Omar Abdullah | ಸಾಕ್ಷಿ ಕೊಡಿ ಇಲ್ಲವೇ ಕ್ಷಮೆ ಕೇಳಿ!...ಆಪರೇಷನ್ ಕಮಲ ಆರೋಪ ಹೊರಿಸಿದ ಸಿಎಂ ಅಬ್ದುಲ್ಲಾಗೆ ಬಿಜೆಪಿ ಆಗ್ರಹ​ 
ದೇಶ

ಸಾಕ್ಷಿ ಕೊಡಿ ಇಲ್ಲವೇ ಕ್ಷಮೆ ಕೇಳಿ!...ಆಪರೇಷನ್ ಕಮಲ ಆರೋಪ ಹೊರಿಸಿದ ಸಿಎಂ ಅಬ್ದುಲ್ಲಾಗೆ ಬಿಜೆಪಿ ಆಗ್ರಹ​ | Omar Abdullah

Omar Abdullah: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶನಿವಾರ ಬಿಜೆಪಿ ವಿರುದ್ಧ ಆಪರೇಷನ್​ ಕಮಲದ ಗಂಭೀರ ಆರೋಪ ಮಾಡಿದ್ದು, ತಮ್ಮ ಶಾಸಕರಿಗೆ ಹಣದ ಆಮಿಷ ಒಡ್ಡಿ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದ್ದಾರೆ. ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಬಿಜೆಪಿಗೆ ನಂಟು ಹೊಂದಿರುವ ಸುಪ್ರೀಂ ಕೋರ್ಟ್ ವಕೀಲರೊಬ್ಬರು ತಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಹಣ ಮತ್ತು ಸಚಿವ ಸ್ಥಾನದ ಆಮಿಷಗಳು ಕೆಲಸ ಮಾಡದಿದ್ದಾಗ, ಬಿಜೆಪಿ ನಾಯಕರು ಬಾಗಿಲ ಹಿಂದೆ ನಿಂತು ನನ್ನ ಶಾಸಕರಿಗೆ ನಮ್ಮೊಂದಿಗೆ ಬನ್ನಿ, ನಾವು ನಿಮಗೆ ರಾಜ್ಯದ ಸ್ಥಾನಮಾನ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಜಮ್ಮುವಿನ ನಮ್ಮ ಶಾಸಕರೊಬ್ಬರು ನನಗೆ ತಿಳಿಸಿದ ವಿಷಯಕ್ಕೆ ದೇವರೇ ಸಾಕ್ಷಿ, ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ಬಿಜೆಪಿಯ ಪದಾಧಿಕಾರಿಯೊಬ್ಬರು ಅವರಿಗೆ 20 ರಿಂದ 30 ಕೋಟಿ ರೂಪಾಯಿ, ಮಂತ್ರಿ ಸ್ಥಾನ ಮತ್ತು ರಾಜ್ಯದ ದರ್ಜೆ ಕೊಡುವುದಾಗಿ ಹೇಳಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ ಎಂದು ಅಬ್ದುಲ್ಲಾ ಹೇಳಿದರು.

ಅಬ್ದುಲ್ಲಾ ಆರೋಪಕ್ಕೆ ಬಿಜೆಪಿ ತಿರುಗೇಟು

ಸಿಎಂ ಒಮರ್ ಅಬ್ದುಲ್ಲಾ ಅವರಿಗೆ ಈ ಆರೋಪಗಳನ್ನು ಸಾಬೀತುಪಡಿಸುವಂತೆ ಅಥವಾ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಬಿಜೆಪಿ ವಕ್ತಾರ ಹಾಗೂ ಶಾಸಕ ಆರ್ ಎಸ್ ಪಠಾನಿಯಾ ಒತ್ತಾಯಿಸಿದ್ದಾರೆ. ಅಬ್ದುಲ್ಲಾ ಅವರು ತಮ್ಮ ಸರ್ಕಾರದ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಆಮಿಷಕ್ಕೊಳಗಾಗಿದ್ದಾರೆ ಎನ್ನಲಾದ ಶಾಸಕರ ಹೆಸರುಗಳು, ಇದರಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರ ಹೆಸರು ಮತ್ತು ಈ ಆಮಿಷಗಳನ್ನು ಯಾವಾಗ ಮತ್ತು ಎಲ್ಲಿ ನೀಡಲಾಯಿತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಸವಾಲು ಹಾಕಿದರು.
ಇಷ್ಟೊಂದು ಗಂಭೀರವಾದ ಘಟನೆ ನಡೆದಿದ್ದರೆ, ಅದನ್ನು ತನಿಖಾ ಸಂಸ್ಥೆಗಳಿಗೆ ಏಕೆ ವರದಿ ಮಾಡಲಿಲ್ಲ..? ಚುನಾಯಿತ ಮುಖ್ಯಮಂತ್ರಿಯೊಬ್ಬರು ಅಧಿಕೃತ ತನಿಖಾ ಸಂಸ್ಥೆಗಳ ಮುಂದೆ ಸಾಕ್ಷ್ಯಾಧಾರಗಳನ್ನು ಇಡದೆ ಇಂತಹ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಪಠಾನಿಯಾ ಹೇಳಿದರು.

ಕ್ಷಮೆಯಾಚನೆಗೆ ಪಠಾನಿಯಾ ಆಗ್ರಹ

ಮುಖ್ಯಮಂತ್ರಿಗಳು ಸರ್ಕಾರದ ಕಾರ್ಯಕ್ಷಮತೆಯಿಂದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಶಾಸಕ ಪಠಾನಿಯಾ ಆರೋಪಿಸಿದ್ದು, ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ನ್ಯಾಷನಲ್ ಕಾನ್ಫರೆನ್ಸ್ ವಿಫಲವಾಗಿದೆ ಎಂದರು. ನ್ಯಾಷನಲ್ ಕಾನ್ಫರೆನ್ಸ್‌ಗೆ ಐದು ವರ್ಷಗಳ ಅಧಿಕಾರ ಸಿಕ್ಕಿದೆ, ಆದರೆ ಮೊದಲ ವರ್ಷದಲ್ಲೇ ಅವರ ಮುಖವಾಡ ಕಳಚಿಬಿದ್ದಿದೆ. ಅದು ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಮತ್ತು ಈ ಸರ್ಕಾರದ ಅವಧಿಯಲ್ಲಿ ವರ್ಗಾವಣೆ ದಂದೆ ಭರಪೂರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಅಬ್ದುಲ್ಲಾ ಅವರು ಸಾಕ್ಷಿಗಳನ್ನು ಒದಗಿಸಲು ಅಥವಾ ತಮ್ಮ ಆರೋಪಗಳನ್ನು ಹಿಂಪಡೆಯಲು ವಿಫಲವಾದರೆ ಬಿಜೆಪಿ ಕೋರ್ಟ್ ಮೆಟ್ಟಿಲೇರಲಿದೆ ಎಂದು ಪಠಾನಿಯಾ ಎಚ್ಚರಿಕೆ ನೀಡಿದ್ದಾರೆ. ಒಮರ್ ಅಬ್ದುಲ್ಲಾ ಕ್ಷಮೆಯಾಚಿಸಬೇಕು ಎಂಬುದು ನಮ್ಮ ಬಹಿರಂಗ ಬೇಡಿಕೆಯಾಗಿದೆ. ಅವರು ಹಾಗೆ ಮಾಡದಿದ್ದರೆ, ಜನರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ದಾರಿತಪ್ಪಿಸುವ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಬಿಜೆಪಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದೆ ಎಂದು ಬಿಜೆಪಿ ಶಾಸಕರು ತಿಳಿಸಿದರು(ಏಜೆನ್ಸೀಸ್​).