ಮುಂಬೈ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ 'ಬಿಲಾಂಗಿಂಗ್ ಎ ಜರ್ನಿ ಆಫ್ ಲವ್' ಪುಸ್ತಕವನ್ನು ವಿರೋಧಿಸುವ ಭರದಲ್ಲೇ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ನಾಯಕಿ ಶೈನಾ ಎನ್ಸಿ ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಫೋಟೋವನ್ನು ಹರಿದಿದ್ದು, ರಾಜಕೀಯ ವಿವಾದವನ್ನು ಹುಟ್ಟು ಹಾಕಿದೆ.
ಇನ್ನೂ ವಿವಾದವಾಗುತ್ತಿದ್ದಂತೆ ಶೈನ್ ಎನ್ಸಿ ಅವರನ್ನು ಕರೆಸಿಕೊಂಡಿದ್ದ ಪಕ್ಷದ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರು, ವಿವರವನ್ನು ಕೇಳಿದ್ದರು. ತಾವು ಹರಿದುಹಾಕಿದ್ದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರ ಫೋಟೋವನ್ನೇ ಹೊರತು, ಬಾಳಾಸಾಹೇಬ್ ಠಾಕ್ರೆ ಅವರದ್ದಲ್ಲ ಎಂದು ಶೈನಾ ಎನ್ಸಿ ಸ್ಪಷ್ಟನೆ ನೀಡಿದ್ದಾರೆ.
ಬಳಿಕ ಈ ಕುರಿತು ಮಾತನಾಡಿರುವ ಡಿಸಿಎಂ ಏಕನಾಥ್ ಶಿಂಧೆ ಅವರು, ಶೈನಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಬಾಳಾಸಾಹೇಬ್ ಠಾಕ್ರೆ ನಮ್ಮ ಆರಾಧ್ಯ ದೈವ. ನಮಗೆ ದೇವರಿಗೆ ಸಮಾನ. ನಾವು ಅವರ ಸಿದ್ಧಾಂತವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಅವರಿಗೆ ಮಾಡುವ ಯಾವುದೇ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ಯಾರಿಗೂ ಹಾಗೆ ಮಾಡಲು ಅವಕಾಶವಿಲ್ಲ ಎಂದಿದ್ದಾರೆ.
ಶೈನಾ ಎನ್ಸಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ವಿವಾದಕ್ಕೆ ಕಾರಣವಾದ ಆ ಫೋಟೋದಲ್ಲಿ ಬಾಳಾಸಾಹೇಬ್ ಠಾಕ್ರೆ ಇದ್ದಾರೆ. ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ಅವಮಾನಿಸಿದ್ದಕ್ಕಾಗಿ ಮಣಿ ಶಂಕರ್ ಅಯ್ಯರ್ ಅವರಿಗೆ ಚಪ್ಪಲಿಯಿಂದ ಹೊಡೆಯಲು ಬಾಳಾಸಾಹೇಬ್ ಠಾಕ್ರೆ ಒಮ್ಮೆ ಬೀದಿಗಿಳಿದಿದ್ದರು. ಆ ಫೋಟೋದಲ್ಲಿ ಹರಿದುಹೋಗಿರುವ ಭಾಗವು ಮಣಿ ಶಂಕರ್ ಅಯ್ಯರ್ ಅವರ ಮುಖವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬುಧವಾರ(ನ. 18) ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕದ ವಿತರಣೆಯನ್ನು ವಿರೋಧಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪ್ರತಿಭಟಿಸಿದ್ದು, ಪುಸ್ತಕದಲ್ಲಿ ವೀರ್ ಸಾವರ್ಕರ್ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿತ್ತು. ಮತ್ತು ಪಕ್ಷದ ನಾಯಕಿ ಶೈನಾ ಎನ್ ಸಿ, ಸಂಜಯ್ ನಿರುಪಮ್ ಹಾಗೂ ಆನಂದ್ ದುಬೆ ಸೇರಿದಂತೆ ಶಿವಸೇನೆ ನಾಯಕರು ಸುದ್ದಿಗೋಷ್ಠಿ ನಡೆಸಿ ಪುಸ್ತಕದ ಪುಟಗಳನ್ನು ಹರಿದು ಹಾಕಿದರು.
ಪುಸ್ತಕವನ್ನು ಹರಿದು ಹಾಕುವ ಭರದಲ್ಲಿ ಶಿವಸೇನಾ ನಾಯಕಿ ಶೈನಾ ಎನ್ ಸಿ ಅವರು, ಬಾಳ್ ಠಾಕ್ರೆ ಅವರಿದ್ದ ಛಾಯಾಚಿತ್ರವಿದ್ದ ಫೋಟೋವನ್ನು ಹರಿದುಹಾಕಿದರು. ಸಹೋದ್ಯೋಗಿ ಸಂಜಯ್ ನಿರುಪಮ್ ಅವರು ತಪ್ಪನ್ನು ಗಮನಕ್ಕೆ ತಂದ ಬಳಿಕ, ಶೈನಾ ಎನ್.ಸಿ. ಅವರು ಹರಿದಿದ್ದ ಛಾಯಾಚಿತ್ರವನ್ನು ತರಾತುರಿಯಲ್ಲಿ ಕಾಗದಗಳ ಅಡಿಯಲ್ಲಿ ಮರೆಮಾಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹರಿದ ಚಿತ್ರದಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರು ಕಾಂಗ್ರೆಸ್ನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬರುತ್ತದೆ. ಅದೇ ಫೋಟೋವನ್ನು ಹರಿದು ಹಾಕಲಾಗಿದೆ.
ಈ ಘಟನೆ ಕುರಿತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್, ಶೀವಸೇನಾ ಸ್ಥಾಪಕರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಶೈನಾ ಎನ್ ಸಿ ವಿರುದ್ಧ ವಾಗ್ದಾಳಿ ನಡೆಸಿವೆ. ಬಿಎಂಸಿಯಲ್ಲಿ ಯುಬಿಟಿ ಸೇನಾ ಕಾರ್ಪೊರೇಟರ್ಗಳು ಶೈನಾ ಎನ್.ಸಿ. ವಿರುದ್ಧ ಪ್ರತಿಭಟನೆ ನಡೆಸಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದರು (ಏಜೆನ್ಸೀಸ್).