ಸ್ವೀಡನ್​ಗೆ ಗುಡ್​ಬೈ ಹೇಳಿದ ಭಾರತೀಯ ಉದ್ಯಮಿ! Indian Entrepreneur 
ದೇಶ

ವಿದೇಶಿಗನೆಂಬ ದ್ವೇಷ: ತನ್ನ ಕಂಪನಿ ಮಾರಿ ಸ್ವೀಡನ್​ಗೆ ಗುಡ್​ಬೈ ಹೇಳಿದ ಭಾರತೀಯ ಉದ್ಯಮಿ! Indian Entrepreneur

ಪ್ರಮುಖ ಮುಖ್ಯಾಂಶಗಳು

  • ಸ್ವೀಡನ್‌ನಲ್ಲಿರುವ ತಮ್ಮ ಕಂಪನಿಯನ್ನು ಮಾರಾಟ ಮಾಡಿದ ಭಾರತೀಯ ಮೂಲದ ಉದ್ಯಮಿ
  • ವಿದೇಶಿಗನೆಂಬ ತಾರತಮ್ಯ ವ್ಯವಸ್ಥೆಯಿಂದ ಬೇಸತ್ತಿರುವ ಅಭಿಜಿತ್
  • ವ್ಯವಹಾರವನ್ನು ಮುಕ್ತವಾಗಿ ನಿರ್ವಹಿಸಲು ಬಿಡಲಿಲ್ಲ ಸ್ವೀಡಿಷ್ ವಲಸೆ ಸಂಸ್ಥೆ
ನವದೆಹಲಿ: ಭಾರತೀಯ ಮೂಲದ ಉದ್ಯಮಿಯೊಬ್ಬರು ( Indian Entrepreneur ) ಸ್ವೀಡನ್‌ನಲ್ಲಿರುವ ತಮ್ಮ ಕಂಪನಿಯನ್ನು ಮಾರಾಟ ಮಾಡಿ, ತಾಯ್ನಾಡಿಗೆ ಮರಳುತ್ತಿರುವುದಾಗಿ ಘೋಷಣೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಆ ಉದ್ಯಮಿಗೆ ಸ್ವೀಡನ್​ನಲ್ಲಿ ಏನಾಯ್ತು? ಏಕೆ ಕಂಪನಿ ಮಾರಿ ಭಾರತಕ್ಕೆ ವಾಪಾಸ್ಸಾಗುತ್ತಿದ್ದಾರೆ? ಇಂಥದ್ದೊಂದು ನಿರ್ಧಾರಕ್ಕೆ ಕಾರಣ ಏನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಭಾರತೀಯ ಮೂಲದ ಅಭಿಜಿತ್​ ನಾಗ್​ ಬಾಲಸುಬ್ರಹ್ಮಣ್ಯ ಎಂಬುವರು ಸ್ವೀಡನ್​ನಲ್ಲಿ ಹೈಡ್ರೋ ಸ್ಪೇಸ್ ಸ್ವೀಡನ್ ಎಬಿ ಹೆಸರಿನ ಕಂಪನಿ ನಡಸುತ್ತಿದ್ದರು. ಈ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅವರೇ ಆಗಿದ್ದರು. ಆದರೆ, ಅಲ್ಲಿನ ವಲಸೆ ಪ್ರಕ್ರಿಯೆಯಲ್ಲಿನ ನಿಷ್ಕ್ರಿಯತೆ ಮತ್ತು ವಿದೇಶಿಗನೆಂಬ ತಾರತಮ್ಯ ವ್ಯವಸ್ಥೆಯಿಂದ ಬೇಸತ್ತಿರುವ ಅಭಿಜಿತ್​, ತಮ್ಮ ಕಂಪನಿಯನ್ನು ಮಾರಿ, ತವರಿಗೆ ಮರಳುವ ನಿರ್ಧಾರ ಮಾಡಿದ್ದಾರೆ.
ಅಂದಹಾಗೆ, ಬಾಲಸುಬ್ರಹ್ಮಣ್ಯ ಅವರ ಕಂಪನಿಯು ಸ್ಥಳೀಯವಾಗಿ ವಸ್ತುಗಳನ್ನು ತಯಾರಿಸಿದರು ಸಹ, ಸ್ವೀಡಿಷ್ ವಲಸೆ ಸಂಸ್ಥೆ (ವಲಸೆ ವರ್ಕೆಟ್) ವ್ಯವಹಾರವನ್ನು ಮುಕ್ತವಾಗಿ ನಿರ್ವಹಿಸಲು ಅವಕಾಶ ನೀಡಲಿಲ್ಲ ಎಂಬ ಆರೋಪವನ್ನು ಬಾಲಸುಬ್ರಹ್ಮಣ್ಯ ಮಾಡಿದ್ದಾರೆ.
ನಾನು ಅಧಿಕೃತವಾಗಿ ಹೈಡ್ರೋ ಸ್ಪೇಸ್ ಸ್ವೀಡನ್ ಎಬಿಯ ಸ್ಥಾಪಕ ಮತ್ತು ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ. ಈ ತಿಂಗಳ ಅಂತ್ಯದ ವೇಳೆಗೆ ನಾನು ದೇಶವನ್ನು ತೊರೆಯಬೇಕಾಗಿರುವುದರಿಂದ ನಾನು ಕಂಪನಿಯನ್ನು ಮಾರಾಟ ಮಾಡಿದ್ದೇನೆ ಎಂದು ಬಾಲಸುಬ್ರಹ್ಮಣ್ಯ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ನನ್ನ ಸ್ವಇಚ್ಛೆಯಿಂದ ಹೊರಬರುವ ಆಯ್ಕೆಯಲ್ಲ. ಇದು ಸ್ವೀಡನ್​ನ ಅಸಮರ್ಥ ಮತ್ತು ಹೆಚ್ಚುತ್ತಿರುವ ಪ್ರತಿಕೂಲ ಸರ್ಕಾರಿ ವ್ಯವಸ್ಥೆಯಿಂದ ಹೊರ ದಬ್ಬುತ್ತಿರುವ ಸಂಗತಿಯಾಗಿದೆ ಎಂದಿದ್ದಾರೆ.
ಸ್ವೀಡನ್‌ನ "ಸ್ಟಾರ್ಟ್ಅಪ್ ಸ್ನೇಹಿ"ಯು ಒಂದು ವಿಚಿತ್ರ ಮುಖವಿದ್ದಂತೆ. ಏಕೆಂದರೆ ವಲಸೆ ಸಂಸ್ಥೆಯ ಅಸಮರ್ಥತೆ, ಕಾರ್ಯವಿಧಾನದ ಹೇಡಿತನ ಮತ್ತು ವ್ಯವಸ್ಥಿತ ಹಗೆತನದಿಂದಾಗಿ ವಿದೇಶಿ ಉದ್ಯಮಿಗಳಿಗೆ ಮಾರಕವಾಗಿದೆ. ಇಂತಹ ವ್ಯವಸ್ಥೆಯಿಂದ ಮನನೊಂದಿರುವ ನಾನು, ಕಾನೂನು ಹೋರಾಟ ಮಾಡುವ ಯಾವ ಉದ್ದೇಶವೂ ನನಗಿಲ್ಲ, ಬದಲಾಗಿ ನನ್ನ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತಕ್ಕೆ ಮರಳಲು ತೀರ್ಮಾನಿಸಿದ್ದೇನೆ ಎಂದು ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.
ವಿದೇಶಿ ದ್ವೇಷಿ ಮನಸ್ಥಿತಿ ಎಂದು ತೋರುವ ವ್ಯವಸ್ಥೆಯ ವಿರುದ್ಧ ಕಾನೂನು ಹೋರಾಟದಲ್ಲಿ ನನ್ನ ಹಣ ಮತ್ತು ಸಮಯವನ್ನು ಹಾಳು ಮಾಡುವ ಶಕ್ತಿ, ಸಾಮರ್ಥ್ಯ ಮತ್ತು ಬಯಕೆ ಇಲ್ಲ. ಬದಲಾಗಿ, ನಾನು ಸ್ವಲ್ಪ ವಿರಾಮ ತೆಗೆದುಕೊಂಡು, ಸ್ವೀಡಿಷ್ ವಲಸೆ ಸಂಸ್ಥೆಯ ನಿಯಮಗಳಿಂದ ಹಾಳಾದ ನನ್ನ ಮಾನಸಿಕ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ತಾಯ್ನಾಡಿಗೆ ಹಿಂತಿರುಗಲು ನಿರ್ಧರಿಸಿದ್ದೇನೆ. ನನ್ನ ಕಂಪನಿಯನ್ನು ಹಾಳು ಮಾಡುವುದರ ಜೊತೆಗೆ ನೀವು ಸ್ವೀಡನ್​ನ ಭವಿಷ್ಯವನ್ನು ಹಾಳು ಮಾಡುತ್ತೀದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಬಾಲಸುಬ್ರಹ್ಮಣ್ಯ ಗುಡುಗಿದ್ದಾರೆ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಅಂತಾರಾಷ್ಟ್ರೀಯ ಮಾರ್ಕೆಟಿಂಗ್‌ನಲ್ಲಿ ಹಾಗೂ ಸುಸ್ಥಿರ ಕೃಷಿಯಲ್ಲಿ ಎರಡೆರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿರುವ ಬಾಲಸುಬ್ರಹ್ಮಣ್ಯ, ತಮ್ಮ ಫೈಲ್ ಅನ್ನು ನಿರ್ವಹಿಸುವ ಕೇಸ್ ಅಧಿಕಾರಿಗಳಿಗೆ ಮೂಲಭೂತ ವ್ಯವಹಾರ ತಿಳುವಳಿಕೆಯೇ ಇಲ್ಲ ಎಂದು ಹೇಳುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ, (ಏಜೆನ್ಸೀಸ್​).