Manipur Rocket Attack 
ದೇಶ

ಮಣಿಪುರದಲ್ಲಿ ಉದ್ವಿಗ್ನತೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್​ ಸ್ಥಗಿತ, ಕರ್ಫ್ಯೂ ಜಾರಿ..Manipur Rocket Attack

ಬಿಷ್ಣುಪುರ:ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದೆ. ಇಲ್ಲಿನ ಬಿಷ್ಣುಪುರದಲ್ಲಿ ಶಂಕಿತ ಉಗ್ರರಿಂದ ನಡೆದ ಅತ್ಯಾಧುನಿಕ ರಾಕೆಟ್​​ ದಾಳಿಯಿಂದಾಗಿ (Manipur Rocket Attack), ಇಬ್ಬರು ಮಕ್ಕಳು ಮೃತಪಟ್ಟಿದ್ದರು.ಇನ್ನು ತಾಯಿಗೆ ಗಂಭೀರ ಗಾಯವಾಗಿದ್ದ ಘಟನೆ ನಡೆದಿತ್ತು. ಈ ಭೀಕರ ಘಟನೆ ಬೆನ್ನಲ್ಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇಬ್ಬರು ಮಕ್ಕಳು ಸಾವನ್ನಪ್ಪಿದ ನಂತರ ಇಂಫಾಲ್ ಮತ್ತು ಮಣಿಪುರದ 4 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಬಿಷ್ಣುಪುರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಗೃಹ ಇಲಾಖೆ ಸಂದೇಶ ರವಾನಿಸಿದೆ ಎಂಬುದಾಗಿ ಇಂಡಿಯಾ ಟು ಡೇ ವರದಿ ಮಾಡಿದೆ.

ಈ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ

ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್, ಕಾಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳ ಹರಡುವಿಕೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ಚಟುವಟಿಕೆ ವಿರುದ್ಧ ಈ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್​ ಸ್ಥಗಿತಗೊಳಿಸಲಾಗಿದೆ. ಏಪ್ರಿಲ್​ 7 ಮಧ್ಯಾಹ್ನ 2 ಗಂಟೆಯಿಂದ ಈ ಆದೇಶ ಜಾರಿಯಲ್ಲಿರಲಿದೆ. ಮುಂದಿನ ಆದೇಶದವರೆಗೂ ಈ ನಿರ್ಬಂಧ ಮುಂದುವರೆಯಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಘಟನೆ?

ಮಣಿಪುರದಲ್ಲಿ ಮೈತ್ರಿ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷ ಇಷ್ಟು ದಿನ ಬೂದಿ ಮುಸುಕಿದ ಕೆಂಡದಂತೆ ಇತ್ತು. ಸದ್ಯ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಏಪ್ರಿಲ್​​ 7 ರ ಮಧ್ಯರಾತ್ರಿ 1 ಗಂಟೆಗೆ ಬೆಟ್ಟದ ಪ್ರದೇಶಗಳಿಂದ ಶಂಕಿತ ಉಗ್ರರು ಅತ್ಯಾಧುನಿಕ ರಾಕೆಟ್ ಉಡಾಯಿಸಿದ್ದು, ಇದು ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೊಂಗ್ಲಾಬಿ ಎಂಬ ಗ್ರಾಮದಲ್ಲಿ ಶಂಕಿತ ಉಗ್ರರು ಇಲ್ಲಿನ ನಾಗರಿಕರೊಬ್ಬರ ಮನೆ ಮೇಲೆ ಬಿದ್ದಿದೆ. ಈ ಘೋರ ಘಟನೆಯಿಂದಾಗಿ ನಿದ್ದೆ ಕಣ್ಣಲ್ಲಿದ್ದ 5 ವರ್ಷದ ಬಾಲಕ ಮತ್ತು ಆರು ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಈ ದಾಳಿಯು ಸಂಘರ್ಷ ಪೀಡಿತ ಪ್ರದೇಶದಲ್ಲಿ ಮತ್ತೆ ಆತಂಕವನ್ನು ಸೃಷ್ಟಿಸಿದೆ.

ಸಿಎಂ ಹೇಳಿದ್ದಿಷ್ಟು..!

ಪ್ರಕರಣದ ನಂತರ ರೊಚ್ಚಿಗೆದ್ದ ಜನರು ಪೆಟ್ರೋಲ್​ ಪಂಪ್​ ಬಳಿ ನಿಂತಿದ್ದ ಎರಡು ತೈಲ ಟ್ರಕ್​ಗಳಿಗೆ ಬೆಂಕಿ ಹಚ್ಚಿ ಪೊಲೀಸ್​ ಠಾಣೆ ಮುಂದೆ ಟೈರ್​ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ. ಇದು ಅನಾಗರಿಕ ಕೃತ್ಯ ಎಂದು ಮುಖ್ಯಮಂತ್ರಿ ವೈ ಖೇಮ್‌ಚಂದ್ ಸಿಂಗ್ ಎಂದು ಹೇಳಿದರು.
ಸದ್ಯ ಮಣಿಪುರದಲ್ಲಿ ಹೆಚ್ಚಾಗಿರುವ ಉದ್ವಿಗ್ನತೆಯನ್ನು ತಹಬದಿಗೆ ತರಲು ಇಲ್ಲಿನ ಸರ್ಕಾರವು ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಅನುಮಾನಸ್ಪದವಾಗಿ ಕಂಡುಬರುವವರು, ಹಿಂಸಾಚಾರಾತ್ಮಕವಾಗಿ ಪ್ರತಿಭಟನೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ, (ಏಜೆನ್ಸೀಸ್​).