ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ 
ದೇಶ

ಸೌದಿ ತೈಲ ಘಟಕದ ಮೇಲೆ ಇರಾನ್ ಡ್ರೋನ್ ಅಟ್ಯಾಕ್​: ಆಯಿಲ್​ ಮಾರ್ಕೆಟ್​ನಲ್ಲಿ ಭಾರಿ ಸಂಚಲನ; ಗಗನಕ್ಕೇರಲಿದೆ ಪೆಟ್ರೋಲ್​-ಡೀಸೆಲ್​? Saudi Oil Refinery Attack

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ
  • ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ
  • ತಲ್ಲಳಗೊಂಡ ವಿಶ್ವ ತೈಲ ಮಾರುಕಟ್ಟೆ
ರಿಯಾದ್: ಮಧ್ಯಪ್ರಾಚ್ಯದಲ್ಲಿ ಹೊತ್ತಿಕೊಂಡಿರುವ ಯುದ್ಧದ ಜ್ವಾಲೆ ಈಗ ಜಾಗತಿಕ ಆರ್ಥಿಕತೆಯ ಪ್ರಮುಖ ಸ್ತಂಭವಾದ ತೈಲ ಕ್ಷೇತ್ರಕ್ಕೆ ತಗುಲಿದೆ. ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರವಾದ ಸೌದಿ ಅರೇಬಿಯಾದ ರಾಸ್ ತನುರಾ ಮೇಲೆ ಇರಾನ್​ ಭೀಕರ ಡ್ರೋನ್ ದಾಳಿ (Saudi Oil Refinery Attack) ನಡೆಸಿದ್ದು, ಇಡೀ ವಿಶ್ವವೇ ಈಗ ಇಂಧನ ಬಿಕ್ಕಟ್ಟಿನ ಭೀತಿಯಲ್ಲಿ ನಡುಗುತ್ತಿದೆ.

ಬೆಂಕಿಯುಂಡೆಯಾದ ತೈಲ ಕೇಂದ್ರ!

ಸೌದಿ ಅರಾಮ್ಕೊ ನಿರ್ವಹಿಸುವ ಈ ಬೃಹತ್ ಘಟಕವು ದಿನಕ್ಕೆ ಸುಮಾರು 5.5 ಲಕ್ಷ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ಮೂಲಗಳ ಪ್ರಕಾರ, ಇರಾನ್‌ನಿಂದ ಬಂದ ಡ್ರೋನ್‌ಗಳು ಏಕಾಏಕಿ ಸಂಸ್ಕರಣಾಗಾರದ ಮೇಲೆ ದಾಳಿ ಮಾಡಿವೆ. ಪರಿಣಾಮವಾಗಿ, ಅಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ದಾಳಿಯಿಂದ ಆಗಿರುವ ಹಾನಿಯ ಪ್ರಮಾಣವನ್ನು ಲೆಕ್ಕಹಾಕುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತೈಲ ಮಾರುಕಟ್ಟೆಯಲ್ಲಿ ಕಂಪನ
ಈ ದಾಳಿಯ ಸುದ್ದಿ ಹೊರಬೀಳುತ್ತಿದ್ದಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈಗಾಗಲೇ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆ ಅಸ್ತವ್ಯಸ್ತಗೊಂಡಿದೆ.
ವಿಶ್ವದ ಒಟ್ಟು ತೈಲ ಸಾಗಣೆಯ ಶೇ. 20ರಷ್ಟು ಭಾಗ ಇದೇ ಮಾರ್ಗವಾಗಿ ಸಾಗುತ್ತದೆ. ಈಗ ಸೌದಿಯ ಸಂಸ್ಕರಣಾಗಾರದ ಮೇಲಿನ ದಾಳಿಯಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 80 ಡಾಲರ್​ ಗಡಿ ದಾಟಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಕಂಡ ಅತಿ ಹೆಚ್ಚಿನ ಏರಿಕೆಯಾಗಿದೆ.

ಭಾರತಕ್ಕೆ ಇದರ ಬಿಸಿ ತಟ್ಟಲಿದೆಯೇ?

ಸೌದಿ ಅರೇಬಿಯಾವು ಭಾರತ ಸೇರಿದಂತೆ ಹಲವು ದೇಶಗಳಿಗೆ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಒಂದು ವೇಳೆ ಈ ಸಂಸ್ಕರಣಾಗಾರದ ಕಾರ್ಯಾಚರಣೆ ದೀರ್ಘಕಾಲದವರೆಗೆ ಸ್ಥಗಿತಗೊಂಡರೆ, ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ.
ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿ, ಸಾರಿಗೆ ವೆಚ್ಚ ಹೆಚ್ಚಾಗಬಹುದು. ಇದು ಅಂತಿಮವಾಗಿ ಹಣದುಬ್ಬರಕ್ಕೆ ಕಾರಣವಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೂ ದಾರಿ ಮಾಡಿಕೊಡಬಹುದು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಯುದ್ಧದ ಮುಂದಿನ ಹಂತವೇನು?

ಇದು ಕೇವಲ ಒಂದು ದಾಳಿಯಲ್ಲ, ಬದಲಾಗಿ ಅಮೆರಿಕ ಮತ್ತು ಇಸ್ರೇಲ್‌ಗೆ ಇರಾನ್ ನೀಡಿದ ಎಚ್ಚರಿಕೆ ಎಂದು ರಾಜತಾಂತ್ರಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಅಥವಾ ಸೌದಿ ನೇತೃತ್ವದ ಒಕ್ಕೂಟವು ಮಿಲಿಟರಿ ಕ್ರಮ ಕೈಗೊಂಡರೆ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಇನ್ನಷ್ಟು ಭೀಕರವಾಗಲಿದೆ.
ಪ್ರಸ್ತುತ, ಹಡಗು ಕಂಪನಿಗಳು ಸುರಕ್ಷತೆಯ ಕಾರಣಕ್ಕಾಗಿ ತೈಲ ಸಾಗಣೆಯನ್ನು ಸ್ಥಗಿತಗೊಳಿಸುತ್ತಿವೆ. ಈ ಅನೌಪಚಾರಿಕ ದಿಗ್ಬಂಧನ ಜಾಗತಿಕ ಇಂಧನ ಕಾರಿಡಾರ್‌ನ್ನು ಸ್ತಬ್ಧಗೊಳಿಸುವ ಹಂತಕ್ಕೆ ತಂದಿದೆ. ಮುಂದಿನ ದಿನಗಳಲ್ಲಿ ತೈಲ ಬೆಲೆ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ,(ಏಜನ್ಸೀಸ್​).