Iran trolls Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಅನ್ನು ನಿರ್ನಾಮ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತೆಲುಗು ಸಿನಿಮಾದ ಸಾಹಸ ಸನ್ನಿವೇಶದ ವಿಡಿಯೋ ಪೋಸ್ಟ್ ಮಾಡಿ ವ್ಯಂಗ್ಯವಾಗಿ ತಿರುಗೇಟು ನೀಡಿದೆ. ಇರಾನ್ ಅಸಹಾಯಕವಾಗಿ ಕೈಕಟ್ಟಿ ಕುಳಿತಿಲ್ಲ ಎಂದು ತೋರಿಸಲು ಈ ವಿಡಿಯೋ ಬಳಸಲಾಗಿದ್ದು, ಅಮೆರಿಕ ಮತ್ತು ಟ್ರಂಪ್ ವಿರುದ್ಧ ಮೀಮ್ಸ್ ಮೂಲಕ ಟೀಕಿಸುವ ತನ್ನ ಹಳೆಯ ಪ್ರವೃತ್ತಿಯನ್ನು ಇರಾನ್ ಮುಂದುವರಿಸಿದೆ.
ಅಲ್ಲದೆ, ಟ್ರಂಪ್ ಸರ್ಕಾರ ಹಾಲಿವುಡ್ ಸಿನಿಮಾಗಳನ್ನು ನೋಡುವ ಬದಲು ಬಾಲಿವುಡ್ ಸಿನಿಮಾಗಳನ್ನು ನೋಡುತ್ತಿದೆ ಎಂದು ರಾಯಭಾರ ಕಚೇರಿ ಲೇವಡಿ ಮಾಡಿದೆ.
ಟ್ರಂಪ್ ಇರಾನ್ ಅನ್ನು ನಿರ್ನಾಮ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಇರಾನ್ ಅಸಹಾಯಕವಾಗಿ ನಿಂತಿಲ್ಲ ಎಂಬುದು ಅವರಿಗೆ ತಿಳಿದಿದೆ. ಏಕೆಂದರೆ ಅವರು ಇತ್ತೀಚೆಗೆ ಹಾಲಿವುಡ್ ಬದಲಿಗೆ ಬಾಲಿವುಡ್ ವೀಕ್ಷಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದುಬಂದಿದೆ ಎಂದು ರಾಯಭಾರ ಕಚೇರಿ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.
ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ಭಗವಂತ್ ಕೇಸರಿ ಸಿನಿಮಾದ 58 ಸೆಕೆಂಡುಗಳ ಈ ವಿಡಿಯೋ ತುಣುಕಿನಲ್ಲಿ, ರೈಫಲ್‌ಗಳು, ರಾಯಿಟ್ ಶೀಲ್ಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಎರಡು ಗುಂಪುಗಳ ನಡುವಿನ ತೀವ್ರ ಮುಖಾಮುಖಿಯ ದೃಶ್ಯವಿದೆ.
ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಭಾಷಣ ಮಾಡುವಾಗ ಟ್ರಂಪ್ ಇರಾನ್ ಅನ್ನು ನಿರ್ನಾಮ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕಳೆದ ಏಳು ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ತಮ್ಮ ಮುಂದೆ ದೊಡ್ಡ ನಿರ್ಧಾರ ಒಂದಿದ್ದು, ಇರಾನ್ ಮರುನಿರ್ಮಾಣಕ್ಕೆ ಅವಕಾಶ ನೀಡುವ ಒಪ್ಪಂದ ಮಾಡಿಕೊಳ್ಳಬೇಕೋ ಅಥವಾ ಆ ದೇಶವನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ನಿರ್ನಾಮ ಮಾಡಬೇಕೋ ಎಂಬುದನ್ನು ತಾವು ಆಲೋಚಿಸುತ್ತಿರುವುದಾಗಿ ತಿಳಿಸಿದ್ದರು.
ಈ ಮಧ್ಯೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನ್ಯೂಯಾರ್ಕ್‌ಗೆ ಪ್ರಯಾಣಿಸಿದ್ದು, ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಪ್ರಾರಂಭಿಸಿದ ನಂತರ ಬುಧವಾರ ಸಭೆಯನ್ನುದ್ದೇಶಿಸಿ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಬುಧವಾರ ಮಾತನಾಡಿ, ಯುಎಸ್ ಅಧಿಕಾರಿಗಳೊಂದಿಗಿನ ಮಾತುಕತೆಯಲ್ಲಿ ಇರಾನ್ ತನ್ನ ಮಾತುಕತೆಯ ನಿಲುವನ್ನು ಕಾಯ್ದುಕೊಂಡಿದೆ. ಇರಾನ್ ಬಂದರುಗಳ ಮೇಲಿನ ನಿರ್ಬಂಧವನ್ನು ಅಮೆರಿಕ ತೆರವುಗೊಳಿಸಬೇಕು ಮತ್ತು ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಡುವೆ ಕತಾರ್ ಮಧ್ಯಸ್ಥಿಕೆದಾರರ ಮೂಲಕ ಈ ಪರೋಕ್ಷ ಮಾತುಕತೆಗಳು ನಡೆದಿವೆ ಎಂದು ಇಸ್ಮಾಯಿಲ್ ಬಘಾಯಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆಗೆ ಇರಾನ್ ನಿಯೋಗ ನ್ಯೂಯಾರ್ಕ್‌ಗೆ ಬಂದಾಗ, ದೀರ್ಘಕಾಲದ ವೈರಿಗಳಾದ ಅಮೆರಿಕ ಮತ್ತು ಇರಾನ್ ನಡುವೆ ಅನಿರೀಕ್ಷಿತ ಮಾತುಕತೆ ನಡೆಯಿತು. ತಮ್ಮ ಭಾಷಣ ಮುಗಿದ ನಂತರ ಅಮೆರಿಕ ಅಧ್ಯಕ್ಷರು, ತಮ್ಮ ಮುಖ್ಯ ರಾಯಭಾರಿಗಳಾದ ಸ್ಟೀವ್ ವಿಟ್‌ಕಾಫ್ ಮತ್ತು ಜಾರೆಡ್ ಕುಶ್ನರ್ ಅವರು ಇರಾನ್ ಅಧಿಕಾರಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಂಗಳವಾರ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ, ಟ್ರಂಪ್ ಸಾಮಾನ್ಯ ಸಭೆಗಾಗಿ ನ್ಯೂಯಾರ್ಕ್‌ನಲ್ಲಿರುವಾಗ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನು ಭೇಟಿಯಾಗಲು ಮುಕ್ತ ಮನಸ್ಸನ್ನು ಹೊಂದಿದ್ದಾರೆ ಎಂದು ಹೇಳಿದರು. ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವ ಇರಾನ್, ದಶಕಗಳಿಂದ ಈ ಜಾಗತಿಕ ರಾಜತಾಂತ್ರಿಕ ವೇದಿಕೆಯಲ್ಲಿ ಭಾಗವಹಿಸುತ್ತಿದೆ. ಇತ್ತೀಚೆಗೆ ಪೆಜೆಶ್ಕಿಯನ್ ಮತ್ತು ಈ ಹಿಂದೆ ಇಬ್ರಾಹಿಂ ರೈಸಿ ಅವರು ಭಾಗವಹಿಸಿದ್ದರು(ಏಜೆನ್ಸೀಸ್).