶ್ ಇ ಮೊಹಮ್ಮದ್ ಸಂಘಟನೆ ನಿಧಿ ಸಂಗ್ರಹ ಮಾಡುತ್ತಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಕೆಂಪು ಕೋಟೆ ಸ್ಫೋಟದ ತನಿಖೆಯ ಸಮಯದಲ್ಲಿ ಪತ್ತೆಯಾಗಿರುವ ಅನೇಕ ಸುಳಿವುಗಳ ಪ್ರಕಾರ, ಜೈಶ್ ನಾಯಕರು ಸದಾಪೇ ಎಂಬ ಪಾಕ್ ಅಪ್ಲಿಕೇಶನ್ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ನಿಧಿಸಂಗ್ರಹಣೆಗೆ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಘಟನೆ ಮಹಿಳೆಯರ ನೇತೃತ್ವದ ದಾಳಿಗೆ ಭಾರಿ ಸಂಚು ರೂಪಿಸುತ್ತಿರಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಅಂದಹಾಗೆ, ಜೈಶ್ ಈಗಾಗಲೇ 'ಮಹಿಳಾ ವಿಭಾಗ'ವನ್ನು ಹೊಂದಿದೆ. ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಾಗೂ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರಿ ಸಾದಿಯಾಗೆ ಮಹಿಳಾ ಘಟಕವನ್ನು ಮುನ್ನಡೆಸುವ ಜವಬ್ದಾರಿಯನ್ನು ನೀಡಲಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನೆ, ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದ ಬಹವಾಲ್ಪುರದಲ್ಲಿ ಜೆಇಎಂ ಶಿಬಿರಗಳನ್ನು ನಾಶಪಡಿಸಿದ ಬಳಿಕ ಮಹಿಳಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ದೆಹಲಿ ಸ್ಫೋಟದ ಪ್ರಮುಖ ಶಂಕಿತರಲ್ಲಿ ಒಬ್ಬಳಾದ ಡಾ. ಶಾಹಿನಾ ಸಯೀದ್, ಕಾರು ಸ್ಫೋಟಕ್ಕೆ ಹಣಕಾಸು ಒದಗಿಸಿರಬಹುದೆಂದು ಶಂಕಿಸಲಾಗಿದೆ. ಈಕೆ ಜಮಾತ್ ಉಲ್-ಮುಮಿನಾತ್ ಎಂದು ಕರೆಯಲ್ಪಡುವ ಮಹಿಳಾ ಘಟಕದ ಸದಸ್ಯೆ ಎಂದು ವರದಿಯಾಗಿದೆ. ಇನ್ನು ದೇಣಿಗೆಗೆ ಕರೆ ನೀಡಿರುವ ಜೈಶ್ ನಾಯಕರು, 'ಮುಜಾಹಿದ್' ಅಂದರೆ ಹೋರಾಟಗಾರನಿಗೆ ಚಳಿಗಾಲದ ಕಿಟ್ ಒದಗಿಸುವ ಯಾರನ್ನಾದರೂ 'ಜಿಹಾದಿ' ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ. ಅದೇ ರೀತಿ, 'ಜಿಹಾದಿ'ಯನ್ನು ಕೊಲ್ಲಲ್ಪಟ್ಟ ನಂತರ ಅವರ ಬಗ್ಗೆ ಕಾಳಜಿ ವಹಿಸುವ' ಯಾರನ್ನಾದರೂ 'ಜಿಹಾದಿ' ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಅಲ್ಲದೆ, 'ದೇಣಿಗೆ' ಮೊತ್ತವಾಗಿ 20,000 ಪಾಕಿಸ್ತಾನಿ ರೂಪಾಯಿಗಳು ಅಥವಾ ಸುಮಾರು 6,400 ರೂಪಾಯಿಗಳು ನೀಡುವಂತೆ ಡಿಮ್ಯಾಂಡ್ ಮಾಡಲಾಗಿದೆ. ಈ ಹಣವನ್ನು ಶೂಗಳು ಮತ್ತು ಉಣ್ಣೆಯ ಸಾಕ್ಸ್, ಹಾಸಿಗೆ, ಟೆಂಟ್‌ನಂತಹ ವಸ್ತುಗಳನ್ನು ಖರೀದಿಸಲು ಬಳಸಲಾಗುತ್ತದೆ ಎಂದು ಜೆಇಎಂ ಹೇಳಿರುವುದಾಗಿ ವರದಿಯಾಗಿದೆ, (ಏಜೆನ್ಸೀಸ್).