ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣನ್ನು ಬೆಳೆದ ಭಾರತದ ರೈತ 
ದೇಶ

ಈ ಮಾವಿನ ಹಣ್ಣು ಕದಿಯಲು ಕಳ್ಳರ ಸ್ಕೆಚ್? ತೋಟದಲ್ಲೇ ಹಾಸಿಗೆ ಹಾಸಿ ಮಲಗುತ್ತಿದ್ದಾನೆ ಈ ರೈತ! ಯಾಕೆ ಗೊತ್ತಾ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​! Miyazaki Mango

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣನ್ನು ಬೆಳೆದ ಭಾರತದ ರೈತ
  • ಕೆ.ಜಿ ಗೆ 2 ಲಕ್ಷ ಬೆಲೆಯ ಮಿಯಾಜಾಕಿ ಬೆಳೆದ ಓಡಿಶಾದ ದೇಬಾ ಮಡ್ಕಾಮಿ
  • ಈ ಹಣ್ಣಿನ ಮೇಲೆ ಕಣ್ಣಿಟ್ಟಿರುವ ಕಳ್ಳರು; ಕಾವಲಿಗೆಂದು ತೋಟದಲ್ಲೇ ಮಲಗುತ್ತಿರುವ ದೇಬಾ
ಓಡಿಶಾ: ಬೇಸಿಗೆ ಬಂತೆಂದರೆ ಸಾಕು ಭಾರತದ ಪ್ರತಿ ಮನೆಯಲ್ಲಿ ಹಣ್ಣುಗಳ ರಾಜ ಮಾವಿನದ್ದೇ ಹವಾ. ಬಡವ, ಶ್ರೀಮಂತ ಎಂಬ ಯಾವುದೇ ಭೇದ-ಭಾವವಿಲ್ಲದ ಈ ಮಾವಿನ ಹಣ್ಣು ಒಂದು ಚೀಫ್​ (Cheap) ಪ್ರಾಡೆಕ್ಟ್ ಎಂಬ ಭಾವನೆ ನಿಮ್ಮಲಿದ್ದರೆ ಇಂದೇ ತೆಗೆದು ಹಾಕಿಬಿಡಿ. ಏಕೆಂದರೆ ಒಡಿಶಾದ ವ್ಯಕ್ತಿಯೊಬ್ಬ ಬೆಳೆದಿರುವ ಮಾವಿನ ಹಣ್ಣಿನ ಬೆಲೆಗೆ ಒಂದು ಬೈಕನ್ನೇ ಖರೀದಿಸಬಹುದು ಎಂದರೆ ನೀವು ನಂಬಲೇ ಬೇಕು.

ಕೆ.ಜಿ 2 ಲಕ್ಷ ಬೆಲೆಯ ಮಿಯಾಝಾಕಿ

ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಹೆಸರಾಗಿರುವ ಜಪಾನ್ ಮೂಲದ ಮಿಯಾಝಾಕಿ (Miyazaki Mango) ಈಗ ಈ ಹಣ್ಣನ್ನು ನಮ್ಮ ಭಾರತದ ಓಡಿಶಾದ ಮಲ್ಕಂಗಿರಿ ಜಿಲ್ಲೆಯ ನಿವಾಸಿ, ದೇಬಾ ಮಡ್ಕಾಮಿ ಎಂಬ ರೈತ ಬೆಳೆದಿದ್ದಾನೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾವಿನ ಹಣ್ಣಿನ ಬೆಲೆ ಪ್ರತಿ ಕಿಲೋಗ್ರಾಂಗೆ ಬರೋಬ್ಬರಿ 1.5 ಲಕ್ಷದಿಂದ 2 ಲಕ್ಷದವರೆಗೆ ಇದೆ. ಆದರೆ, ಈ ಲಕ್ಷ ರೂಪಾಯಿ ಮೌಲ್ಯದ ಮಾವು ಈಗ ಈ ರೈತನಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ಕೊಡುಗೆಯಾಗಿ ನೀಡಿದೆ.
ಏನಿದು ಮಿಯಾಝಾಕಿ ಮಾವಿನ ವಿಶೇಷ?
ಸಾಮಾನ್ಯವಾಗಿ ನಾವು ನೋಡುವ ಮಾವಿನ ಹಣ್ಣುಗಳು ಹಳದಿ ಅಥವಾ ಹಸಿರು ಬಣ್ಣದಲ್ಲಿರುತ್ತವೆ. ಆದರೆ ಈ ಮಿಯಾಝಾಕಿ ಮಾವುಗಳು ನೋಡಲು ಗಾಢ ಕೆಂಪು ಮತ್ತು ನೇರಳೆ ಬಣ್ಣವನ್ನು ಹೊಂದಿರುತ್ತವೆ. ಜಪಾನ್‌ನಲ್ಲಿ ಹುಟ್ಟಿ ಜಾಗತಿಕವಾಗಿ ಫೇಮಸ್ ಆಗಿರುವ ಈ ಮಾವು, ಈಗ ಒಡಿಶಾದ ಪುಟ್ಟ ಹಳ್ಳಿಯೊಂದರಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಈ ಅಪರೂಪದ ಹಣ್ಣಿನ ಸುವಾಸನೆ ಮತ್ತು ಅದರ ದಪ್ಪನೆಯ ಫಲ್ಫ್​ನ ಬಗ್ಗೆ ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಮಾವನ್ನು ಕಣ್ಣಾರೆ ನೋಡಲು ದೂರದೂರುಗಳಿಂದ ಜನ ದೇಬಾ ಅವರ ತೋಟಕ್ಕೆ ಲಗ್ಗೆ ಇಡುತ್ತಿದ್ದಾರೆ.

ಕಳ್ಳರ ಭಯ: ತೋಟದಲ್ಲೇ ಹಾಸಿಗೆ ಹಾಸಿದ ರೈತ!

ದೇಬಾ ಮಡ್ಕಾಮಿ ಅವರ ತೋಟದಲ್ಲಿ ಹಣ್ಣಾಗಿರುವ ಈ ಚಿನ್ನದಂತಹ ಮಾವುಗಳು ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.  ಲಕ್ಷಾಂತರ ರೂಪಾಯಿ ಮೌಲ್ಯದ ಈ ಹಣ್ಣುಗಳ ಮೇಲೆ ಕಣ್ಣಿಟ್ಟಿರುವ ಕಳ್ಳರಿಂದ ಬಚಾವಾಗುವುದೇ ದೊಡ್ಡ ಆತಂಕವಾಗಿ ಪರಿಣಮಿಸಿದೆ. 
ತನ್ನ ಬೆಲೆಬಾಳುವ ಬೆಳೆಯನ್ನು ರಕ್ಷಿಸಲು ದೇಬಾ ಬಳಿ ಯಾವುದೇ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳಾಗಲಿ ಅಥವಾ ಸೆಕ್ಯೂರಿಟಿ ಗಾರ್ಡ್‌ಗಳಾಗಲಿ ಇಲ್ಲ. ಹೀಗಾಗಿ, ಅವರು ಕಳೆದ ಕೆಲವು ವಾರಗಳಿಂದ ದೇಬಾ ತೋಟದ ಮಧ್ಯದಲ್ಲೇ ಹಾಸಿಗೆ ಹಾಸಿಕೊಂಡು, ತೆರೆದ ಆಕಾಶದ ಕೆಳಗೆ ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಗರಣೆ ಮಾಡುತ್ತಿದ್ದಾಗಿ ತಿಳಿದು ಬಂದಿದೆ. 

4 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಸವಾಲು

ದೇಬಾ ಅವರ ತೋಟದಲ್ಲಿ ಈ ಬಣ್ಣಗಳು ರಾತ್ರೋರಾತ್ರಿ ಮೂಡಿಬಂದಿಲ್ಲ. ಇದರ ಹಿಂದೆ ನಾಲ್ಕು ವರ್ಷಗಳ ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಕಥೆಯಿದೆ. ಸಮಾಜ ಸೇವಕ ಸರ್ಬಾ ಕುಮಾರ್ ಬಿಸೋಯಿ ಎಂಬುವವರು ಭುವನೇಶ್ವರದಿಂದ ಈ ಮಿಯಾಝಾಕಿ ತಳಿಯ ಕೆಲವು ಸಸಿಗಳನ್ನು ತಂದಿದ್ದರು. 
ಆದರೆ ಅವರಿಗೆ ನೆಡಲು ಜಾಗದ ಕೊರತೆಯಿದ್ದಿದ್ದರಿಂದ, ಅವರು ಆ ಸಸಿಗಳನ್ನು ರೈತ ದೇಬಾಗೆ ಹಸ್ತಾಂತರಿಸಿದರು. ದೇಬಾ ತಮ್ಮ ಮಕ್ಕಳಂತೆ ಶ್ರದ್ಧೆಯಿಂದ ಈ ಗಿಡಗಳನ್ನು ಪೋಷಿಸಿದ ಫಲವಾಗಿ ಈ ವರ್ಷ ಮರಗಳಲ್ಲಿ ಭರಪೂರ ಕಾಯಿಗಳು ಬಿಟ್ಟಿವೆ.
ಬೆಳೆಯನ್ನೇನೋ ಕಷ್ಟಪಟ್ಟು ಬೆಳೆದಿದ್ದಾರೆ, ಆದರೆ ಈಗ ದೇಬಾ ಅವರಿಗೆ ದೊಡ್ಡ ಸವಾಲಾಗಿರುವುದು ಇದರ ಮಾರಾಟ. ಸ್ಥಳೀಯ ಮಾರುಕಟ್ಟೆಯಲ್ಲಿ ಇಷ್ಟು ದುಬಾರಿ ಮಾವನ್ನು ಖರೀದಿಸುವ ಗ್ರಾಹಕರು ಸಿಗುವುದು ಅಸಾಧ್ಯ. ಹಾಗಾಗಿ ಈ ಮಾವಿನಹಣ್ಣುಗಳನ್ನು ಎಲ್ಲಿ ಮತ್ತು ಯಾರಿಗೆ ಮಾರಾಟ ಮಾಡಬೇಕೆಂಬ ಗೊಂದಲದಲ್ಲಿ ಅವರಿದ್ದಾರೆ. 
ಭವಿಷ್ಯದಲ್ಲಿ ಈ ಕೃಷಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಆಸೆ ಇವರಿಗಿದೆ. ಆದರೆ ಸೂಕ್ತ ಮಾರುಕಟ್ಟೆ ಮತ್ತು ತೋಟಕ್ಕೆ ಸೂಕ್ತ ಭದ್ರತೆ ಸಿಗುವವರೆಗೂ ಆತಂಕ ದೂರಾಗುವಂತೆ ಕಾಣುತ್ತಿಲ್ಲ ಎನ್ನುವುದು ದೇಬಾ ಅವರ ಮಾತಾಗಿದೆ, (ಏಜನ್ಸೀಸ್).