ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಸಿಕ್ಸರ್ ಸಿಡಿಸಿದಾಗ ಅಥವಾ ಪುಲ್ ಶಾಟ್ ಬಾರಿಸಿದಾಗ ನಾವು ಚಪ್ಪಾಳೆ ತಟ್ಟುತ್ತೇವೆ. ಆದರೆ, ಈ ಸ್ಟಾರ್ ಆಟಗಾರರು ಗಂಟೆಗೆ 150 ಕಿ.ಮೀ. ವೇಗದಲ್ಲಿ ಬರುವ ಎಸೆತಗಳನ್ನು ಅಷ್ಟೊಂದು ಸುಲಭವಾಗಿ ಎದುರಿಸಲು ಸಿದ್ಧಮಾಡುವ ಒಬ್ಬ 'ಅದೃಶ್ಯ ನಾಯಕ' ತೆರೆಯ ಹಿಂದೆ ಇದ್ದಾರೆ. ಅವರೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಘವೇಂದ್ರ ದ್ವಿವೇದಿ, ಪ್ರೀತಿಯಿಂದ ಎಲ್ಲರೂ ಕರೆಯುವ 'ರಘು'. ಇವರೇ ನೋಡಿ.
ಮನೆಯಿಂದ ಹೊರಬಂದಾಗ ಜೇಬಲ್ಲಿದ್ದಿದ್ದು 21 ರೂ, ಮಾತ್ರ!
ರಾಘವೇಂದ್ರ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಹುಚ್ಚು. ಆದರೆ ಓದಿನ ಕಡೆ ಗಮನ ಕೊಡಬೇಕೆಂದು ತಂದೆ ಬಯಸಿದ್ದರು. ಕ್ರಿಕೆಟ್ ಅಥವಾ ಮನೆ ಎಂಬ ಪ್ರಶ್ನೆ ಬಂದಾಗ, ರಾಘವೇಂದ್ರ ಆರಿಸಿಕೊಂಡಿದ್ದು ಕ್ರಿಕೆಟ್! ಕೇವಲ ಒಂದು ಬ್ಯಾಗ್ ಮತ್ತು ಜೇಬಿನಲ್ಲಿ 21 ರೂಪಾಯಿ ಇಟ್ಟುಕೊಂಡು ಮನೆ ಬಿಟ್ಟ ಇವರು, ಹುಬ್ಬಳ್ಳಿಯ ಬಸ್ ನಿಲ್ದಾಣ, ದೇವಸ್ಥಾನಗಳಲ್ಲಿ ದಿನ ಕಳೆದರು. ಒಂದು ಹಂತದಲ್ಲಿ ವಾಸಕ್ಕೆ ಜಾಗವಿಲ್ಲದೆ ಸ್ಮಶಾನದ ಪಾಳು ಬಿದ್ದ ಕಟ್ಟಡದಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಳೆದರು ಎಂದರೆ ಅವರ ಕಷ್ಟದ ದಿನಗಳು ಎಷ್ಟಿರಬಹುದು ಎಂದು ಊಹಿಸಿ.
ಕನಸು ನುಚ್ಚುನೂರು ಮಾಡಿದ ಆ ಒಂದು ಗಾಯ
ರಾಘವೇಂದ್ರ ಅವರ ಗುರಿ ಒಬ್ಬ ದೊಡ್ಡ ಕ್ರಿಕೆಟರ್ ಆಗುವುದಾಗಿತ್ತು. ಆದರೆ ವಿಧಿ ಆಟವೇ ಬೇರೆ ಇತ್ತು. ಅಭ್ಯಾಸದ ವೇಳೆ ಅವರ ಬಲಗೈ ಮೂಳೆ ಮುರಿತವಾಯಿತು (Fracture). ಒಬ್ಬ ಆಟಗಾರನಾಗಿ ಅವರ ಕೆರಿಯರ್ ಅಲ್ಲಿಗೇ ಅಂತ್ಯವಾಯಿತು. ಆದರೆ ಸೋಲೊಪ್ಪದ ರಘು, ಆಟಗಾರನಾಗಲು ಸಾಧ್ಯವಾಗದಿದ್ದರೆ ಏನಂತೆ, ಆಟಗಾರರನ್ನು ತಯಾರು ಮಾಡುವ ಕೆಲಸ ಮಾಡಬಾರದೇಕೆ ಎಂದು ನಿರ್ಧರಿಸಿದರು.
ಸ್ಮಶಾನದಿಂದ ವಿಶ್ವಕಪ್ ವೇದಿಕೆಯವರೆಗೆ!
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಯಾವುದೇ ಸಂಭಾವನೆ ಇಲ್ಲದೆ ಆಟಗಾರರಿಗೆ ಬಾಲ್ ಎಸೆಯುವ ಕೆಲಸ ಆರಂಭಿಸಿದರು. ಅವರ ವೇಗ ಮತ್ತು ನಿಖರತೆಯನ್ನು ನೋಡಿ ಖುದ್ದು ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದರು. ಸಚಿನ್ ಅವರ ಶಿಫಾರಸಿನ ಮೇರೆಗೆ 2011ರಲ್ಲಿ ಟೀಮ್ ಇಂಡಿಯಾದ 'ಥ್ರೋಡೌನ್ ಸ್ಪೆಷಲಿಸ್ಟ್' ಆಗಿ ರಘು ನೇಮಕಗೊಂಡರು.
ವಿರಾಟ್ ಕೊಹ್ಲಿ ಹೇಳುವಂತೆ: "ನೆಟ್ಸ್‌ನಲ್ಲಿ ನಾವು ರಘು ಎಸೆಯುವ 150 ಕಿ.ಮೀ ವೇಗದ ಬಾಲ್‌ಗಳನ್ನು ಎದುರಿಸುತ್ತೇವೆ. ಆ ಅಭ್ಯಾಸದಿಂದಾಗಿ ಮೈದಾನದಲ್ಲಿ ಅಂತರಾಷ್ಟ್ರೀಯ ವೇಗದ ಬೌಲರ್‌ಗಳ ಎಸೆತಗಳು ನಮಗೆ ಮೀಡಿಯಂ ಪೇಸರ್‌ನಂತೆ ಭಾಸವಾಗುತ್ತವೆ."
ಟೀಮ್ ಇಂಡಿಯಾದ 'ರಿಯಲ್ ಹೀರೋ'
2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ ಮತ್ತು ಬಾಂಗ್ಲಾದೇಶ ವಿರುದ್ಧದ ಸರಣಿ ಗೆದ್ದಾಗ, ರೋಹಿತ್ ಶರ್ಮಾ ಮತ್ತು ತಂಡದವರು ರಘು ಅವರನ್ನು ವೇದಿಕೆಗೆ ಕರೆದು ಟ್ರೋಫಿ ನೀಡಿ ಗೌರವಿಸಿದ್ದರು. ಒಬ್ಬ ಕನ್ನಡಿಗ ಇಂದು ಭಾರತದ ಬ್ಯಾಟಿಂಗ್ ಶಕ್ತಿಯ ಹಿಂದೆ ಶಕ್ತಿಯಾಗಿ ನಿಂತಿರುವುದು ಹೆಮ್ಮೆಯ ವಿಷಯ. ಅಲ್ಲದೆ, ಇದೀಗ 2026ರಲ್ಲಿ ಟಿ-20 ವಿಶ್ವಕಪ್ ಗೆಲ್ಲಲೂ ಪ್ರಮುಖವಾಗಿ ಇವರ ಹಿಂದಿನ ಶಕ್ತಿಯೇ ಕಾರಣ ಎಂದು ಖುದ್ದು ಆಟಗಾರರೇ ಶ್ಲಾಘನೇ ಮಾಡುತ್ತಿದ್ದಾರೆ,(ಏಜೆನ್ಸೀಸ್).