ದೀಪಾವಳಿ ಬೋನಸ್​ ಆಗಿ ಸಿಕ್ತು ಐಫೋನ್ 16 ಸ್ಮಾರ್ಟ್‌ಫೋನ್‌: ಕುಣಿದು ಕುಪ್ಪಳಿಸಿದ ಉದ್ಯೋಗಿಗಳು..! 
ದೇಶ

ದೀಪಾವಳಿ ಬೋನಸ್​ ಆಗಿ ಸಿಕ್ತು ಐಫೋನ್ 16 ಸ್ಮಾರ್ಟ್‌ಫೋನ್‌: ಕುಣಿದು ಕುಪ್ಪಳಿಸಿದ ಉದ್ಯೋಗಿಗಳು..! iPhone 16 Diwali Gift

ಕೇವಲ 16 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ, ಬಣ್ಣ-ಬಣ್ಣದ ರಿಬ್ಬನ್‌ಗಳಿಂದ ಅಲಂಕರಿಸಲ್ಪಟ್ಟ 16 ಐಫೋನ್‌ಗಳನ್ನು ಉದ್ಯೋಗಿಗಳ ಮೇಜಿನ ಮೇಲೆ ಸಾಲಾಗಿ ಜೋಡಿಸಿಟ್ಟಿರುವುದನ್ನು ಕಾಣಬಹುದು.

ನವದೆಹಲಿ: ದೀಪಾವಳಿ ಹಬ್ಬ ಬಂತೆಂದರೆ ಸಾಕು ನೌಕರರಿಗೆ ಸಾಮಾನ್ಯವಾಗಿ ಸ್ಟೀಟ್ಸ್​ ಪಾಕೆಟ್​, ಡ್ರೈ ಫ್ರೂಟ್ಸ್ ಅಥವಾ ದಿನಬಳಕೆಯ ಯಾವುದಾದರೂ ಸಣ್ಣ-ಪುಟ್ಟ ಉಡುಗೊರೆಗಳು ಸಿಗುವುದು ವಾಡಿಕೆ. ಅಲ್ಲದೆ, ಕೆಲವೆಡೆ ಅಲ್ಪ ಮೊತ್ತದ ಹಣ ಕೂಡ ಬೋನಸ್​ ಆಗಿ ಸಿಗುತ್ತದೆ. ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ನೀಡಿದ ದೀಪಾವಳಿ ಬೋನಸ್ ಹಾಗೂ ಗಿಫ್ಟ್ ನೋಡಿ ಇಡೀ ಸಾಮಾಜಿಕ ಜಾಲತಾಣವೇ ಬೆರಗಾಗಿದೆ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಈ ಕಂಪನಿಯು ಪ್ರತಿಯೊಬ್ಬರಿಗೂ ಕೇವಲ ಗಿಫ್ಟ್ ಹ್ಯಾಂಪರ್ ನೀಡದೆ, ದುಬಾರಿ ಐಫೋನ್ 16 ಸ್ಮಾರ್ಟ್‌ಫೋನ್‌ಗಳನ್ನು ( iPhone 16 Diwali Gift ) ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಐಫೋನ್ 16 ಸ್ಮಾರ್ಟ್‌ಫೋನ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಈ ವಿಶೇಷ ಕ್ಷಣದ ವಿಡಿಯೋವನ್ನು ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕೇವಲ 16 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ, ಬಣ್ಣ-ಬಣ್ಣದ ರಿಬ್ಬನ್‌ಗಳಿಂದ ಅಲಂಕರಿಸಲ್ಪಟ್ಟ 16 ಐಫೋನ್‌ಗಳನ್ನು ಉದ್ಯೋಗಿಗಳ ಮೇಜಿನ ಮೇಲೆ ಸಾಲಾಗಿ ಜೋಡಿಸಿಟ್ಟಿರುವುದನ್ನು ಕಾಣಬಹುದು. ಬಿಳಿ, ಹಸಿರು, ನೀಲಿ ಹಾಗೂ ಕಪ್ಪು ಬಣ್ಣಗಳ ಈ ದುಬಾರಿ ಫೋನ್‌ಗಳನ್ನು ಕಂಡ ತಕ್ಷಣ ಮಹಿಳಾ ಉದ್ಯೋಗಿಗಳು ಸಂತಸದಿಂದ ಕುಣಿದಾಡುವ ಹಾಗೂ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿದೆ.

ಸಾಮಾನ್ಯವಾಗಿ ದೀಪಾವಳಿಯ ಸಮಯದಲ್ಲಿ ಕಂಪನಿಗಳು ತಮ್ಮ ನೌಕರರಿಗೆ ಸೋನ್‌ಪಾಪ್ಡಿ (Sonpapdi) ಸ್ವೀಟ್​ ಬಾಕ್ಸ್​, ಪಾತ್ರೆಗಳು ಅಥವಾ ಕಡಿಮೆ ಬೆಲೆಯ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ, ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು, ಲಕ್ಷಾಂತರ ರೂಪಾಯಿ ಮೌಲ್ಯದ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಿದ ಈ ಕಂಪನಿಯ ಉದಾರತೆಗೆ ಸಾರ್ವಜನಿಕರು ಶಹಬ್ಬಾಸ್ ಎಂದಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಕಂಪನಿಯು, "ನಮಗೆ ಯಾರೂ ಸ್ಪರ್ಧೆಯಿಲ್ಲ, ನಿಮಗೆ ಈ ದೀಪಾವಳಿಗೆ ಏನು ಸಿಕ್ಕಿತು?" ಎಂಬ ಆಕರ್ಷಕ ಹಾಗೂ ತಮಾಷೆಯ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ಕಂಪನಿಯ ಈ ವಿಭಿನ್ನ ಉಡುಗೊರೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಇನ್ನೊಂದೆಡೆ ಕೆಲ ನೆಟ್ಟಿಗರು ಇದು ನಿಜವಾದ ಘಟನೆಯೇ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋವೇ ಎಂದು ಅನುಮಾನ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

ಈ ಅನುಮಾನಗಳಿಗೆ ತಕ್ಷಣವೇ ಸ್ಪಂದಿಸಿದ ಕಂಪನಿಯು, ನಗುವಿನ ಇಮೋಜಿಗಳೊಂದಿಗೆ ಕಮೆಂಟ್ ಮಾಡಿ, "ಇದು ಯಾವುದೇ ಎಐ (AI) ಸೃಷ್ಟಿಯಲ್ಲ, ಇದು ನೂರಕ್ಕೆ ನೂರರಷ್ಟು ನಿಜವಾದ ಘಟನೆ. ವಿಡಿಯೋವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿ" ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದೆ.

ಇನ್ನೂ ಈ ಪೋಸ್ಟ್‌ನ ಕೆಳಗೆ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಮ್ಮ ಕಂಪನಿಯಲ್ಲಿ ಒಂದು ಸೋನ್‌ಪಾಪ್ಡಿ ಬಾಕ್ಸ್​ ಕೂಡ ನೀಡಲಿಲ್ಲ" ಎಂದು ಅನೇಕರು ತಮ್ಮ ಬೇಸರ ತೋಡಿಕೊಂಡರೆ, ಇನ್ನು ಕೆಲವರು "ಈ ಕಂಪನಿಯಲ್ಲಿ ಕೆಲಸ ಪಡೆಯಲು ಏನು ಮಾಡಬೇಕು? ಪ್ರಸ್ತುತ ಯಾವುದಾದರೂ ಖಾಲಿ ಹುದ್ದೆಗಳು ಇವೆಯೇ?" ಎಂದು ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಉತ್ಸುಕತೆ ತೋರುತ್ತಿದ್ದಾರೆ, (ಏಜೆನ್ಸೀಸ್​).