Ishan Kishan | ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯ ಇಶಾನ್ ಕಿಶನ್ 
ದೇಶ

ಇಶಾನ್ ಕಿಶನ್‌ಗೆ ಎದುರಾಯ್ತು 'ವಿವಾದದ ಬೌನ್ಸರ್'.. ಪಾಕೆಟ್ ಡೈನಮೋ ಕೊಟ್ಟ ಚಾಣಾಕ್ಷ ಉತ್ತರವೇನು ಗೊತ್ತಾ..? | Ishan Kishan

ಪಟನಾ: ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯ ಇಶಾನ್ ಕಿಶನ್ (Ishan Kishan) ಮಂಗಳವಾರ ತಮ್ಮ ತವರು ನೆಲ ಪಟನಾಗೆ ಬಂದಿಳಿದಿದ್ದು, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಮಾಧ್ಯಮಗಳಿಂದ ಎದುರಾದ ಪ್ರಶ್ನೆಗೆ ಕಿಶನ್ ಅತ್ಯಂತ ಜಾಣ್ಮೆಯಿಂದ ಪ್ರತಿಕ್ರಿಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ವಿಶ್ವಕಪ್ ಟ್ರೋಫಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದ ವಿಚಾರವಾಗಿ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದು, ಪಟನಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಇದೇ ವಿಷಯವನ್ನು ಕೆದಕಿ ಕಿಶನ್ ಅವರಿಂದ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರು. ಈ ಪ್ರಶ್ನೆಗಳನ್ನು ನಯವಾಗಿ ಬದಿಗೊತ್ತಿದ ಕಿಶನ್, ವಿವಾದಕ್ಕಿಂತ ತಂಡದ ಐತಿಹಾಸಿಕ ಗೆಲುವೇ ಮುಖ್ಯ ಎಂದರು.
ನಾನು ಈಗಷ್ಟೇ ವಿಶ್ವಕಪ್ ಗೆದ್ದು ಬಂದಿದ್ದೇನೆ, ಆ ಸಂಭ್ರಮದಲ್ಲಿ ನಾನಿದ್ದೇನೆ. ದಯವಿಟ್ಟು ಗೆಲುವಿನ ಬಗ್ಗೆ ಒಳ್ಳೆಯ ಪ್ರಶ್ನೆಗಳನ್ನು ಕೇಳಿ. ಯಾರೋ ಏನೋ ಹೇಳಿದ್ದಕ್ಕೆ ಪ್ರತಿಕ್ರಿಯಿಸುವ ಅಗತ್ಯ ನನಗಿಲ್ಲ. ಈ ಗೆಲುವು ನಮಗೆ ಎಷ್ಟು ಖುಷಿ ತಂದಿದೆ ಎಂಬ ಬಗ್ಗೆ ಮಾತನಾಡೋಣ ಎನ್ನುವ ಮೂಲಕ ಕಿಶನ್ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟರು.

ಏನಿದು ವಿವಾದ..?

ಭಾರತ ತಂಡವು ವಿಶ್ವಕಪ್ ಗೆದ್ದ ಬಳಿಕ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ವಿಶ್ವಕಪ್ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ನಡೆಯನ್ನು ಪ್ರಶ್ನಿಸಿದ್ದ ಮಾಜಿ ಸಂಸದ ಮತ್ತು ಕ್ರಿಕೆಟಿಗ ಕೀರ್ತಿ ಆಜಾದ್, ವಿಶ್ವಕಪ್ ಗೆಲುವು 1.4 ಬಿಲಿಯನ್ ಭಾರತೀಯರಿಗೆ ಸೇರಿದ್ದು, ಕ್ರೀಡೆಯು ಯಾವುದೇ ನಿರ್ದಿಷ್ಟ ಧರ್ಮಕ್ಕಿಂತ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವ ಮೂಲಕ ಧಾರ್ಮಿಕ ಚರ್ಚೆಯನ್ನು ಹುಟ್ಟುಹಾಕಿದ್ದರು.

ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ಅಬ್ಬರ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ಭಾರತದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ತೋರಿದ ಆಕ್ರಮಣಕಾರಿ ಆಟ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿತ್ತು. ಕಿಶನ್ 9 ಪಂದ್ಯಗಳಲ್ಲಿ 35.22 ಸರಾಸರಿಯಲ್ಲಿ 193.29 ರ ಭೀಕರ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 317 ರನ್ ಸಿಡಿಸಿದರು. ಟೂರ್ನಿಯಲ್ಲಿ ಮೂರು ಸ್ಫೋಟಕ ಅರ್ಧಶತಕಗಳನ್ನು ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಫೈನಲ್‌ನಲ್ಲಿ ಮಿಂಚಿನ ಆಟ

ನ್ಯೂಜಿಲೆಂಡ್ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಿಶನ್ ತಮ್ಮ ನೈಜ ಶಕ್ತಿ ಪ್ರದರ್ಶಿಸಿದರು. ಕೇವಲ 25 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ಭಾರತವು 255 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ಆಗಿದೆ(ಏಜೆನ್ಸೀಸ್​).