ರಾಹುಲ್ ಗಾಂಧಿ ವಿರುದ್ಧ ಗುಡುಗಿದ ಅಮಿತ್ ಶಾ
- ದೇಶದ ಮರ್ಯಾದೆ ತೆಗೆಯುವುದು ಕಾಂಗ್ರಸ್ಗೆ ಖಯಾಲಿಯಾಗಿದೆ
- ರಾಹುಲ್ ಗಾಂಧಿ ವಿರುದ್ಧ ಗುಡುಗಿದ ಅಮಿತ್ ಶಾ
- ಎಐ ಸಮಿತ್ ಹಾಗೂ ಸಂಸತ್ತಿನ ಹೊರಗೆ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಆಕ್ರೋಶ ವ್ಯಕ್ತ ಪಡಿಸಿದ ಗೃಹ ಸಚಿವ
ಅಸ್ಸಾಂ: ದೆಹಲಿಯಲ್ಲಿ ನಡೆದಿದ್ದ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ವಿವಾದಾತ್ಮಕ ಶರ್ಟ್‌ಲೆಸ್ ಪ್ರತಿಭಟನೆಯ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.
ರಾಹುಲ್ ಗಾಂಧಿ ಮೋದಿಯನ್ನು ವಿರೋಧಿಸುವ ಬದಲು ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಕೀಳಾಗಿ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅಸ್ಸಾಂ ಪ್ರವಾಸದಲ್ಲಿರುವ ಅಮಿತ್ ಶಾ, ರಾಹುಲ್ ಗಾಂಧಿ (Amit Shah on Rahul Gandhi) ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಮೆಟ್ಟಿಲು ಪ್ರತಿಭಟನೆಗೆ ಮೀಸಲಿಲ್ಲ!
ಸಂಸತ್ತಿನ ಹೊರಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಅಮಿತ್ ಶಾ ತೀವ್ರವಾಗಿ ಟೀಕಿಸಿದ್ದಾರೆ. ಸಂಸತ್ತು ಪ್ರಜಾಪ್ರಭುತ್ವದ ಒಂದು ಪವಿತ್ರ ಸ್ಥಾನ. ಅಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ ಅಲ್ಲಿ ಕುಳಿತು ಚಹಾ-ಪಕೋಡಾ ತಿನ್ನುತ್ತಿದ್ದರು. ರಾಜಕೀಯ ಪ್ರತಿಭಟನೆಗೆ ಸರಿಯಾದ ವೇದಿಕೆ ಇದೆ, ಆದರೆ ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯೇ? ಎಂದು ಶಾ ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನು ವಿರೋಧಿಸುವ ಭರದಲ್ಲಿ ರಾಹುಲ್ ಗಾಂಧಿ ದೇಶದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಶಾ ಆರೋಪಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಜಗತ್ತಿನ ಮುಂದೆ ಅವಮಾನಿಸುವ ಕೆಲಸವನ್ನು ರಾಹುಲ್ ಮಾಡುತ್ತಿದ್ದಾರೆ. ಇದನ್ನು ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ, ಎಂದು ಅವರು ಗುಡುಗಿದ್ದಾರೆ.
ಅಸ್ಸಾಂನಲ್ಲಿ ಅಭಿವೃದ್ಧಿ ಮಂತ್ರ
ರಾಜಕೀಯ ಟೀಕೆಗಳ ನಡುವೆಯೇ, ಅಸ್ಸಾಂನಲ್ಲಿ ಅಭಿವೃದ್ಧಿ ಕಾರ್ಯಗಳ ಅಬ್ಬರ ಜೋರಾಗಿದೆ. ಗುವಾಹಟಿಯಲ್ಲಿ ಸುಮಾರು 2,092 ಕೋಟಿ ರೂ. ಮೌಲ್ಯದ ಆರೋಗ್ಯ ಯೋಜನೆಗಳನ್ನು ಶಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಳೆಯ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಕಳೆದ 15 ವರ್ಷಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಆರೋಗ್ಯ ಬಜೆಟ್‌ನ ಹಣವನ್ನು ನಾಯಕರ ಕುಟುಂಬಗಳ ಆರ್ಥಿಕ ಆರೋಗ್ಯ ಸುಧಾರಿಸಲು ಬಳಸಿಕೊಳ್ಳಲಾಗಿತ್ತು. ಪ್ರತಿ ವರ್ಷ ಸುಮಾರು 150 ಕೋಟಿ ರೂ.ಗಳನ್ನು ಲೂಟಿ ಮಾಡಲಾಗುತ್ತಿತ್ತು, ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಈಗ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಅಸ್ಸಾಂನ್ನು ಆರೋಗ್ಯ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದೆ. ಇನ್ನು ಮುಂದೆ ರೋಗಿಗಳು ಚಿಕಿತ್ಸೆಗಾಗಿ ರಾಜ್ಯ ಬಿಟ್ಟು ಹೊರಗೆ ಹೋಗುವ ಅಗತ್ಯವಿಲ್ಲ, ಎಂದು ಶಾ ವಿಶ್ವಾಸ ನೀಡಿದ್ದಾರೆ.
ಆಸ್ಪತ್ರೆಗಳ ಸುರಿಮಳೆ
ಗುವಾಹಟಿಯ ಪ್ರಗ್ಜ್ಯೋತಿಷ್‌ಪುರ ವೈದ್ಯಕೀಯ ಕಾಲೇಜು ಸೇರಿದಂತೆ ಅನೇಕ ಹೊಸ ಆಸ್ಪತ್ರೆಗಳು ಮತ್ತು ಕ್ಯಾನ್ಸರ್ ಕೇಂದ್ರಗಳಿಗೆ ಶಾ ಅಡಿಪಾಯ ಹಾಕಿದರು. ಅಸ್ಸಾಂನ ಜನರ ಆರೋಗ್ಯದ ಬಗ್ಗೆ ಸರ್ಕಾರ ಎಷ್ಟು ಬದ್ಧವಾಗಿದೆ ಎಂಬುದನ್ನು ತೋರಿಸಲು ಅವರು ಪ್ರಯತ್ನಿಸಿದರು.
ಮುಂದಿನ ದಿನಗಳಲ್ಲಿ ಅಸ್ಸಾಂ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಮಿತ್ ಶಾ ಅವರ ಈ ಭೇಟಿ ಮತ್ತು ಟೀಕೆಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ ಶೀತಲ ಸಮರ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜನ್ಸೀಸ್).