ಬಿಹಾರದಲ್ಲಿ ನೀಟ್ ಪ್ರತಿಭಟನೆ ವೇಳೆ ಎಕೆ-47 ಬಳಕೆ
- ಬಿಹಾರದಲ್ಲಿ ನೀಟ್ ಪ್ರತಿಭಟನೆ ವೇಳೆ ಎಕೆ-47 ಬಳಕೆ
- ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದರು
- ನಾಲ್ಕು ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಲಾಗಿದೆ; ಯಾವುದೇ ಪ್ರತಿಭಟನಾಕಾರನಿಗೆ ಗುಂಡು ತಗುಲಿಲ್ಲ
- ಸುಪ್ರೀಂ ಕೋರ್ಟ್ಗೆ ಬಿಹಾರ್ ಸರ್ಕಾರ ಸ್ಪಷ್ಟನೆ
ನವದೆಹಲಿ: ಬಿಹಾರದ ಸಿವಾನ್ನಲ್ಲಿ ನೀಟ್ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಎಕೆ-47 ಬಂದೂಕನ್ನು ಪ್ರಯೋಗಿಸಿದ್ದು (AK47 Firing in NEET Protest), ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.
ಎಕೆ-47 ಬಳಕೆ ಬಗ್ಗೆ ಬಿಹಾರ್ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಪ್ರತಿಭಟನಾಕಾರರು ಪೊಲೀಸರನ್ನು ಸುತ್ತುವರಿದಿದ್ದ ಕಾರಣ ಅನಿವಾರ್ಯವಾಗಿ ಎಕೆ-47 ಬಂದೂಕನ್ನು ಉಪಯೋಗಿಸಬೇಕಾಯಿತೆಂದು ತಿಳಿಸಿದ್ದಾರೆ.
ಎಕೆ-47 ಗುಂಡು ಪ್ರತಿಭಟನಾಕಾರರಿಗೆ ತಗುಲಿಲ್ಲ!
ಬಿಹಾರದ ಸಿವಾನ್ನಲ್ಲಿ ನೀಟ್ ಪರೀಕ್ಷೆ ಅಕ್ರಮವನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆದಿತ್ತು. ಆದರೆ ಜೆಪಿ ಚೌಕ್ನಲ್ಲಿ ಈ ಹೋರಾಟ ಉದ್ವಿಗ್ನ ಸ್ಥಿತಿಗೆ ತಲುಪಿತ್ತು. ಪ್ರತಿಭಟನಾಕಾರರು ಪೊಲೀಸರನ್ನು ಸುತ್ತುವರಿಯುತ್ತಿದ್ದರು. ಹೀಗಾಗಿ ಗಾಳಿಯಲ್ಲಿ ನಾಲ್ಕು ಸುತ್ತು ಎಕೆ-47 ಗುಂಡುಗಳನ್ನು ಸಿಡಿಸಲಾಯಿತು ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿ ದಾಳಿಗೆ ಮುಂದಾದ ಹಿನ್ನಲೆ, ಸಿಬ್ಬಂದಿಯ ಜೀವ ರಕ್ಷಣೆಗಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಗುಂಡನ್ನು ಗಾಳಿಯಲ್ಲಿ ಹಾರಿಸಿದ್ದು, ಯಾವೊಬ್ಬ ಪ್ರತಿಭಟನಾಕಾರನಿಗೂ ಇದರಿಂದ ಯಾವುದೇ ಗಾಯ ಉಂಟಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಕಾನ್ಸ್ಟೆಬಲ್ ಸಸ್ಪೆಂಡ್; ತನಿಖೆ ಮುಂದುವರಿಕೆ!
ಈ ಘಟನೆ ವೇಳೆ ಎಕೆ-47 ಅನ್ನು ಪ್ರಯೋಗಿಸಿದ ಕಾನ್ಸ್ಟೆಬಲ್ ನನ್ನು ಬಿಹಾರ್ ಪೊಲೀಸ್ನಿಂದ ಸಸ್ಪೆಂಡ್ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಲಾಗಿದೆ.
ಎಕೆ- 47 ಇದೊಂದು ರೈಫಲ್ ಆಗಿದ್ದು, ಇದನ್ನು ಅತ್ಯಂತ ಕಠಿಣ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಬೇಕು. ಹೀಗೆ ಪ್ರತಿಭಟನೆ ಸಂದರ್ಭದಲ್ಲಿ ಇದರ ಪ್ರಯೋಗ ಸೂಕ್ತವಲ್ಲ ಎಂಬ ಕಾರಣದಿಂದ ಆ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಸಿಸಿಟಿವಿ ಫೂಟೆಜ್ ಸಲ್ಲಿಸಿ!
ಬಿಹಾರ್ ಸರ್ಕಾರದ ವಾದವನ್ನು ಆಲಿಸಿದ ಸುಪ್ರೀ ನ್ಯಾಯಪೀಠ, ಘಟನೆ ದಿನದ ಸಂಪೂರ್ಣ ಸಿಸಿಟಿವಿ ಫೂಟೆಜ್ ಅನ್ನು ಕಾಪಾಡಿಕೊಳ್ಳಿ ಹಾಗೂ ನ್ಯಾಯಪೀಠಕ್ಕೆ ಶೀಘ್ರದಲ್ಲಿಯೇ ಸಲ್ಲಿಸಬೇಕೆಂದು ನಿರ್ದೇಶನ ನೀಡಿದೆ. ಹಾಗೆಯೇ ಈ ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನಲೆ ಹೊಂದಿರದ ಅಪ್ರಾಪ್ತ ಬಾಲಕ/ಬಾಲಕಿಯರ ಮೇಲೆ ಪ್ರಕರಣ ದಾಖಲಿಸದಂತೆ ಸರ್ಕಾರಕ್ಕೆ ಆದೇಶಿಸಿದೆ, (ಏಜನ್ಸೀಸ್).