

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಚರ್ಚೆ ನಡೆಯುವಾಗಲೇ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ತಮ್ಮ ವಿರುದ್ಧ ಯಾವುದೇ ಮಾನಹಾನಿಕರಕ ವಿಷಯಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಕೋರಿ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ(ಅ. 14) ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಸಿದ್ದರಾಮಯ್ಯನವರ ಚಾರಿತ್ರ್ಯ ಹರಣ ಮಾಡುವ ಸಂಚು ನಡೆದಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ದೂರು ನೀಡಿದ್ದಾರೆ. ಹೀಗಾಗಿ ಬೇರೆ ಯಾರು ಮಾತನಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಯಾವುದೇ ವಿಷಯವಿದ್ದರೂ ಕಾನೂನಿನ ಪ್ರಕಾರ ತನಿಖೆ ಮಾಡಿ ಬಯಲಿಗೆ ತರಲು ಸಿದ್ದಾರಮಯ್ಯ ಸಾಹೇಬರು ಹೇಳಿದ್ದಾರೆ. ಅದನ್ನು ನಾವು ಮಾಡುತ್ತಿದ್ದೇವೆ. ಯಾರು ಸ್ಟಿಂಗ್ ಸ್ಟಿಂಗ್ ಅಂತಾ ನಿತ್ಯ ಮಾತಾಡ್ತಿದ್ದಾರೆ. ನನ್ನ ಪ್ರಕಾರ ಇದರ ಬಗ್ಗೆ ಅವರಿಗೆ ಹೆಚ್ಚು ಮಾಹಿತಿಯಿದೆ. ಸಮಯ ಸಂದರ್ಭ ಬಂದಾಗ ಅದನ್ನು ತಿಳಿಸುತ್ತೇನೆ ಎಂದಿದ್ದಾರೆ.
ರೇವಣ್ಣ ಕುಟುಂಬದಂತೆ ಸಿದ್ದರಾಮಣ್ಣನನ್ನು ಮುಗಿಸುವ ಕೆಲಸ ನಡೆದಿದೆ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿಯವರು ಕೇಂದ್ರದ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿ. ಅವರು ಈ ರೀತಿ ಕ್ಷುಲ್ಲಕ ವಾಗಿ ಮಾತಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
ರೇವಣ್ಣನವರ ಕುಟುಂಬದ ಬಗ್ಗೆ ನಾವು ಮಾತನಾಡಿದ್ದೇವಾ? ಸುಮ್ಮನೇ ಅಪಪ್ರಚಾರ ಮಾಡೋದು ಸರಿಯಲ್ಲ. ವೀಡಿಯೋಗಳನ್ನು ಕಾಂಗ್ರೆಸ್ನವರು ಮಾಡಿದ್ದಾ? ಅವರ ಕುಟುಂಬದಿಂದಲೇ ವಿಡಿಯೋಗಳು ಹೊರಬಂದಿವೆ. ರೇವಣ್ಣನವರ ಮಗ ಜೈಲಲ್ಲಿ ಇರೋದಕ್ಕೆ ಕಾಂಗ್ರೆಸ್ ಕಾರಣನಾ? ನಿಮ್ಮ ಮನೆ ಮಕ್ಕಳನ್ನು ಸರಿಯಾಗಿ ಬೆಳೆಸಿಲ್ಲ ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣನಾ? ಅವರ ವಿಕೃತ ಮನಸ್ಸಿಗೆ ಕಾಂಗ್ರೆಸ್ ಕಾರಣನಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಚಿಕೆ ಆಗಲ್ವಾ ಈ ರೀತಿ ಮಾತನಾಡೋಕ್ಕೆ, ಸ್ವಲ್ಪ ನಾಲಿಗೆ ಬಿಗಿ ಹಿಡಿದು ಮಾತಾಡೋದನ್ನು ಕಲಿಯಿರಿ. ಕಾಂಗ್ರೆಸ್ ಯಾವ ಕುಟುಂಬ ಗಳ ಮೇಲೂ ವ್ಯೆಯಕ್ತಿಕ ದ್ವೇಷ ತೋರಿಸಿಲ್ಲ, ತೋರಿಸೋದು ಇಲ್ಲ. ನಿಮ್ಮ ಮನೆಯ ಮಕ್ಕಳು ಮಾಡಿರೋ ಕೆಲಸ. ನಮ್ಮ ರಾಜಕೀಯ ಅಂತಹದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.