ದೇಶ

ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಜೈಲಿಗೆ ಹಾಕುವುದು ಹೇಡಿತನದ ಕೃತ್ಯ: ಮೊದಲ ಬಾರಿ ಸಿಜೆಪಿ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ| Rahul Gandhi

ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಬೆಂಬಲಕ್ಕೆ ನಿಂತಿದ್ದು, ಜಂತರ್ ಮಂತರ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಜೈಲಿಗೆ ಹಾಕುವುದು ಹೇಡಿತನದ ಕೃತ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಬೆಂಬಲಕ್ಕೆ ನಿಂತಿದ್ದು, ಜಂತರ್ ಮಂತರ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಜೈಲಿಗೆ ಹಾಕುವುದು ಹೇಡಿತನದ ಕೃತ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ(ಅ. 13) ನಿಷೇಧಿತ ಜಂತರ್​ ಮಂತರ್​ ಸ್ಥಳದ ಗೇಟ್ ಹಾರಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮತ್ತು ಇಂದು ಬೆಳಗ್ಗೆ ಇಬ್ಬರಿಗೂ ಮ್ಯಾಜಿಸ್ಟ್ರೇಟ್ ಐದು ದಿನಗಳ ಕಾಲ ನ್ಯಾಯಾಂಗ ಬಂಧನವನ್ನ ವಿಧಿಸಿವೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜವನ್ನು ಹಾರಿಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯ ಎಂದು ಕಿಡಿಕಾರಿದ್ದಾರೆ.

ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಮತ್ತು 'ಇಂಡಿಯಾ' ಒಕ್ಕೂಟ ಹೀಗೆ ವಿವಿಧ ವೇದಿಕೆಗಳಿದ್ದರೂ ಉದ್ದೇಶ ಮಾತ್ರ ಒಂದೇ. ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಆಗ್ರಹಿಸುವ ನಾಗರಿಕರ ಹೋರಾಟವಿದು. ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ನಾವು ಅದನ್ನು ಮರಳಿ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಸಿಜೆಪಿ ಸ್ಥಾಪನೆಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ರೂ ಇಲ್ಲಿಯವರೆಗೂ ಒಂದೇ ಒಂದು ದಿನ ಸಿಜೆಪಿಯನ್ನು ರಾಹುಲ್ ಗಾಂಧಿಯವರು ಬೆಂಬಲಿಸಿರಲಿಲ್ಲ. ಅದರ ಹೋರಾಟ ಮತ್ತು ಪ್ರತಿಭಟನೆಯಿಂದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಂತರ ಕಾಯ್ದುಕೊಂಡಿದ್ದರು.

ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ ದಿಪ್ಕೆ

ಸಿಜೆಪಿ ನಾಯಕರ ಬಂಧನವನ್ನು ಖಂಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಕಾಕ್ರೋಚ್ ಜನತಾ ಪಾರ್ಟಿ ನಾಯಕ ಅಭಿಜಿತ್ ದಿಪ್ಕೆ ಧನ್ಯವಾದ ಹೇಳಿದ್ದಾರೆ. ಎಕ್ಸ್​ನಲ್ಲಿ ರಾಹುಲ್ ಪೋಸ್ಟ್ ರಿಟ್ವೀಟ್ ಮಾಡಿರುವ ಅವರು, ಅಶುತೋಷ್ ಮತ್ತು ಸೌರವ್ ದಾಸ್ ಅವರ ಅಕ್ರಮ ಬಂಧನದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಇನ್ನೂ ರಾಹುಲ್ ಗಾಂಧಿ ಅಷ್ಟೇ ಅಲ್ಲದೇ ಇಂಡಿಯಾ ಕೂಟದ ಇತರೆ ನಾಯಕರು ಸಹ ಸಿಜೆಪಿ ನಾಯಕ ಬಂಧನವನ್ನು ಖಂಡಿಸಿದ್ದಾರೆ. ವಿಶೇಷವಾಗಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಸಹ ಬಂಧನ ಖಂಡಿಸಿದ್ದು, ಹೋರಾಟಗಾರರಿಗೆ ಕಾನೂನಿನ ಬೆಂಬಲ ನೀಡುವ ಭರವಸೆ ನೀಡಿದ್ದಾರೆ (ಏಜೆನ್ಸೀಸ್).