ಟಿಎಂಸಿಯಲ್ಲಿ ತಾರಕಕ್ಕೇರಿದ ಆಂತರಿಕ ಬಿಕ್ಕಟ್ಟು: ನಮ್ಮೊಂದಿಗೆ ಇನ್ನೂ ಹಲವು ನಾಯಕರು ಮಾತುಕತೆಯಲ್ಲಿದ್ದಾರೆ! ಸಂಸದೆ ಕಾಕೋಲಿ ಘೋಷ್ ಸ್ಪೋಟಕ ಹೇಳಿಕೆ!  
ದೇಶ

ಟಿಎಂಸಿಯಲ್ಲಿ ತಾರಕಕ್ಕೇರಿದ ಆಂತರಿಕ ಬಿಕ್ಕಟ್ಟು: ನಮ್ಮೊಂದಿಗೆ ಇನ್ನೂ ಹಲವು ನಾಯಕರು ಮಾತುಕತೆಯಲ್ಲಿದ್ದಾರೆ! ಸಂಸದೆ ಕಾಕೋಲಿ ಘೋಷ್ ಸ್ಪೋಟಕ ಹೇಳಿಕೆ! Kakoli Ghosh Dastidar

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿನ ಆಂತರಿಕ ಭಿನ್ನಮತ ಈಗ ತುತ್ತತುದಿಗೆ ತಲುಪಿದ್ದು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಆಘಾತ ಎದುರಾಗಿದೆ. ಟಿಎಂಸಿ ಪಕ್ಷದ ಹಿರಿಯ ನಾಯಕಿ ಹಾಗೂ ಸಂಸದೆಯೂ ಆಗಿರುವ ಕಾಕೋಲಿ ಘೋಷ್ ದಸ್ತಿದಾರ್(Kakoli Ghosh Dastidar) ನೇತೃತ್ವದಲ್ಲಿ ಭಾರಿ ಬಂಡಾಯ ಸೃಷ್ಟಿಯಾಗಿದ್ದು, ಪಕ್ಷದ ಬರೋಬ್ಬರಿ 20 ಸಂಸದರು ದೀದಿಗೆ ಕೈಕೊಟ್ಟು ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಈ ಮಹತ್ತರ ಬೆಳವಣಿಗೆಯಿಂದಾಗಿ ಬಂಗಾಳದ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಮಮತಾ ಅವರ ಕೋಟೆ ಕುಸಿಯುವ ಭೀತಿ ಎದುರಾಗಿದೆ. ಟಿಎಂಸಿ ಪಾಳಯದಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿರುವ ಬೆನ್ನಲ್ಲೇ ಗುರುವಾರ ಮಾತನಾಡಿರುವ ಬಂಡಾಯ ನಾಯಕಿ ಕಾಕೋಲಿ ಘೋಷ್, ಸದ್ಯಕ್ಕೆ 20 ಸಂಸದರು ನಮ್ಮ ರೆಬೆಲ್ ಕ್ಯಾಂಪ್‌ನಲ್ಲಿದ್ದಾರೆ. ಆದರೆ ಈ ಸಂಖ್ಯೆ ಇಲ್ಲಿಗೇ ನಿಲ್ಲುವುದಿಲ್ಲ, ಇನ್ನು ಹಲವು ನಾಯಕರು ನಮ್ಮೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಸ್ಪೀಕರ್‌ಗೆ ಪತ್ರ ರವಾನೆ; ಎನ್‌ಡಿಎಗೆ ಟಿಎಂಸಿ ಸಂಸದರ ಬೆಂಬಲ!
ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿ ಮುಂದುವರಿದಿರುವುದಾಗಿ ಹೇಳಿಕೊಂಡಿರುವ ಕಾಕೋಲಿ ಘೋಷ್, ತಾವು ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಈಗಾಗಲೇ ಅಧಿಕೃತ ಪ್ರಕ್ರಿಯೆ ಮುಗಿದಿದೆ ಎಂದು ಬಹಿರಂಗಪಡಿಸಿದ್ದಾರೆ. ನನ್ನನ್ನು ಒಳಗೊಂಡಂತೆ ಟಿಎಂಸಿಯ ಸುಮಾರು 20 ಸಂಸದರು ಒಟ್ಟಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ಪತ್ರ ಬರೆದಿದ್ದೇವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುವ ನಮ್ಮ ನಿರ್ಧಾರವನ್ನು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಇತರ ಸಹೋದ್ಯೋಗಿ ಸಂಸದರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರವೇ ಈ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎಂದು ಕಾಕೋಲಿ ಘೋಷ್ ಸ್ಪಷ್ಟಪಡಿಸಿದ್ದಾರೆ. ನಾವು ದೇಶದ ಜನರ ತೀರ್ಪನ್ನು ಗೌರವಿಸುತ್ತೇವೆ. ನಮ್ಮ ಮುಂದಿನ ರಾಜಕೀಯ ಭವಿಷ್ಯ ಮತ್ತು ಬಂಗಾಳದ ಪ್ರಗತಿ ಕೇಂದ್ರದ ಎನ್‌ಡಿಎ ಮೈತ್ರಿಕೂಟದೊಂದಿಗೆ ಸಾಗುವುದರಲ್ಲೇ ಅಡಗಿದೆ ಎಂದು ನಾವು ಬಲವಾಗಿ ನಂಬುತ್ತೇವೆ ಎಂದು ಕಾಕೋಲಿ ಘೋಷ್ ತಮ್ಮ ಬಂಡಾಯವನ್ನು ಸಮರ್ಥಿಸಿಕೊಂಡಿದ್ದಾರೆ.

ಆರ್‌ಜಿ ಕರ್ ಪ್ರತಿಭಟನೆ, ಲಾಟಿ ಚಾರ್ಜ್ ಹಾಗೂ ಕಾಂಗ್ರೆಸ್ ವಿಲೀನದ ವಿವಾದ!

ಇದೇ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮ್ಮ ವಿರುದ್ಧ ಮಾಡಿರುವ ವೀಕ್ಷಣೆಗಳಿಗೆ ಕಾಕೋಲಿ ಘೋಷ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ್ ಬ್ಯಾನರ್ಜಿ ಆಡಿದ್ದ ಮಾತುಗಳಿಗೆ ತಿರುಗೇಟು ನೀಡಿದ ಘೋಷ್​, ಆರ್‌ಜಿ ಕರ್ ಆಸ್ಪತ್ರೆ ಘಟನೆಯ ವಿರುದ್ಧ ಕಲ್ಕತ್ತಾದ ರಸ್ತೆಗಳಲ್ಲಿ ಭಾರಿ ಪ್ರತಿಭಟನೆ ನಡೆದ ರಾತ್ರಿ, ನನ್ನ ಮಗಳು ಮತ್ತು ಮಗ ಇಬ್ಬರೂ ರಸ್ತೆಯಲ್ಲೇ ಇದ್ದರು ಎಂಬುದನ್ನು ಕಲ್ಯಾಣ್ ನೆನಪಿನಲ್ಲಿಡಬೇಕು. ಅಷ್ಟೇ ಅಲ್ಲ, ಆ ಜಾಗದಲ್ಲಿ ನಡೆದ ಲಾಟಿಚಾರ್ಜ್‌ನಲ್ಲಿ ನನ್ನ ಕಿರಿಯ ಮಗ ತೀವ್ರವಾಗಿ ಗಾಯಗೊಂಡಿದ್ದ. ಈ ಕಠಿಣ ಪರಿಸ್ಥಿತಿಯ ಬಗ್ಗೆ ನಾನು ಸ್ವತಃ ನಮ್ಮ ನಾಯಕಿ ಅವರೊಂದಿಗೂ ಮಾತನಾಡಿದ್ದೆ ಎಂದು ಭಾವುಕರಾಗಿ ನುಡಿದರು.
ಇನ್ನು ದೆಹಲಿಯಲ್ಲಿ ಮಮತಾ ಹಾಗೂ ಸೋನಿಯಾ ಗಾಂಧಿ ಅವರ ಭೇಟಿಯ ನಂತರ ಹರಿದಾಡುತ್ತಿರುವ ಟಿಎಂಸಿ-ಕಾಂಗ್ರೆಸ್ ವಿಲೀನದ ವದಂತಿಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಘೋಷ್, ಆ ಮಹತ್ವದ ಸಭೆಯಲ್ಲಿ ನಾನಂತೂ ಇರಲಿಲ್ಲ, ಈ ಬಗ್ಗೆ ನನ್ನ ಅಭಿಪ್ರಾಯವನ್ನೂ ಯಾರೂ ಕೇಳಿಲ್ಲ. ಮಮತಾ ಅವರು ಅತ್ಯಂತ ಹಿರಿಯ ಮತ್ತು ಅನುಭವವಿರುವ ನಾಯಕಿಯಾಗಿದ್ದಾರೆ. ಅಲ್ಲದೆ, ಪಕ್ಷದ ಭವಿಷ್ಯದ ಬಗ್ಗೆ ಅವರು ಏನು ಮಾಡಬೇಕು ಎನ್ನುವುದು ಅವರ ವೈಯಕ್ತಿಕ ಇಚ್ಛೆಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಹಿರಿಯ ನಾಯಕರ ರಾಜೀನಾಮೆ ಮತ್ತು ಬಹಿರಂಗ ಬಂಡಾಯದಿಂದಾಗಿ ಮಮತಾ ಪಾಳಯದಲ್ಲಿ ಈಗ ತಲ್ಲಣ ಸೃಷ್ಟಿಯಾಗಿದೆ,(ಏಜೆನ್ಸೀಸ್​).