ಕಮಲ ಮುಡಿಸಿಕೊಂಡರೆ ತಮಿಳು ಮಣ್ಣಿನಲ್ಲಿ ಗೆಲುವು ಅಸಾಧ್ಯವೇ?: ದ್ರಾವಿಡ ಕೋಟೆ ಧ್ವಂಸಕ್ಕೆ ಸಿಂಗಂ ಮಾಸ್ಟರ್ ಪ್ಲಾನ್ ಏನು..?  
ದೇಶ

ಕಮಲ ಮುಡಿಸಿಕೊಂಡರೆ ತಮಿಳು ಮಣ್ಣಿನಲ್ಲಿ ಗೆಲುವು ಅಸಾಧ್ಯವೇ?: ದ್ರಾವಿಡ ಕೋಟೆ ಧ್ವಂಸಕ್ಕೆ ಸಿಂಗಂ ಮಾಸ್ಟರ್ ಪ್ಲಾನ್ ಏನು..? Annamalai

ಚೆನ್ನೈ: ತಮಿಳುನಾಡು ರಾಜಕೀಯ ರಂಗದಲ್ಲಿ ಈಗ ಅತ್ಯಂತ ಭೀಕರ ಹಾಗೂ ಹೈ-ವೋಲ್ಟೇಜ್ ರಾಜಕೀಯ ಬಿರುಗಾಳಿಯೊಂದು ಎದ್ದಿದೆ. ತಮಿಳುನಾಡು ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಕೆ. ಅಣ್ಣಾಮಲೈ(Annamalai) ಅವರು ಬಿಜೆಪಿಗೆ ಗುಡ್‌ಬೈ ಹೇಳಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ದ್ರಾವಿಡ ಸಿದ್ಧಾಂತದ ಮಣ್ಣಿನಲ್ಲಿ ತಮ್ಮದೇ ಆದ ಸ್ವತಂತ್ರ ಅಸ್ತಿತ್ವ ಕಂಡುಕೊಳ್ಳಲು ಕಮಲ ಪಕ್ಷವನ್ನು ತ್ಯಜಿಸುವುದೊಂದೇ ಅವರಿಗೆ ಉಳಿದಿರುವ ಏಕೈಕ ದಾರಿಯೇ ಎಂದು ಹೇಳಲಾಗುತ್ತಿದೆ. ಇಂತಹ ಹತ್ತಾರು ಸ್ಫೋಟಕ ಪ್ರಶ್ನೆಗಳು ಈಗ ಇಡೀ ದಕ್ಷಿಣ ಭಾರತದ ರಾಜಕಾರಣದಲ್ಲಿ ತೀವ್ರ ಸಸ್ಪೆನ್ಸ್ ಸೃಷ್ಟಿಸಿವೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸುತ್ತಿರುವ ಅಣ್ಣಾಮಲೈ, ಪ್ರಸ್ತುತ ತಮ್ಮ ರಾಜಕೀಯ ಜೀವನದ ಅತ್ಯಂತ ನಿರ್ಣಾಯಕ ತಿರುವಿನಲ್ಲಿ ನಿಂತಿದ್ದಾರೆ.

ರಾಷ್ಟ್ರೀಯತೆಯ ‘ಬ್ಯಾಗೇಜ್’ ಮತ್ತು ದ್ರಾವಿಡ ಸಿದ್ಧಾಂತದ ಘರ್ಷಣೆ!

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ವೈಯಕ್ತಿಕ ವರ್ಚಸ್ಸು, ಭ್ರಷ್ಟಾಚಾರದ ವಿರುದ್ಧದ ಆಕ್ರಮಣಕಾರಿ ಹೋರಾಟ ಮತ್ತು ರಾಜ್ಯಾದ್ಯಂತ ಅವರು ನಡೆಸಿದ ಭರ್ಜರಿ ಪಾದಯಾತ್ರೆಗಳು ತಮಿಳುನಾಡಿನ ಯುವಜನತೆಯನ್ನು ಆಕರ್ಷಿಸಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅವರ ಇಡೀ ರಾಜಕೀಯ ಬೆಳವಣಿಗೆಗೆ ದೊಡ್ಡ ತಡೆಯಾಗಿ ನಿಂತಿರುವುದು ಬಿಜೆಪಿಯ ಹಿಂದೂತ್ವ ಸಿದ್ಧಾಂತ ಮತ್ತು ತಮಿಳುನಾಡಿನ ಆಳವಾದ ದ್ರಾವಿಡ ಅಸ್ಮಿತೆಯ ನಡುವಿನ ಭೀಕರ ಘರ್ಷಣೆಯಾಗಿದೆ.
ತಮಿಳು ಮಣ್ಣಿನ ರಾಜಕಾರಣವು ಪ್ರಾದೇಶಿಕ ಸ್ವಾಯತ್ತತೆ, ಭಾಷಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಗಳ ಮೇಲೆ ಕಟ್ಟುನಿಟ್ಟಾಗಿ ನಿಂತಿದೆ. ಇದನ್ನು ರಾಷ್ಟ್ರೀಯ ಪಕ್ಷದ ಕೇಂದ್ರೀಕೃತ ಸಿದ್ಧಾಂತಗಳು ಒಪ್ಪಿಕೊಳ್ಳುವುದು ಕಷ್ಟ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ಅಣ್ಣಾಮಲೈ ಅವರನ್ನು ಹೊರಗಿನವರು ಎಂದು ಬಿಂಬಿಸಿ ಮೂಲೆಗುಂಪು ಮಾಡಲು ಯಶಸ್ವಿಯಾಗಿದ್ದಾರೆ. ಹೀಗಾಗಿ, ಬಿಜೆಪಿಯಿಂದ ಹೊರಬಂದರೆ ಮಾತ್ರ ಅಣ್ಣಾಮಲೈ ಅವರಿಗೆ ತಮಿಳುನಾಡಿನ ಮಣ್ಣಿನ ಮಗ ಎಂಬ ಪಕ್ಕಾ ಪ್ರಾದೇಶಿಕ ಮನ್ನಣೆ ಸಿಗಲು ಸಾಧ್ಯ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ದಳಪತಿ ವಿಜಯ್ ಹಾದಿಯಲ್ಲಿ ಅಣ್ಣಾಮಲೈ?; ಪ್ರಾದೇಶಿಕ ಬ್ರ್ಯಾಂಡಿಂಗ್ ರಣತಂತ್ರ!

ಬಿಜೆಪಿಯ ಚೌಕಟ್ಟಿನಿಂದ ಹೊರಬಂದರೆ ಅಣ್ಣಾಮಲೈ ಅವರಿಗೆ ತಮಿಳು ಸಬ್-ನ್ಯಾಷನಲಿಸಂ ಆಧಾರದ ಮೇಲೆ ಸ್ವತಂತ್ರ ಪ್ರಾದೇಶಿಕ ಗುರುತು ನಿರ್ಮಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತದೆ. ಇತ್ತೀಚೆಗಷ್ಟೇ ರಾಜಕೀಯಕ್ಕೆ ಧುಮುಕಿರುವ ನಟ ದಳಪತಿ ವಿಜಯ್ ಅವರ ಟಿವಿಕೆ ಅಥವಾ ಸೀಮನ್ ಅವರ ನಾಮ್ ತಮಿಳರ್ ಕಚ್ಚಿ (NTK) ಮಾದರಿಯಲ್ಲಿಯೇ ಅಣ್ಣಾಮಲೈ ಕೂಡ ಕ್ಲೀನ್-ಗವರ್ನೆನ್ಸ್ ಮತ್ತು ಆಡಳಿತಾತ್ಮಕ ಅನುಭವದ ಬ್ರ್ಯಾಂಡ್ ಮೇಲೆ ಹೊಸ ಪ್ರಾದೇಶಿಕ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಬಹುದು.
ದಿಲ್ಲಿ ನಾಯಕರ ಆಜ್ಞೆಗಳಿಗೆ ಕಾಯದೆ, ತಮಿಳುನಾಡಿನ ಸುಶಿಕ್ಷಿತ, ತಟಸ್ಥ ಹಾಗೂ ನಗರ ಪ್ರದೇಶದ ಮತದಾರರನ್ನು ಸೆಳೆಯಲು ಇದು ಅತ್ಯಂತ ಸೂಕ್ತ ರಣತಂತ್ರ. ಈ ಮತದಾರರು ಅಣ್ಣಾಮಲೈ ಅವರ ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾರಾದರೂ, ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದಿಂದಾಗಿ ಅವರ ವೋಟ್ ಬ್ಯಾಂಕ್‌ನಿಂದ ದೂರ ಉಳಿದಿದ್ದಾರೆ.

ಬಿಜೆಪಿ-ಎಐಎಡಿಎಂಕೆ ಬಿರುಕು ಮತ್ತು ಮೈತ್ರಿಕೂಟದ ಹೊಸ ಆಯಾಮ!

ಅಣ್ಣಾಮಲೈ ತಮಿಳುನಾಡು ಬಿಜೆಪಿ ಸಾರಥ್ಯ ವಹಿಸಿಕೊಂಡ ನಂತರ, ದ್ರಾವಿಡ ಪಕ್ಷಗಳ ವಿರುದ್ಧದ ಅವರ ಕಠಿಣ ನಿಲುವಿನಿಂದಾಗಿ ಬಿಜೆಪಿಯ ಹಳೇ ಮಿತ್ರಪಕ್ಷವಾದ ಎಐಎಡಿಎಂಕೆ ಜೊತೆಗಿನ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿತ್ತು. ಈಗ ಅಣ್ಣಾಮಲೈ ಬಿಜೆಪಿಯಿಂದ ಹೊರಬಂದು ಸ್ವತಂತ್ರ ಪ್ರಾದೇಶಿಕ ಶಕ್ತಿಯಾಗಿ ನಿಂತರೆ, ಹಳೇ ರಾಜಕೀಯ ಹಗೆತನ ಕೊನೆಗೊಳ್ಳಬಹುದು.
ರಾಜ್ಯದಲ್ಲಿ ಮೂರನೇ ರಂಗವನ್ನು ಮುನ್ನಡೆಸಲು ಅವರು ಅತ್ಯಂತ ನಮ್ಯ ನಾಯಕರಾಗಿ ಮೂಡಿಬರಬಹುದು. ಆಡಳಿತಾರೂಢ ಡಿಎಂಕೆ ವಿರುದ್ಧ ಇರುವ ಅಸಮಾಧಾನಿತ ಓಟ್‌ಗಳನ್ನು ಒಂದೇ ಸೂರಿನಡಿ ತರಲು ಮತ್ತು ಎಐಎಡಿಎಂಕೆಯೊಳಗಿನ ಭಿನ್ನಮತೀಯರನ್ನು ಸೆಳೆಯಲು ಅಣ್ಣಾಮಲೈಗೆ ಇದು ಪ್ರಚಂಡ ಅವಕಾಶ ನೀಡುತ್ತದೆ.
ರಾಷ್ಟ್ರೀಯ ಪಕ್ಷದ ಬಲಿಷ್ಠ ಸಾಂಸ್ಥಿಕ ಶಕ್ತಿಯನ್ನು ಕಳೆದುಕೊಳ್ಳುವುದು ತಾತ್ಕಾಲಿಕ ಹಿನ್ನಡೆಯಾಗಬಹುದಾದರೂ, ತಮಿಳುನಾಡಿನ ದ್ರಾವಿಡ ರಾಜಕೀಯದ ಯಥಾಸ್ಥಿತಿಯನ್ನು ಸವಾಲು ಹಾಕಲು ಅಣ್ಣಾಮಲೈಗೆ ಈ ಸ್ವತಂತ್ರ ಹಾದಿಯೇ ಅತಿ ದೊಡ್ಡ ಬ್ರಹ್ಮಾಸ್ತ್ರವಾಗುವ ಸಾಧ್ಯತೆ ದಟ್ಟವಾಗಿದೆ,(ಏಜೆನ್ಸೀಸ್​).