ಭಾರತಕ್ಕೆ ಧನ್ಯವಾದ ತಿಳಿಸಿದ ಇರಾನ್: ವಿಶ್ವಸಂಸ್ಥೆಯಲ್ಲಿ ಪ್ರಬಲ ಬೆಂಬಲಕ್ಕೆ ಶ್ಲಾಘನೆ 
ದೇಶ

ಭಾರತಕ್ಕೆ ಧನ್ಯವಾದ ತಿಳಿಸಿದ ಇರಾನ್: ವಿಶ್ವಸಂಸ್ಥೆಯಲ್ಲಿ ಪ್ರಬಲ ಬೆಂಬಲಕ್ಕೆ ಶ್ಲಾಘನೆ | India Stands With Iran

ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಇರಾನ್ ಪರವಾಗಿ ನಿಂತ ಭಾರತದ ನಿಲುವನ್ನು ಇರಾನ್ ಸರ್ಕಾರ(India Stands With Iran) ಮುಕ್ತಕಂಠದಿಂದ ಶ್ಲಾಘಿಸಿದೆ.
ಇರಾನ್ ವಿರುದ್ಧ ಮಂಡಿಸಲಾಗಿದ್ದ ರಾಜಕೀಯ ಪ್ರೇರಿತ ನಿರ್ಣಯವನ್ನು ಭಾರತ ವಿರೋಧಿಸಿ ಮತ ಚಲಾಯಿಸಿದ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಲಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಘಟನೆಯ ಹಿನ್ನೆಲೆ: 39ನೇ ವಿಶೇಷ ಅಧಿವೇಶನ

ಜಿನೀವಾದಲ್ಲಿ ನಡೆದ UNHRC 39ನೇ ವಿಶೇಷ ಅಧಿವೇಶನದಲ್ಲಿ ಇರಾನ್‌ನಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಹಾಗೂ ಪ್ರತಿಭಟನಾಕಾರರ ಮೇಲಿನ ದಬ್ಬಾಳಿಕೆಯನ್ನು ಖಂಡಿಸುವ ನಿರ್ಣಯವನ್ನು ಮಂಡಿಸಲಾಗಿತ್ತು.
ಮತದಾನದ ವಿವರ: ಈ ನಿರ್ಣಯದ ಪರವಾಗಿ 25 ರಾಷ್ಟ್ರಗಳು ಮತ ಚಲಾಯಿಸಿದರೆ, ಭಾರತ ಸೇರಿದಂತೆ 7 ರಾಷ್ಟ್ರಗಳು ಇದನ್ನು ವಿರೋಧಿಸಿ ಮತ ಚಲಾಯಿಸಿದವು. 14 ರಾಷ್ಟ್ರಗಳು ಮತದಾನದಿಂದ ದೂರವುಳಿದಿದ್ದವು.
ಭಾರತದ ನಿಲುವು: ಭಾರತವು ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಆಂತರಿಕ ವಿಚಾರಗಳಲ್ಲಿ ಬಾಹ್ಯ ಹಸ್ತಕ್ಷೇಪವನ್ನು ವಿರೋಧಿಸುವ ತನ್ನ ಹಳೆಯ ನೀತಿಗೆ ಬದ್ಧವಾಗಿ ಇರಾನ್ ಪರವಾಗಿ ಮತ ಚಲಾಯಿಸಿದೆ.

ಇರಾನ್ ರಾಯಭಾರಿಯ ಕೃತಜ್ಞತೆ

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಲಿ, ಭಾರತದ ನಿಲುವನ್ನು ಕೊಂಡಾಡಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ಗೆ ಭಾರತ ಸರ್ಕಾರ ನೀಡಿದ ತತ್ವಬದ್ಧ ಮತ್ತು ದೃಢವಾದ ಬೆಂಬಲಕ್ಕಾಗಿ ನಾನು ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ, ಅನ್ಯಾಯದ ಮತ್ತು ರಾಜಕೀಯ ಪ್ರೇರಿತ ನಿರ್ಣಯವನ್ನು ವಿರೋಧಿಸಿದ ಈ ಕ್ರಮವು ನ್ಯಾಯ, ಬಹುಪಕ್ಷೀಯತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ಬಗ್ಗೆ ಭಾರತಕ್ಕಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೊಹಮ್ಮದ್ ಫತಲಿ ಬರೆದಿದ್ದಾರೆ.

ರಾಜತಾಂತ್ರಿಕ ಮಹತ್ವ

ಭಾರತದ ಈ ನಡೆಯು ಕೇವಲ ಇರಾನ್ ಜೊತೆಗಿನ ಸ್ನೇಹಕ್ಕೆ ಸೀಮಿತವಾಗಿಲ್ಲ. ಚಾಬಹಾರ್ ಬಂದರು ಯೋಜನೆ ಮತ್ತು ಇಂಧನ ಭದ್ರತೆಯ ದೃಷ್ಟಿಯಿಂದ ಇರಾನ್ ಭಾರತಕ್ಕೆ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡದ ನಡುವೆಯೂ ಭಾರತವು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ ಎಂಬುದನ್ನು ಈ ಮತದಾನ ಮತ್ತೊಮ್ಮೆ ಸಾಬೀತುಪಡಿಸಿದೆ.
ಅದರೆ, ಇರಾನ್‌ನಲ್ಲಿನ ಹಿಂಸಾಚಾರ ಮತ್ತು ಪ್ರಾಣಹಾನಿಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ತನಿಖಾ ಸಮಿತಿಯ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ,(ಏಜೆನ್ಸೀಸ್).