E20 Petrol : ಸದ್ಯ ರಾಜ್ಯದಲ್ಲಿ ಎಥೆನಾಲ್ ಅಥವಾ ಇ20 ಪೆಟ್ರೋಲ್ನದ್ದೇ ಚರ್ಚೆ. ಪೆಟ್ರೋಲ್ನಲ್ಲಿ ಶೇ.20ರ ಬದಲು ಶೇ. 30ಕ್ಕೂ ಹೆಚ್ಚು ಎಥೆನಾಲ್ ಮಿಕ್ಸ್ ಆಗಿರುವುದು ಸ್ಯಾಂಪಲ್ನಲ್ಲಿ ಪತ್ತೆಯಾಗಿದೆ ಅಂತ ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದೇಶದಲ್ಲಿ ಇ20 ಪೆಟ್ರೋಲ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಕೇಳಿಬಂದ ಆರೋಪಕ್ಕೆ ಕೇರಳ ರಾಜ್ಯವು ಕೂಡ ಧ್ವನಿಗೂಡಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಕೂಡ ಸ್ಪಷ್ಟನೆ ನೀಡಿದ್ದು, ಇದೆಲ್ಲೆ ಆಧಾರರಹಿತ ಆರೋಪ ಎಂದು ಅಲ್ಲಗೆಳೆದಿದ್ದು, ಪೆಟ್ರೋಲ್ ಶೇ. 20ರಷ್ಟು ಮಾತ್ರ ಎಥೆನಾಲ್ ಇದೆ ಎಂದು ಸಮರ್ಥಿಸಿಕೊಂಡಿದೆ. ಹಾಗಾದರೆ, ಇ20 ಪೆಟ್ರೋಲ್ ವಾಹನಗಳಿಗೆ ಮಾರಕವೇ? ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಬೆರೆತರೆ ಅದು ವಾಹನದ ಇಂಜಿನ್ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರಬಹುದು? ಮೈಲೇಜ್ ಕಡಿಮೆಯಾಗುವುದೇ? ಹಳೆಯ ವಾಹನಗಳಿಗೆ ಇದು ನಿಜಕ್ಕೂ ಹಾನಿಕಾರಕವೇ ಎಂಬ ಸವಾರರ ತೀವ್ರ ಗೊಂದಲ ಮತ್ತು ಆತಂಕಗಳಿಗೆ ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ.
ಅಂದಹಾಗೆ, ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್ನಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಿತ 'ಇ-20 ಪೆಟ್ರೋಲ್' (E20 Petrol) ಬಳಕೆಯನ್ನು ಹೆಚ್ಚಿಸುತ್ತಿದೆ. ಆದರೆ, ಕೆಲವು ಸಮೀಕ್ಷೆಗಳ ಪ್ರಕಾರ ಈ ಇ20 ಪೆಟ್ರೋಲ್ ಹಳೆಯ ವಾಹನಗಳ ಮೈಲೇಜ್ ಅನ್ನು ಕಡಿಮೆ ಮಾಡುತ್ತಿರುವುದಲ್ಲದೆ, ಇಂಜಿನ್ ಭಾಗಗಳಿಗೂ ಹಾನಿ ಉಂಟುಮಾಡುತ್ತಿದೆ ಎಂಬ ವಿಷಯ ಹೊರಬಂದಿದೆ. ಇದರ ನಡುವೆ ಪೆಟ್ರೋಲ್ನಲ್ಲಿ ಶೇ. 30ಕ್ಕೂ ಅಧಿಕ ಎಥೆನಾಲ್ ಮಿಕ್ಸ್ ಆಗುತ್ತಿದೆ ಅನ್ನೋ ಆರೋಪ ವಾಹನ ಸವಾರರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಅಂದಹಾಗೆ, ನಮ್ಮ ದೇಶದ ರಸ್ತೆಗಳಲ್ಲಿ ಚಲಿಸುವ ಎಲ್ಲಾ ವಾಹನಗಳೂ ಒಂದೇ ರೀತಿಯ ಪೆಟ್ರೋಲ್ಗೆ ಪೂರಕವಾಗಿರುವುದಿಲ್ಲ, ಏಪ್ರಿಲ್ 2023 ಕ್ಕಿಂತ ಮೊದಲು ತಯಾರಾದ ಪೆಟ್ರೋಲ್ ವಾಹನಗಳು ಕೇವಲ ಇ10 (ಶೇ. 10 ರಷ್ಟು ಎಥೆನಾಲ್ ಮಿಶ್ರಣ) ಇಂಧನಕ್ಕೆ ಮಾತ್ರ ಹೊಂದಿಕೊಳ್ಳುತ್ತವೆ. ಕೇವಲ ಏಪ್ರಿಲ್ 2025 ರ ನಂತರ ಮಾರುಕಟ್ಟೆಗೆ ಬಂದಿರುವ ಹೊಸ ವಾಹನಗಳನ್ನು ಮಾತ್ರ ಈ ಇ20 ಪೆಟ್ರೋಲ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರಣದಿಂದಾಗಿ, ಸದ್ಯ ರಸ್ತೆಯಲ್ಲಿರುವ ಕೋಟ್ಯಂತರ ಹಳೆಯ ವಾಹನಗಳ ಮಾಲೀಕರು ಇ20 ಪೆಟ್ರೋಲ್ ಬಳಕೆಯಿಂದಾಗಿ ಸಾಕಷ್ಟು ತೊಂದರೆ ಹಾಗೂ ಆತಂಕ ಎದುರಿಸುವಂತಾಗಿದೆ.
ಲೋಕಲ್ಸರ್ಕಲ್ಸ್ (LocalCircles) ಎಂಬ ಸಂಸ್ಥೆ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಒಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಶೇ. 66 ರಷ್ಟು ವಾಹನ ಸವಾರರು 2023 ಕ್ಕಿಂತ ಮೊದಲು ತಯಾರಾದ ತಮ್ಮ ವಾಹನಗಳಲ್ಲಿ ಇ20 ಪೆಟ್ರೋಲ್ ಬಳಸಿದ ನಂತರ ಮೈಲೇಜ್ ಶೇ. 10 ಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯ ಪೆಟ್ರೋಲ್ಗೆ ಹೋಲಿಸಿದರೆ ಎಥೆನಾಲ್ನಲ್ಲಿ ಶಕ್ತಿ ಕಡಿಮೆ ಇರುತ್ತದೆ, ಹಾಗಾಗಿ ಅದೇ ಹಳೆಯ ದೂರವನ್ನು ಕ್ರಮಿಸಲು ವಾಹನಕ್ಕೆ ಹೆಚ್ಚಿನ ಇಂಧನ ಬೇಕಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಇ-20 ಪೆಟ್ರೋಲ್ ಕೇವಲ ಮೈಲೇಜ್ ಅನ್ನು ಕಡಿಮೆ ಮಾಡುತ್ತಿಲ್ಲ, ಬದಲಿಗೆ ವಾಹನಗಳ ರಿಪೇರಿ ವೆಚ್ಚವನ್ನೂ ಹೆಚ್ಚಿಸುತ್ತಿದೆ ಎಂಬ ಆರೋಪವಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 45 ರಷ್ಟು ಜನರು ಈ ಪೆಟ್ರೋಲ್ ಬಳಕೆಯಿಂದ ತಮ್ಮ ವಾಹನದ ಬಿಡಿಭಾಗಗಳು ಬೇಗನೆ ಸವೆಯುತ್ತಿವೆ ಎಂದು ಹೇಳಿದ್ದಾರೆ. ಹಳೆಯ ವಾಹನಗಳಲ್ಲಿರುವ ಇಂಧನ ಪೈಪ್ಗಳು, ರಬ್ಬರ್ ಸೀಲ್ಗಳು, ಗ್ಯಾಸ್ಕೆಟ್ಗಳು ಮತ್ತು ಫ್ಯುಯೆಲ್ ಪಂಪ್ಗಳನ್ನು ಎಥೆನಾಲ್ನ ತೀವ್ರತೆಯನ್ನು ತಡೆದುಕೊಳ್ಳುವಂತೆ ತಯಾರಿಸಿರುವುದಿಲ್ಲ, ಹಾಗಾಗಿ ಈ ಪೆಟ್ರೋಲ್ ಬಳಸುವುದರಿಂದ ಅವು ಬೇಗನೆ ಹಾಳಾಗಬಹುದು ಎಂದು ಆಟೋಮೊಬೈಲ್ ತಜ್ಞರು ಎಚ್ಚರಿಸಿದ್ದಾರೆ.
ಸಮೀಕ್ಷೆಯ ಪ್ರಕಾರ, ಕೇಂದ್ರ ಸರ್ಕಾರದ ಈ ಇ-20 ಪೆಟ್ರೋಲ್ ಕಡ್ಡಾಯಗೊಳಿಸುವ ನೀತಿಯ ಬಗ್ಗೆ ಹಲವು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಂದು ಜನರು ಎಥೆನಾಲ್ ಮಿಶ್ರಣವನ್ನು ಸಂಪೂರ್ಣವಾಗಿ ವಿರೋಧಿಸುತ್ತಿಲ್ಲ, ಬದಲಿಗೆ 2023 ಕ್ಕಿಂತ ಹಳೆಯ ವಾಹನಗಳನ್ನು ಹೊಂದಿರುವ ಗ್ರಾಹಕರಿಗೆ ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಮುಕ್ತ (E0) ಅಥವಾ ಕಡಿಮೆ ಎಥೆನಾಲ್ ಇರುವ (E10) ಪೆಟ್ರೋಲ್ ಆರಿಸಿಕೊಳ್ಳುವ ಮುಕ್ತ ಅವಕಾಶವನ್ನು ನೀಡಬೇಕು, ಅದಕ್ಕೆ ಬೆಲೆ ಕೊಂಚ ಹೆಚ್ಚಿದ್ದರೂ ಪರವಾಗಿಲ್ಲ ಎಂಬುದು ಸವಾರರ ಪ್ರಮುಖ ಬೇಡಿಕೆಯಾಗಿದೆ.
ಪರಿಸರವನ್ನು ರಕ್ಷಿಸುವ ಸರ್ಕಾರದ ಗುರಿ ಒಳ್ಳೆಯದೇ ಆಗಿದ್ದರೂ, ಹಳೆಯ ವಾಹನಗಳನ್ನು ಹೊಂದಿರುವ ಲಕ್ಷಾಂತರ ಜನರ ಸಂಕಷ್ಟಗಳನ್ನು ಸಹ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಒಂದು ವೇಳೆ ನಿಮ್ಮ ವಾಹನವು 2023 ಕ್ಕಿಂತ ಹಳೆಯ ಮಾಡೆಲ್ ಆಗಿದ್ದರೆ, ಪೆಟ್ರೋಲ್ ಬಳಸುವಾಗ ಕೊಂಚ ಜಾಗರೂಕರಾಗಿರುವುದು ಮತ್ತು ಸಮಯಕ್ಕೆ ಸರಿಯಾಗಿ ವಾಹನವನ್ನು ಸರ್ವಿಸ್ ಮಾಡಿಸುವುದು ಉತ್ತಮ.
ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಕೇವಲ ಮಾರ್ಗದರ್ಶನಕ್ಕಾಗಿ ಮಾತ್ರವಾಗಿದೆ, ನಿಮ್ಮ ವಾಹನಕ್ಕೆ ಯಾವ ಇಂಧನವು ಸುರಕ್ಷಿತವಾಗಿದೆ ಎಂಬುದನ್ನು ತಿಳಿದುಕೊಳ್ಳಲು ದಯವಿಟ್ಟು ನಿಮ್ಮ ವಾಹನದ ಮ್ಯಾನುಯಲ್ (ಕೈಪಿಡಿ) ಅಥವಾ ಕಂಪನಿಯ ಸರ್ವಿಸ್ ಸೆಂಟರ್ ಅನ್ನು ಸಂಪರ್ಕಿಸಿ, (ಏಜೆನ್ಸೀಸ್).