Damayanti Sen IPS | ದೀದಿ ಆಡಳಿತದಲ್ಲಿ ಮೂಲೆಗುಂಪಾಗಿದ್ದ ಅಧಿಕಾರಿ ದಮಯಂತಿ ಸೇನ್
ಕೊಲ್ಕತ್ತಾ: ಈ ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂಲೆಗುಂಪಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ದಮಯಂತಿ ಸೇನ್ (Damayanti Sen IPS) ಈಗ ಬಂಗಾಳದಲ್ಲಿ ಭರ್ಜರಿ ಪುನರಾಗಮನ ಮಾಡಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಬಿಜೆಪಿ ಸರ್ಕಾರವು ಅವರನ್ನು ಮಹಿಳೆಯರ ಮೇಲಿನ ದೌರ್ಜನ್ಯ ತನಿಖಾ ಆಯೋಗದ ಪ್ರಮುಖ ಜವಾಬ್ದಾರಿಗೆ ನೇಮಕ ಮಾಡಿದೆ.
ಕಳೆದ 15 ವರ್ಷಗಳ ಟಿಎಂಸಿ ಆಡಳಿತಾವಧಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತನಿಖೆಗಾಗಿ ರಚಿಸಲಾಗಿರುವ ಈ ವಿಶೇಷ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ದಮಯಂತಿ ಸೇನ್ರನ್ನು ನೇಮಕ ಮಾಡಿರುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ.
2012ರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣ
1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ದಮಯಂತಿ ಸೇನ್, ಕೋಲ್ಕತಾದ ಪಾರ್ಕ್ ಸ್ಟ್ರೀಟ್ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ನಡೆಸುವ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. 2012ರಲ್ಲಿ ಕೋಲ್ಕತಾದ ನೈಟ್‌ಕ್ಲಬ್ ಒಂದರಿಂದ ಹೊರಬಂದ ಮಹಿಳೆಯೊಬ್ಬಳನ್ನು ಎಳೆದೊಯ್ದು, ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಘಟನೆ ನಡೆದಾಗ ಕೋಲ್ಕತಾ ಪೊಲೀಸರ ಇತಿಹಾಸದಲ್ಲೇ ಮೊದಲ ಮಹಿಳಾ ಜಂಟಿ ಕಮಿಷನರ್ (ಅಪರಾಧ ವಿಭಾಗ) ಆಗಿ ದಮಯಂತಿ ಸೇನ್ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಯನ್ನು ತಮ್ಮ ಸರ್ಕಾರದ ತೇಜೋವಧೆ ಮಾಡಲು ಹೆಣೆದ ಕಟ್ಟುಕಥೆ ಎಂದು ಸಾರ್ವಜನಿಕವಾಗಿ ತಳ್ಳಿಹಾಕಿದ್ದರು. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜಕೀಯ ಒತ್ತಡಗಳ ನಡುವೆಯೂ ದಮಯಂತಿ ಸೇನ್ ನೇತೃತ್ವದ ತನಿಖಾ ತಂಡವು ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ಅತ್ಯಾಚಾರ ನಡೆದಿರುವುದನ್ನು ಸಾಕ್ಷ್ಯಾಧಾರಗಳ ಸಮೇತ ಸಾಬೀತುಪಡಿಸಿತ್ತು. ಈ ತನಿಖಾ ವರದಿ ಅಂದಿನ ಸರ್ಕಾರದ ರಾಜಕೀಯ ಹೇಳಿಕೆಗೆ ತದ್ವಿರುದ್ಧವಾಗಿದ್ದರಿಂದ, ಪ್ರಕರಣ ಇತ್ಯರ್ಥವಾದ ತಕ್ಷಣವೇ ದಮಯಂತಿ ಸೇನ್ರನ್ನು ಅಪರಾಧ ವಿಭಾಗದಿಂದ ಬರಾಕ್‌ಪುರದ ಪೊಲೀಸ್ ತರಬೇತಿ ಕಾಲೇಜಿಗೆ ವರ್ಗಾವಣೆ ಮಾಡಲಾಗಿತ್ತು. ಇದು ಆಡಳಿತದ ಹಿತದೃಷ್ಟಿಯಿಂದ ನಡೆದ ವರ್ಗಾವಣೆ ಎಂದು ಸರ್ಕಾರ ಹೇಳಿಕೊಂಡಿತ್ತಾದರೂ, ಪ್ರಾಮಾಣಿಕವಾಗಿ ತನಿಖೆ ನಡೆಸಿದ್ದಕ್ಕಾಗಿಯೇ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಕಿಡಿ ಕಾರಿದ್ದವು.
ನ್ಯಾಯಾಲಯದ ವಿಶ್ವಾಸ ಮತ್ತು ಹೊಸ ಜವಾಬ್ದಾರಿ
ಟಿಎಂಸಿ ಆಡಳಿತದ ಬಹುಪಾಲು ಅವಧಿಯಲ್ಲಿ ದಮಯಂತಿ ಸೇನ್ಗೆ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ನೀಡಿರಲಿಲ್ಲ. ಆದಾಗ್ಯೂ, 2022ರಲ್ಲಿ ಕಲ್ಕತ್ತಾ ಹೈಕೋರ್ಟ್ ರಾಜ್ಯದ ನಾಲ್ಕು ಪ್ರಮುಖ ಅತ್ಯಾಚಾರ ಪ್ರಕರಣಗಳು ಮತ್ತು ತೀವ್ರ ಚರ್ಚೆಗೆ ಒಳಗಾಗಿದ್ದ ರಸಿಕಾ ಜೈನ್ ನಿಗೂಢ ಸಾವು ಪ್ರಕರಣದ ತನಿಖಾ ಜವಾಬ್ದಾರಿಯನ್ನು ನೇರವಾಗಿ ದಮಯಂತಿ ಸೇನ್ಗೆ ಒಪ್ಪಿಸುವ ಮೂಲಕ ಅವರ ದಕ್ಷತೆಯ ಮೇಲೆ ನ್ಯಾಯಾಂಗಕ್ಕಿರುವ ವಿಶ್ವಾಸವನ್ನು ಪ್ರಕಟಿಸಿತ್ತು. ಇದಾದ ಬಳಿಕ 2023ರಲ್ಲಿ ಅವರು ಹೆಚ್ಚುವರಿ ಮಹಾನಿರ್ದೇಶಕರಾಗಿ (ತರಬೇತಿ ವಿಭಾಗ) ನೇಮಕಗೊಂಡಿದ್ದರು. ಇದೀಗ ಜಸ್ಟಿಸ್ ಚಟರ್ಜಿ ನೇತೃತ್ವದ ನೂತನ ಆಯೋಗದ ಭಾಗವಾಗಿರುವ ದಮಯಂತಿ ಸೇನ್ ಅವರು, ಕಳೆದ ಆಡಳಿತಾವಧಿಯಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸಂದೇಶ್‌ಖಾಲಿ, ಕಸ್ಬಾ ಮತ್ತು ಬೊಗ್ಟುಯಿ ಸೇರಿದಂತೆ ಹಲವು ಪ್ರಮುಖ ಮಹಿಳಾ ದೌರ್ಜನ್ಯ ಪ್ರಕರಣಗಳ ಮರುತನಿಖೆ ನಡೆಸಲಿದ್ದಾರೆ(ಏಜೆನ್ಸೀಸ್).