ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್
ನವದೆಹಲಿ: ಪಾಕಿಸ್ತಾನ ಮತ್ತು ಭಾರತ ನಡುವೆ ಸಿಂಧೂ ನದಿ ನೀರಿನ(Indus River) ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ದೇಶದ ನೀರಿನ ಭದ್ರತೆಗೆ ಗಂಭೀರ ಅಪಾಯವಿದೆ ಅಂತ ತಿಳಿದ್ರೆ, ಭಾರತದ ವಿರುದ್ಧ ಯುದ್ಧಕ್ಕೂ ಸಿದ್ಧ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಒಣ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಇತ್ತೀಚೆಗೆ ಭಾರತವು ತನ್ನ ನೀರಿನ ಸಂಪನ್ಮೂಲಗಳನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಬಳಸುವುದನ್ನು ಖಚಿತಪಡಿಸುತ್ತದೆ. ಮತ್ತು ಭಾರತದ ಪಾಲಿನ ಸಿಂಧೂ ನೀರಿನಲ್ಲಿ ಒಂದು ಹನಿಯೂ ದೇಶದ ಹೊರಗೆ ಹರಿಯಬಾರದು ಎಂದು ಹೇಳಿದ್ದರು.
ಈ ಕುರಿತು ARY ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಸಿಫ್, ಪಾಕಿಸ್ತಾನವು ಜಲ ಸಂಪನ್ಮೂಲಗಳನ್ನು ತನ್ನ ರಾಷ್ಟ್ರೀಯ ಭದ್ರತೆಯ ಒಂದು ಭಾಗವೆಂದು ಪರಿಗಣಿಸುತ್ತದೆ. ಮತ್ತು ನದಿ ನೀರಿನ ಪ್ರವೇಶಕ್ಕೆ ತೊಂದರೆಯಾಗುತ್ತಿದೆ ಎಂದು ನಮಗೆ ಅನಿಸಿದ ಕ್ಷಣ, ನಾವು ಭಾರತದ ವಿರುದ್ಧ ಯುದ್ಧಕ್ಕೆ ಇಳಿಯುತ್ತೇವೆ, ಯಾವುದೇ ಹಿಂಜರಿಕೆಯಿಲ್ಲ ಎಂದು ಹೇಳಿದ್ದಾರೆ.
ಭಾರತವು ನೀರನ್ನು ಕಾರ್ಯತಂತ್ರದ ಸಾಧನವಾಗಿ ಬಳಸುವತ್ತ ಸಾಗುತ್ತಿದೆ. ಮತ್ತು ಪಾಕಿಸ್ತಾನಕ್ಕೆ ಮೀಸಲಾದ ನೀರಿನ ಹರಿವಿನಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿ ವ್ಯವಸ್ಥೆಯ ಹಂಚಿಕೆಯನ್ನು ನಿಯಂತ್ರಿಸುವ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯ ಒಪ್ಪಂದವಾದ 1960ರ ಸಿಂಧೂ ಜಲ ಒಪ್ಪಂದದ ಕುರಿತು ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಈ ಹೇಳಿಕೆ ನೀಡಿದ್ದಾರೆ. ಇನ್ನೂ
2025 ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಬಳಿಕ ಭಾರತ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನ ಬೆಂಬಲಿತ ಉಗ್ರರು ಈ ದಾಳಿಯನ್ನು ನಡೆಸಿದೆ ಎಂದು ಭಾರತ ಆರೋಪಿಸಿದ್ದು, ಪಾಕ್ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ಕ್ರಮ ತೆಗೆದುಕೊಳ್ಳುವವರೆಗೆ ಒಪ್ಪಂದವನ್ನು ಸ್ಥಗಿತದಲ್ಲಿರುತ್ತದೆ ಎಂದು ಹೇಳಿತ್ತು (ಏಜೆನ್ಸೀಸ್).