ಸುಳ್ಳು ಸುದ್ದಿಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ 10 ಪಾಯಿಂಟ್‌ಗಳ ಅಧಿಕೃತ ಸ್ಪಷ್ಟನೆ
- ಎಥೆನಾಲ್ ಮಿಶ್ರಿತ ಇ-20 ಪೆಟ್ರೋಲ್ ಕುರಿತು ಸೋಷಿಯಲ್ ಮೀಡಿಯಾ ಸುಳ್ಳು ಸುದ್ದಿ ಪ್ರಚಾರ
- ಸುಳ್ಳು ಸುದ್ದಿಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ 10 ಪಾಯಿಂಟ್‌ಗಳ ಅಧಿಕೃತ ಸ್ಪಷ್ಟನೆ
- ಕೇಂದ್ರ ಸರ್ಕಾರ ನೀಡಿದ ಕ್ಲಾರಿಫಿಕೇಶನ್ ಮತ್ತು ಇದರಿಂದ ದೇಶಕ್ಕಾದ ಬಿಗ್ ಬೆನಿಫಿಟ್ಸ್ ಇಲ್ಲಿದೆ
ನವದೆಹಲಿ: ಇತ್ತೀಚೆಗೆ ಸೋಷಿಯಲ್ ಮೀಡಿಯಾನ ವೇದಿಕೆಗಳನ್ನು ಪ್ರವೇಶಿಸಿದರೆ ಸಾಕು, ಪೆಟ್ರೋಲ್‌ಗೆ ಎಥೆನಾಲ್ ಮಿಕ್ಸ್ ಮಾಡ್ತಿರೋದ್ರಿಂದ ಗಾಡಿಗಳ ಎಂಜಿನ್ ಹಾಳಾಗ್ತಿದೆ, ಮೈಲೇಜ್ ಬರ್ತಿಲ್ಲ, ಪೆಟ್ರೋಲ್ ಟ್ಯಾಂಕ್‌ಗೆ ಇರುವೆ ಬರುತ್ತಿವೆ ಎನ್ನುವ ವಿಷಯಗಳು ಸಾಕಷ್ಟು ವೈರಲ್ ಆಗುತ್ತಿವೆ.
ಈ ಸುದ್ದಿಗಳಿಂದ ಜನರಲ್ಲಿ ಆತಂಕದ ವಾತಾವರಣ ಮನೆಮಾಡಿದ್ದು, ಈ ಆತಂಕವನ್ನು ದೂರಮಾಡಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇ-20 ಪೆಟ್ರೋಲ್ (Government Of India on E20 Petrol) ಬಗ್ಗೆ ಹತ್ತು ಪಾಯಿಂಟ್ಗಳಿರುವ ಬುಲೆಟಿನ್ ಬಿಡುಗಡೆ ಮಾಡಿದೆ.
1. ಒಂದು ಲೀಟರ್ ಎಥೆನಾಲ್‌ಗೆ 10,000 ಲೀಟರ್ ನೀರು ಬೇಕಾ?
ಒಂದು ಲೀಟರ್ ಎಥೆನಾಲ್ ಮಾಡಲು ಸಾವಿರಾರು ಲೀಟರ್ ನೀರು ಪೋಲಾಗುತ್ತೆ ಅನ್ನೋದು ಸುಳ್ಳು. ಈಗಿನ ಮಾಡರ್ನ್ ಡಿಸ್ಟಿಲರಿಗಳು ಕೇವಲ 3 ರಿಂದ 5 ಲೀಟರ್ ಸಂಸ್ಕರಿಸಿದ ನೀರನ್ನಷ್ಟೇ ಬಳಸುತ್ತಿವೆ. ಜೊತೆಗೆ, ಇವು ಝೀರೋ ಲಿಕ್ವಿಡ್ ಡಿಸ್ಚಾರ್ಜ್ ಸಿಸ್ಟಮ್ ಹೊಂದಿದ್ದು, ಬಳಸಿದ ನೀರನ್ನೇ ಮರುಬಳಕೆ ಮಾಡುತ್ತವೆ. ಇದರಲ್ಲಿ ಶೇ. 40 ಕ್ಕಿಂತ ಹೆಚ್ಚು ಕೊಡುಗೆ ನೀಡುವ ಮೆಕ್ಕೆಜೋಳಕ್ಕೆ ಭತ್ತಕ್ಕಿಂತ ತುಂಬಾ ಕಡಿಮೆ ನೀರು ಸಾಕು.
2. E20 ಅನ್ನೋದು ಯಾವುದೇ ಪ್ರಯೋಗವಲ್ಲ
ಭಾರತದಲ್ಲಿ ಇದನ್ನ ಏನೋ ಹೊಸದಾಗಿ ಟೆಸ್ಟ್ ಮಾಡ್ತಿಲ್ಲ. ಅಮೆರಿಕ, ಬ್ರೆಜಿಲ್, ಕೆನಡಾ, ಜಪಾನ್ ಮತ್ತು ಯುರೋಪಿಯನ್ ದೇಶಗಳಲ್ಲಿ ಕಳೆದ ದಶಕಗಳಿಂದಲೂ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನೇ ಯಶಸ್ವಿಯಾಗಿ ಬಳಸಲಾಗುತ್ತಿದೆ. ಇದು ಜಾಗತಿಕವಾಗಿ ಸಾಬೀತಾಗಿರುವ ತಂತ್ರಜ್ಞಾನ.
3. ಮೈಲೇಜ್ ಕಮ್ಮಿ ಆಗುತ್ತಾ?
ಭಾರತದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ (ARAI) ಕಾರ್‌ಗಳಲ್ಲಿ 40,000 ಕಿ.ಮೀ ಮತ್ತು ಬೈಕ್‌ಗಳಲ್ಲಿ 20,000 ಕಿ.ಮೀಗೂ ಹೆಚ್ಚು ದೂರ ಓಡಿಸಿ ಟೆಸ್ಟ್ ಮಾಡಿದೆ. ಇಂಧನ ದಕ್ಷತೆ ಅಥವಾ ಮೈಲೇಜ್‌ನಲ್ಲಿ ಕೇವಲ ಕನಿಷ್ಠ ಬದಲಾವಣೆ ಬಿಟ್ಟರೆ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ. ಇನ್ನು E20 ಗೆ ತಕ್ಕಂತೆ ರೆಡಿಯಾದ ಹೊಸ ಇಂಜಿನ್‌ಗಳಿಗೆ ಹೈ-ಆಕ್ಟೇನ್ ರೇಟಿಂಗ್ ಸಿಗೋದ್ರಿಂದ ಗಾಡಿ ಪರ್ಫಾರ್ಮೆನ್ಸ್ ಚೆನ್ನಾಗಿಯೇ ಇರಲಿದೆ.
4. ನಿಜವಾಗಿಯೂ ಎಂಜಿನ್ ಕರಗಿ ಹೋಗುತ್ತಾ?
ಇಂಡಿಯನ್ ಆಯಿಲ್, ಐಐಪಿ ಸೇರಿದಂತೆ ದೇಶದ ದೊಡ್ಡ ಸಂಸ್ಥೆಗಳು ಸಂಶೋಧನೆ ನಡೆಸಿವೆ. ಇವುಗಳಿಂದ ಲೋಹ ಅಥವಾ ಪ್ಲಾಸ್ಟಿಕ್ ಭಾಗಗಳಿಗೆ ಯಾವುದೇ ಹಾನಿ ಆಗಲ್ಲ ಅಂತ ಸ್ಪಷ್ಟಪಡಿಸಲಾಗಿದೆ. ಆದರೆ ಹಳೆಯ ಮಾಡೆಲ್ ವಾಹನಗಳಲ್ಲಿರುವ ಕೆಲವು ರಬ್ಬರ್ ಭಾಗಗಳನ್ನು ಸ್ವಲ್ಪ ಬೇಗ ಬದಲಾಯಿಸ ಬೇಕಾಗುತ್ತದೆ.
5. ವಾರಂಟಿ ಮತ್ತು ಇನ್ಶೂರೆನ್ಸ್ ಏನಾಗುತ್ತೆ?
ನಿಮ್ಮ ಗಾಡಿ E20 ಇಂಧನಕ್ಕೆ ಸಪೋರ್ಟ್ ಮಾಡುತ್ತೆ ಅಂತ ಕಂಪನಿ ಹೇಳಿದ್ದರೆ, ಈ ಪೆಟ್ರೋಲ್ ಹಾಕಿಸೋದ್ರಿಂದ ಗಾಡಿಯ ವಾರಂಟಿ ಅಥವಾ ಇನ್ಶೂರೆನ್ಸ್ ಕ್ಯಾನ್ಸಲ್ ಆಗಲ್ಲ ಅಂತ ಆಟೋಮೊಬೈಲ್ ಕಂಪನಿಗಳು ಮತ್ತು ವಿಮಾ ಸಂಸ್ಥೆಗಳೇ ಸ್ಪಷ್ಟಪಡಿಸಿವೆ.
6. ಇರುವೆ, ಜೇನುನೊಣಗಳು ಇಂಧನ ಟ್ಯಾಂಕ್‌ಗೆ ಮುತ್ತಿಕೊಳ್ಳುತ್ತವಾ?
ಎಥೆನಾಲ್ ಅಂದ ತಕ್ಷಣ ಅದರಲ್ಲಿ ಸಕ್ಕರೆ ಅಂಶ ಇರುತ್ತೆ, ಅದಕ್ಕೆ ಇರುವೆಗಳು ಪೆಟ್ರೋಲ್ ಟ್ಯಾಂಕ್‌ಗೆ ಮುತ್ತಿಡುತ್ತವೆ ಎನ್ನುವುದು ತೊಪ್ಪು ಕಲ್ಪನೆ. ಎಥೆನಾಲ್ ತಯಾರಿಸುವಾಗಲೇ ಅದರಲ್ಲಿರೋ ಸಕ್ಕರೆ ಅಂಶವನ್ನೆಲ್ಲ ಪೂರ್ತಿ ತೆಗೆಯಲಾಗುತ್ತದೆ ಮತ್ತು ಕೀಟಗಳು ಹತ್ತಿರ ಬರದಂತೆ ತಡೆಯುವ ಕೆಮಿಕಲ್‌ಗಳನ್ನು ಬಳಸಲಾಗಿರುತ್ತೆ.
7. ಸುಪ್ರೀಂ ಕೋರ್ಟ್ ಇದನ್ನ 'ಪ್ರಯೋಗ' ಅಂದಿತ್ತಾ?
ಸುಪ್ರೀಂ ಕೋರ್ಟ್ ಎಲ್ಲೂ ಈ ಯೋಜನೆಯನ್ನು ಪ್ರಯೋಗ ಎಂದು ಕರೆದಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿಗಳು ತಪ್ಪಾಗಿವೆ ಎಂದು ಸರ್ಕಾರದ ಅಟಾರ್ನಿ ಜನರಲ್ ಕಚೇರಿಯೇ ತಿಳಿಸಿದೆ. ಕೋರ್ಟ್‌ನಲ್ಲಿ ನಡೆದ ಚರ್ಚೆ ಎಥೆನಾಲ್ ಖರೀದಿಯ ಒಪ್ಪಂದದ ನಿಯಮಗಳ ಬಗ್ಗೆ ಇತ್ತೇ ಹೊರತು, ಎಥೆನಾಲ್ ಕ್ವಾಲಿಟಿ ಬಗ್ಗೆ ಅಲ್ಲ.
8. ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ನುಗ್ಗುತ್ತಾ?
ಎಥೆನಾಲ್ ಹವಾಮಾನದಲ್ಲಿರೋ ತೇವಾಂಶ ಅಥವಾ ನೀರನ್ನು ಹೀರಿಕೊಳ್ಳುತ್ತೆ ಅನ್ನೋ ಭಯ ಬೇಡ. ಇವತ್ತಿನ ಮಾಡರ್ನ್ ವಾಹನಗಳು ಮತ್ತು ಪೆಟ್ರೋಲ್ ಬಂಕ್‌ಗಳ ಮೂಲಸೌಕರ್ಯಗಳು ಇಂಧನ ಟ್ಯಾಂಕ್ ಒಳಗೆ ನೀರು ಹೋಗದಂತೆ ತಡೆಯುವ ಹೈಟೆಕ್ ಸೆಕ್ಯುರಿಟಿ ಸಿಸ್ಟಮ್ ಹೊಂದಿವೆ.
9. ಕಬ್ಬಿನ ರಸದ ವೈರಲ್ ವಿಡಿಯೋಗಳ ಅಸಲಿಯತ್ತೇನು?
ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ಕಬ್ಬಿನ ರಸವನ್ನೇ ಪೆಟ್ರೋಲ್ ಜೊತೆ ಮಿಕ್ಸ್ ಮಾಡ್ತಿದ್ದಾರೆ ಅಂತ ತೋರಿಸಿರೋ ವಿಡಿಯೋಗಳೆಲ್ಲ ನಕಲಿ. ಎಥೆನಾಲ್ ಅನ್ನು ಕಟ್ಟುನಿಟ್ಟಾದ ಇಂಡಸ್ಟ್ರಿಯಲ್ ಪ್ರೊಸೆಸ್ ಮತ್ತು ನಿಗದಿತ ಕ್ವಾಲಿಟಿ ಗೈಡ್‌ಲೈನ್ಸ್ ಮೂಲಕವೇ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ.
10. ಇದರಿಂದ ಪರಿಸರಕ್ಕೆ ಮತ್ತು ದೇಶಕ್ಕೆ ಏನು ಲಾಭ?
ಭಾರತ ನಿಗದಿಪಡಿಸಿಕೊಂಡಿದ್ದ ಗಡುವಿಗಿಂತ ಮುಂಚೆಯೇ ಅಂದರೆ ಡಿಸೆಂಬರ್ 2025ರಲ್ಲೇ ಪೆಟ್ರೋಲ್‌ನಲ್ಲಿ ಶೆ.20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಐತಿಹಾಸಿಕ ಗುರಿಯನ್ನು ತಲುಪಿದೆ. ದೇಶದ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಈಗ 2,000 ಕೋಟಿ ಲೀಟರ್‌ಗೆ ಏರಿಕೆಯಾಗಿದೆ.
ಇದರಿಂದ ದೇಶಕ್ಕಾದ ಲಾಭವೇನು?
ವಿದೇಶಿ ವಿನಿಮಯದಲ್ಲಿ ಬರೋಬ್ಬರಿ ರೂ. 1.9 ಲಕ್ಷ ಕೋಟಿಗೂ ಹೆಚ್ಚು ಹಣ ಉಳಿತಾಯವಾಗಿದೆ. ನಮ್ಮ ದೇಶದ ರೈತರಿಗೆ ರೂ. 1.6 ಲಕ್ಷ ಕೋಟಿಗೂ ಅಧಿಕ ಪಾವತಿ ಮಾಡಲಾಗಿದೆ. ಕಚ್ಚಾ ತೈಲ ಆಮದು ಸುಮಾರು 310 ಲಕ್ಷ ಮೆಟ್ರಿಕ್ ಟನ್ ಕಮ್ಮಿಯಾಗಿದೆ. ಪರಿಸರಕ್ಕೆ ಹಾನಿ ಮಾಡುವ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆ 930 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಿಡ್ಯೂಸ್ ಆಗಿದೆ ಎಂದು ಸಚಿವಾಲಯ ತಿಳಿಸಿದೆ, (ಏಜನ್ಸೀಸ್).