ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಕ್ರೀಡಾ ಆರ್ಥಿಕತೆಯೂ(India sports economy) $2 ಬಿಲಿಯನ್ ಡಾಲರ್ ಗಡಿಯನ್ನು ದಾಟಿದ್ದು, ವರ್ಷದಿಂದ ವರ್ಷಕ್ಕೆ ಶೇ. 13.4ರಷ್ಟು ಹೆಚ್ಚಾಗಿ ಈ ವರ್ಷ $2.13 (ರೂ. 18,861 ಕೋಟಿ) ತಲುಪಿದೆ. ಈ ಆದಾಯ ನಾಲ್ಕು ವರ್ಷಗಳಲ್ಲೇ ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ.
ಒಟ್ಟು ದಾಖಲಾದ ಆದಾಯದಲ್ಲಿ ಕ್ರಿಕೆಟ್ನದ್ದೇ ಸಿಂಹಪಾಲು ಆಗಿದ್ದು, ಶೇ.89% ಆದಾಯವನ್ನು ನೀಡಿದೆ. ಇದು 2024ರಲ್ಲಿ 85% ರಷ್ಟಿತ್ತು. ಕ್ರಿಕೆಟ್ ಬಿಟ್ಟು ಉಳಿದ ಉದಯೋನ್ಮುಖ ಕ್ರೀಡೆಗಳ ಪಾಲು ಶೇ.11%ರಷ್ಟು ಎನ್ನಲಾಗಿದೆ. ಕ್ರಿಕೆಟ್ ಮಾತ್ರ 16,704 ರೂ. ಆದಾಯವನ್ನು ನೀಡಿದೆ.
WPP ಮೀಡಿಯಾದ 'ಸ್ಪೋರ್ಟಿಂಗ್ ನೇಷನ್: ಬಿಲ್ಡಿಂಗ್ ಎ ಲೆಗಸಿ' ವರದಿಯ ಪ್ರಕಾರ, ಮೂರು ಪ್ರಮುಖ ಆದಾಯ ಮೂಲಗಳನ್ನು ಮೌಲ್ಯಮಾಪನವನ್ನು ಪರಿಗಣಿಸಲಾಗಿದೆ. ಒಂದು ಪ್ರಾಯೋಜಕತ್ವ (ಮೈದಾನ, ತಂಡ ಮತ್ತು ಫ್ರ್ಯಾಂಚೈಸ್ ಶುಲ್ಕಗಳನ್ನು ಒಳಗೊಂಡಿರುತ್ತದೆ), ಎರಡು ಕ್ರೀಡಾಪಟುಗಳ ಅನುಮೋದನೆಗಳು ಹಾಗೂ ಮೂರು ಜಾಹೀರಾತು ವೆಚ್ಚಗಳು.
ಈ ಕುರಿತು ಮಾತನಾಡಿರುವ WPP ಮೀಡಿಯಾ ದಕ್ಷಿಣ ಏಷ್ಯಾದ ಕ್ರೀಡೆ ಹಾಗೂ ಮನರಂಜನೆಯ ಕಂಟೆಂಟ್ ವ್ಯವಸ್ಥಾಪಕ ನಿರ್ದೇಶಕ ವಿನಿತ್ ಕಾರ್ನಿಕ್, ಇಂದು ಕ್ರೀಡೆ ಸಂಸ್ಕೃತಿ ಮತ್ತು ವಾಣಿಜ್ಯದ ಛೇದಕದಲ್ಲಿದೆ. ಬ್ರ್ಯಾಂಡ್ಗಳು ಕೇವಲ ಪ್ರಾಯೋಜಕವಾಗಿರದೇ ನಿರೂಪಣೆಯ ಭಾಗವಾಗುತ್ತಿವೆ. ಐಪಿಎಲ್ನಂತಹ ಲೀಗ್ಗಳ ಬೆಳವಣಿಗೆ ಅಭಿಮಾನಿಗಳ ತೊಡಗಿಸಿಕೊಳ್ಳುವಿಕೆ ಮತ್ತು ವಾಣಿಜ್ಯ ಎರಡರ ಪಾಲುದಾರಿಕೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ಕ್ರೀಡಾ ಆರ್ಥಿಕತೆಯು ಮಾಧ್ಯಮಗಳ ಮೇಲಿನ ವೆಚ್ಚದಿಂದಲೇ ಆವರಿಸಲ್ಪಟ್ಟಿದೆ. ಇದು ಒಟ್ಟು ಉದ್ಯಮದ ಸುಮಾರು 50% ನಷ್ಟಿದ್ದು, ಅಂದರೆ ₹9,571 ಕೋಟಿಗಳಷ್ಟಿದೆ. ಕ್ರಿಕೆಟ್ ಮೇಲಿನ ವೆಚ್ಚವೊಂದೇ ಬರೋಬ್ಬರಿ ₹9,026 ಕೋಟಿಗಳಷ್ಟಿರುವುದು ವಿಶೇಷ. ದಿನೇ-ದಿನೇ ಬೆಳೆಯುತ್ತಿರುವ ಪ್ರಾಯೋಜಕತ್ವಗಳು ₹7,943 ಕೋಟಿಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಐಪಿಎಲ್ ತಂಡಗಳ ಪ್ರಾಯೋಜಕತ್ವವಂತೂ ₹1,000 ಕೋಟಿಗಳ ಗಡಿಯನ್ನು ದಾಟಿದೆ. ಕೊನೆಯದಾಗಿ, ಸೆಲೆಬ್ರಿಟಿಗಳ ಜಾಹೀರಾತು ಪ್ರಚಾರದ ಪಾಲು ₹1,350 ಕೋಟಿಗಳಾಗಿದ್ದು, ಇದು ಇಡೀ ಕ್ರೀಡಾ ಆರ್ಥಿಕತೆಯ 7% ನಷ್ಟಿದೆ ಎಂದು ವರದಿ ಹೇಳಿದೆ (ಏಜೆನ್ಸೀಸ್).