- ದೆಹಲಿ ಕಾರು ಸ್ಫೋಟ ಪ್ರಕರಣವನ್ನು ಸುಪ್ರೀಂಕೋರ್ಟ್ನಲ್ಲಿ ಉಲ್ಲೇಖಿಸಿದ ದೆಹಲಿ ಪೊಲೀಸರು
- 2020ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡದಿರಲು ಕಾರು ಸ್ಫೋಟ ಪ್ರಸ್ತಾಪ
- ಬುದ್ಧಿಜೀವಿಗಳೇ ಭಯೋತ್ಪಾದಕರಾದಾಗ ಇತರರಿಗಿಂತ ಹೆಚ್ಚು ಅಪಾಯಕಾರಿ ಎಂದು ವಕೀಲರು
ನವದೆಹಲಿ: ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ಮತ್ತು ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಅನ್ನು ಭೇದಿಸಿದ ಪ್ರಕರಣವನ್ನು ಉಲ್ಲೇಖಿಸಿದ ದೆಹಲಿ ಪೊಲೀಸರು, 2020ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ತಿರಸ್ಕರಿಸುವಂತೆ ಸುಪ್ರೀಂ ಕೋರ್ಟ್ ( Supreme Court ) ನಲ್ಲಿ ಮನವಿ ಮಾಡಿದರು.
ದೆಹಲಿ ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಬುದ್ಧಿಜೀವಿಗಳು ಸರ್ಕಾರಿ ನಿಧಿಯನ್ನು ಬಳಸಿಕೊಂಡು ವೈದ್ಯರು ಮತ್ತು ಇಂಜಿನಿಯರ್‌ಗಳಾಗುತ್ತಿದ್ದಾರೆ. ಆ ಬಳಿಕ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಇಂಥದ್ದೊಂದು ಭಯಾನಕ ಟ್ರೆಂಡ್ ಹುಟ್ಟಿಕೊಂಡಿದೆ ಎಂದು ಹೇಳಿದರು.
ಬುದ್ಧಿಜೀವಿಗಳೇ ಭಯೋತ್ಪಾದಕರಾದಾಗ, ಅವರು ಇತರರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ. ಹೀಗಾಗಿ, ದೆಹಲಿ ಗಲಭೆಯ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ದೆಹಲಿ ಪೊಲೀಸರ ಪರವಾಗಿ ರಾಜು ಅವರು ಉನ್ನತ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡರು.
ಅಂದಹಾಗೆ, ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಬೆಂಬಲಿತ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭದ್ರತಾ ಸಂಸ್ಥೆಗಳು ಭೇದಿಸಿದ ಬೆನ್ನಲ್ಲೇ ದೆಹಲಿ ಪೊಲೀಸರಿಂದ ಈ ಹೇಳಿಕೆಗಳು ಬಂದಿವೆ.
ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಡಾ. ಮುಜಾಮಿಲ್ ಶಕೀಲ್ ಎಂಬಾತನ ಬಾಡಿಗೆ ಮನೆಯಲ್ಲಿ ನವೆಂಬರ್ 10ರಂದು ಬರೋಬ್ಬರಿ 2900 ಕೆಜಿ ತೂಕದ ಐಇಡಿ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು. ಅಲ್ಲದೆ, ಮುಜಾಮಿಲ್ನನ್ನು ಬಂಧಿಸಲಾಯಿತು.
ಈ ಘಟನೆ ನಡೆದ ದಿನವೇ ಮುಜಾಮಿಲ್ ಸಹಚರ ಡಾ. ಉಮರ್ ನಬಿ, ಐತಿಹಾಸಿಕ ಕೆಂಪು ಕೋಟೆಯ ಹೊರಗೆ ಕಾರನ್ನು ಸ್ಫೋಟಿಸಿ 14 ಜನರ ಸಾವಿಗೆ ಕಾರಣನಾದನು. ಇದೊಂದು ಆತ್ಮಾಹುತಿ ಬಾಂಬ್ ದಾಳಿಯಾಗಿದ್ದು, ದೇಶಾದ್ಯಂತ ತೀವ್ರ ಆತಂಕ ಮೂಡಿಸಿದೆ. ಈ ಘಟನೆ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ತನಿಖಾಧಿಕಾರಿಗಳು ಅನೇಕ ವೈದ್ಯರನ್ನು ಬಂಧಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವವರೇ ಇಂಥದ್ದೊಂದು ಸಂಚು ರೂಪಿಸಿದ್ದು ನಿಜಕ್ಕೂ ಆತಂಕಕಾರಿಯಾಗಿದೆ. ಹೀಗಾಗಿ ಇದೇ ಪ್ರಕರಣವನ್ನು ಉಲ್ಲೇಖಿಸಿ, ದೆಹಲಿ ಗಲಭೆ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡದಂತೆ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂದ ದ್ವಿಸದಸ್ಯ ಪೀಠವು ಇಮಾಮ್, ಖಾಲಿದ್ ಮತ್ತು ಇತರ ಮೂವರ ಜಾಮೀನು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ದೆಹಲಿ ಕಾರು ಸ್ಫೋಟ ಹಾಗೂ ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಭೇದಿಸಿದ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಜಾಮೀನು ನೀಡದಂತೆ ಮನವಿ ಮಾಡಿದರು.
ಅಂದಹಾಗೆ, 2020ರ ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ವಿರುದ್ಧ ಭಾರಿ ಪ್ರತಿಭಟನೆ ನಡೆಯಿತು. ಇದು ಕೋಮುಗಲಭೆಗೆ ತಿರುಗಿ ಭಾರಿ ಹಿಂಸೆಯನ್ನು ಸೃಷ್ಟಿಸಿತು. ಈ ಗಲಭೆಗೆ ಕಾರಣವಾದ ದೊಡ್ಡ ಪಿತೂರಿಯ ಭಾಗವಾಗಿದ್ದ ಆರೋಪದ ಮೇಲೆ ಇಮಾಮ್ ಮತ್ತು ಖಾಲಿದ್ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡರು, (ಏಜೆನ್ಸೀಸ್).