ಒಮಾನ್ ಸಮುದ್ರದಲ್ಲಿ ಮುಳುಗಿದ ಭಾರತದ ಹಡಗು; ಆಕಾಶದಿಂದಲೇ ಜೀವ ರಕ್ಷಕ ದೋಣಿ ಎಸೆದು 14 ನಾವಿಕರನ್ನು ರಕ್ಷಿಸಿದ ಅಮೆರಿಕ ವಿಮಾನ! US Navy P8 aircraft rescues Indian sailors 
ದೇಶ

ಒಮಾನ್ ಸಮುದ್ರದಲ್ಲಿ ಮುಳುಗಿದ ಭಾರತದ ಹಡಗು; ಆಕಾಶದಿಂದಲೇ ಜೀವ ರಕ್ಷಕ ದೋಣಿ ಎಸೆದು 14 ನಾವಿಕರನ್ನು ರಕ್ಷಿಸಿದ ಅಮೆರಿಕ ವಿಮಾನ! US Navy P8 aircraft rescues Indian sailors

ಮಸ್ಕತ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಒಮಾನ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಭಾನುವಾರ ಭಾರಿ ರೋಮಾಂಚನಕಾರಿ ಜಲ ರಕ್ಷಣಾ ಕಾರ್ಯಾಚರಣೆಯೊಂದು ನಡೆದಿದೆ. 14 ಮಂದಿ ಭಾರತೀಯ ಸಿಬ್ಬಂದಿ ಇದ್ದ ಎಂಡಿವಿ ವಿರಾಟ್ 1 (US Navy P8 aircraft rescues Indian sailors) ಎಂಬ ಸರಕು ಸಾಗಣೆ ಹಡಗು ಸಮುದ್ರದ ಮಧ್ಯದಲ್ಲಿ ಮುಳುಗಲಾರಂಭಿಸಿತ್ತು. ಈ ವೇಳೆ ಅತ್ಯಂತ ವೇಗವಾಗಿ ಕಾರ್ಯಾಚರಣೆಗೆ ಇಳಿದ ಅಮೆರಿಕ ನೌಕಾಪಡೆಯ P-8 ಗಸ್ತು ವಿಮಾನವು ಸಮುದ್ರಕ್ಕೆ ಲೈಫ್ ರಾಫ್ಟ್ ಅನ್ನು ಏರ್‌ಡ್ರಾಪ್ ಮಾಡುವ ಮೂಲಕ ಎಲ್ಲಾ 14 ಭಾರತೀಯ ನಾವಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.
ಒಮಾನ್‌ನ ರಾಸ್ ಅಲ್ ಹದ್ದ್‌ನಿಂದ ಸುಮಾರು 80 ನಾಟಿಕಲ್ ಮೈಲಿ ದೂರದಲ್ಲಿ ಈ ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಹಡಗು ಮುಳುಗುತ್ತಿರುವುದನ್ನು ಖಚಿತಪಡಿಸಿಕೊಂಡ ಅಮೆರಿಕದ ವಿಮಾನವು ನಾವಿಕರ ತಲೆಯ ಮೇಲೆಯೇ ಸುರಕ್ಷಿತವಾಗಿ ಲೈಫ್ ರಾಫ್ಟ್ ಅನ್ನು ಕೆಳಗೆ ಹಾಕಿತು. ವಿಮಾನದಲ್ಲಿದ್ದ ಸಿಬ್ಬಂದಿ ಇಡೀ ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿದ್ದು, ಮುಳುಗುತ್ತಿದ್ದ ಹಡಗಿನಿಂದ ಹೊರಬಂದ ಎಲ್ಲಾ 14 ಭಾರತೀಯರು ಯಶಸ್ವಿಯಾಗಿ ಆ ಜೀವ ರಕ್ಷಕ ದೋಣಿಯನ್ನು ಹತ್ತಿ ಕುಳಿತುಕೊಂಡಿದ್ದನ್ನು ದೃಢಪಡಿಸಿದ್ದಾರೆ.

ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ

ಭಾರತೀಯ ನಾವಿಕರು ಅಪಾಯದಲ್ಲಿರುವ ಸುದ್ದಿ ತಿಳಿಯುತ್ತಿದ್ದಂತೆ, ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ನೌಕಾಪಡೆಯ ಯುದ್ಧ ಹಡಗುಗಳನ್ನು ತಕ್ಷಣವೇ ಘಟನಾ ಸ್ಥಳದ ಕಡೆಗೆ ತಿರುಗಿಸಲಾಯಿತು. ಇದೇ ಸಮಯದಲ್ಲಿ ಸೆಂಟ್‌ ಕಿಟ್ಸ್ ಮತ್ತು ನೆವಿಸ್ ದೇಶದ ಧ್ವಜ ಹೊತ್ತ ಎಂಬಿ ಜಬಲ್ ಅಲಿ 9 (MV Jabal Ali 9) ಎಂಬ ವಾಣಿಜ್ಯ ಹಡಗು ಕೂಡ ತನ್ನ ಮಾರ್ಗವನ್ನು ಬದಲಾಯಿಸಿ ನಾವಿಕರ ರಕ್ಷಣೆಗೆ ಧಾವಿಸಿದೆ. ಪ್ರಸ್ತುತ ಲೈಫ್ ರಾಫ್ಟ್‌ನಲ್ಲಿರುವ ಎಲ್ಲಾ 14 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಆ ಹಡಗಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಭಾರತೀಯ ಸಿಬ್ಬಂದಿ ಇದ್ದ ಹಡಗುಗಳ ಮೇಲೆಯೇ ಅಮೆರಿಕ ದಾಳಿ: ಉದ್ವಿಗ್ನತೆ ತೀವ್ರ!
ಒಂದೆಡೆ ಅಮೆರಿಕ ಸೇನೆ ಭಾರತೀಯ ನಾವಿಕರನ್ನು ರಕ್ಷಿಸಿದ್ದರೆ, ಇನ್ನೊಂದೆಡೆ ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮೂರು ಪ್ರಮುಖ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನೌಕಾಪಡೆಯೇ ಭೀಕರ ದಾಳಿ ನಡೆಸಿರುವುದು ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆದಿವೆ.
ಜೂನ್ 8 (MT Marivex): ಪಲಾವ್ ದೇಶದ ಧ್ವಜ ಹೊಂದಿದ್ದ ಹಡಗಿನ ಮೇಲೆ ಒಮಾನ್ ಕರಾವಳಿಯಲ್ಲಿ ಅಮೆರಿಕ ದಾಳಿ ನಡೆಸಿತ್ತು. ಅದರಲ್ಲಿದ್ದ 24 ಭಾರತೀಯರನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದರು.
ಜೂನ್ 10 (MT Settebello): ಇದೇ ಪ್ರದೇಶದಲ್ಲಿ ನಡೆದ ಮತ್ತೊಂದು ಭೀಕರ ದಾಳಿಗೆ 24 ಸಿಬ್ಬಂದಿ ಪೈಕಿ ಮೂವರು ಭಾರತೀಯ ನಾವಿಕರು ಉರಿಯುತ್ತಿದ್ದ ಹಡಗಿನೊಳಗೆ ಸಿಲುಕಿ ಸಜೀವ ದಹನವಾಗಿದ್ದರು.
ಜೂನ್ 11 (MT Jalveer): ಗಿನಿಯಾ-ಬಿಸೌ ಧ್ವಜ ಹೊಂದಿದ್ದ ಮತ್ತು 20 ಭಾರತೀಯ ನಾವಿಕರಿದ್ದ ಟ್ಯಾಂಕರ್ ಹಡಗನ್ನು ಅಮೆರಿಕ ಸೇನೆ ಹೊಡೆದುರುಳಿಸಿತು. ಅದೃಷ್ಟವಶಾತ್ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದರು.

ಅಮೆರಿಕ ವಿದೇಶಾಂಗ ಕಾರ್ಯದರ್ಶಿಗೆ ಜೈಶಂಕರ್ ಖಡಕ್ ವಾರ್ನಿಂಗ್!

ಭಾರತೀಯ ನಾವಿಕರ ಸರಣಿ ಸಾವು ಮತ್ತು ಹಡಗುಗಳ ಮೇಲಿನ ದಾಳಿಯನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶನಿವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರಿಗೆ ಖುದ್ದಾಗಿ ಫೋನ್ ಮಾಡಿ ಭಾರತದ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನಾವಿಕರ ಸುರಕ್ಷತೆಯೊಂದಿಗೆ ಆಟವಾಡದಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ಮಾರ್ಕೊ ರೂಬಿಯೋ, ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಎಲ್ಲಾ ವಾಣಿಜ್ಯ ಹಡಗುಗಳು ಅಮೆರಿಕ ಸೇನೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಅಮೆರಿಕ ಹೇರಿರುವ ಆರ್ಥಿಕ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್‌ನಿಂದ ಕಾನೂನುಬಾಹಿರವಾಗಿ ತೈಲ ಸಾಗಣೆ ಮಾಡುವುದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉದ್ಧಟತನದ ಉತ್ತರ ನೀಡಿದ್ದಾರೆ. ಈ ಬೆಳವಣಿಗೆಯು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ಭಾರಿ ಬಿರುಕು ಮೂಡಿಸಿದೆ,(ಏಜೆನ್ಸೀಸ್​).