ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನರ್ತಕಿ
- ಭೋಜ್‌ಪುರದಲ್ಲಿ ಮನರಂಜನೆ ಹೆಸರಲ್ಲಿ ಅಮಾನವೀಯ ಕೃತ್ಯ
- ನರ್ತಕಿಯ ಬಾಯಲ್ಲಿ ನಾಣ್ಯ ತುರುಕಿದ ಕಿಡಿಗೇಡಿಗಳು
- ನಾಣ್ಯವನ್ನು ನುಂಗಿದ ನರ್ತಕಿ ಸ್ಥಿತಿ ಚಿಂತಾಜನಕ
ಭೋಜ್‌ಪುರ: ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡಬೇಕೇ ಹೊರತು ಪ್ರಾಣ ತೆಗೆಯುವಂತಿರಬಾರದು. ಆದರೆ ಬಿಹಾರದ ಭೋಜ್‌ಪುರದಲ್ಲಿ ನಡೆದ ಘಟನೆ ಮನುಕುಲವೇ ತಲೆತಗ್ಗಿಸುವಂತಿದೆ. ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದ ಕಲಾವಿದೆಯೊಬ್ಬಳ ಬಾಯಿಗೆ ಕಿಡಿಗೇಡಿಗಳ ಗುಂಪು ಬಲವಂತವಾಗಿ ನಾಣ್ಯಗಳನ್ನು ತುರುಕಿದ್ದು, ಅವುಗಳನ್ನು ನುಂಗಿದ ನರ್ತಕಿ (Dancer) ಯ ಸ್ಥಿತಿ ಈಗ ಚಿಂತಾಜನಕವಾಗಿದೆ.
ವೇದಿಕೆಯ ಮೇಲೆ ನಡೆದಿದ್ದೇನು?
ಭೋಜ್‌ಪುರದ ಚಂದ್ವಾ ಟೋಲಾ ಪ್ರದೇಶದಲ್ಲಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ನೂರಾರು ಜನರ ಸಮ್ಮುಖದಲ್ಲಿ ನರ್ತಕಿಯೊಬ್ಬರು ತನ್ನ ಪ್ರದರ್ಶನ ನೀಡುತ್ತಿದ್ದಳು. ಪ್ರೇಕ್ಷಕರು ನೃತ್ಯವನ್ನು ಆನಂದಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಉನ್ಮಾದಕ್ಕೊಳಗಾದ ಕೆಲವರು ವೇದಿಕೆಯ ಮೇಲೆ ನುಗ್ಗಿದ್ದಾರೆ.
ನೃತ್ಯ ಮಾಡುವ ಕಲಾವಿದರಿಗೆ ಹಣ ನೀಡುವುದು ಸಂಪ್ರದಾಯವಾದರೂ, ಇಲ್ಲಿನ ಗುಂಪು ಮಾತ್ರ ಅಮಾನವೀಯವಾಗಿ ವರ್ತಿಸಿದೆ. ನರ್ತಕಿಯ ಬಾಯಿಗೆ ಬಲವಂತವಾಗಿ ನಾಣ್ಯಗಳನ್ನು ತುರುಕಿದ್ದಾರೆ. ಆ ಗದ್ದಲದಲ್ಲಿ ನರ್ತಕಿ ನಾಣ್ಯಗಳನ್ನು ನುಂಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆಕೆಗೆ ಉಸಿರಾಟದ ತೊಂದರೆ ಆರಂಭವಾಗಿ, ವೇದಿಕೆಯ ಮೇಲೆಯೇ ಕುಸಿದುಬಿದ್ದಿದ್ದಾಳೆ.
ನನ್ನ ಹೆಂಡತಿಯ ಸ್ಥಿತಿಗೆ ಅವರೇ ಕಾರಣ
ನರ್ತಕಿಯ ಪತಿ ರಾಜು ಕುಮಾರ್ ಆಸ್ಪತ್ರೆಯ ಮುಂದೆ ಕಣ್ಣೀರಿಡುತ್ತಾ ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ನನ್ನ ಹೆಂಡತಿ ತನ್ನ ಕೆಲಸ ಮಾಡುತ್ತಿದ್ದಳು. ಆದರೆ ಆ ಗುಂಪು ರಾಕ್ಷಸರಂತೆ ವರ್ತಿಸಿತು. ಬಲವಂತವಾಗಿ ಬಾಯಿಗೆ ನಾಣ್ಯ ತುರುಕಿದ್ದರಿಂದ ಒಂದು ನಾಣ್ಯ ಆಕೆಯ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಆಕೆಯ ಸ್ಥಿತಿ ಈಗ ಚಿಂತಾಜನಕವಾಗಿದೆ, ಎಂದು ಅವರು ನೋವು ತೋಡಿಕೊಂಡಿದ್ದಾರೆ.
ವೈದ್ಯರ ಹರಸಾಹಸ, ಪೊಲೀಸರ ಎಂಟ್ರಿ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಆಯೋಜಕರು ತಕ್ಷಣವೇ ಆಕೆಯನ್ನು ಅರಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ಗಂಟಲಿನಲ್ಲಿ ಸಿಲುಕಿದ್ದ ನಾಣ್ಯಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆಂತರಿಕವಾಗಿ ಗಾಯಗಳಾಗಿರುವ ಸಾಧ್ಯತೆ ಇರುವುದರಿಂದ ಮುಂದಿನ 24 ಗಂಟೆಗಳ ಕಾಲ ಆಕೆಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.
ಈ ಘಟನೆ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಭದ್ರತೆ ಇಲ್ಲವೇ? ಕಿಡಿಗೇಡಿಗಳು ವೇದಿಕೆ ಏರುವುದನ್ನು ತಡೆಯಲು ಆಯೋಜಕರು ವಿಫಲರಾಗಿದ್ದು ಯಾಕೆ? ಎಂಬ ಪ್ರಶ್ನೆಗಳು ಎದ್ದಿವೆ. ಪೊಲೀಸರು ಈಗ ಕಾರ್ಯಕ್ರಮದ ಆಯೋಜಕರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಕಲಾವಿದರ ಸುರಕ್ಷತೆ ಎಲ್ಲಿ?
ಕಲೆ ಮತ್ತು ಕಲಾವಿದರನ್ನು ಗೌರವಿಸುವ ಬದಲು ಅವರ ಪ್ರಾಣದ ಜೊತೆ ಚೆಲ್ಲಾಟವಾಡುವ ಇಂತಹ ಘಟನೆಗಳು ಸಮಾಜಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಈ ಹಿಂದೆ ಕೂಡ ಉತ್ತರ ಭಾರತದ ಇಂತಹ ಕಾರ್ಯಕ್ರಮಗಳಲ್ಲಿ ಗುಂಡಿನ ದಾಳಿ ಅಥವಾ ಹಲ್ಲೆಗಳು ನಡೆದ ಉದಾಹರಣೆಗಳಿವೆ. ಇನ್ನಾದರೂ ಇಂತಹ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಬೇಕು ಎನ್ನುವುದು ನಿಜವಾದ ಕಲಾಭಿಮಾನಿಗಳ ಮತ್ತು ಕಲಾವಿದರ ಆಗ್ರಹವಾಗಿದೆ,(ಏಜನ್ಸೀಸ್).