ರಿಕಿ ಪಾಂಟಿಂಗ್ ಮತ್ತು ಜಸ್ಪ್ರೀತ್ ಬುಮ್ರಾ 
ದೇಶ

ಸೆಮಿಫೈನಲ್​ನಲ್ಲಿ ಭಾರತ ಗೆಲುವು; ಜಸ್ಪ್ರೀತ್ ಬುಮ್ರಾನಂತಹ ಬೌಲರ್ ಯಾವ ತಂಡದಲ್ಲೂ ಇಲ್ಲ: ರಿಕಿ ಪಾಂಟಿಂಗ್​ ಹೇಳಿದ್ದೇನು? | T20 World Cup

ಮುಂಬೈ: ಗುರುವಾರ(ಮಾ. 05) ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ(T20 World Cup) ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್‌ಗಳಿಂದ ಭರ್ಜರಿ ಜಯಗಳಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದು, ಬೌಲರ್ ಜಸ್ಪ್ರೀತ್ ಬುಮ್ರಾ ತಂಡದ ಗೆಲುವಿನ ನಿಜವಾದ ಹೀರೋ ಎಂದು ಆಸ್ಟೇಲಿಯಾ ತಂಡದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಹಾಡಿ ಹೊಗಳಿದ್ದಾರೆ.
ಅಂತಿಮ ಹಂತದವರೆಗೂ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಂದ್ಯವನ್ನು ಇಂಗ್ಲೆಂಡ್​ ತಂಡದಿಂದ ಕೈಜಾರಲು ಮುಖ್ಯ ಕಾರಣ ಜಸ್ಪ್ರೀತ್ ಬುಮ್ರಾ ಎಸೆದ 16ನೇ ಮತ್ತು 18ನೇ ಓವರ್‌ಗಳು. ಈ ಎರಡು ಓವರ್‌ಗಳಲ್ಲಿ ಕೇವಲ 14 ರನ್ ನೀಡಿದ ಬುಮ್ರಾ, ಭಾರತದ ಗೆಲುವಿನ ಆಸೆಯನ್ನು ಮತ್ತಷ್ಟು ಚಿಗುರಿಸಿದರು.
ಭಾರತದ ಪಂದ್ಯದ ಗೆಲುವಿನ ಬಗ್ಗೆ ಮತ್ತು ಬುಮ್ರಾ ಬಗ್ಗೆ ಮಾತನಾಡಿರುವ ರಿಕಿ ಪಾಂಟಿಂಗ್, ಈ ಪಂದ್ಯವನ್ನು ನೋಡಿದ ನಂತರ, ನಾನು ಒಂದೇ ಒಂದು ವಿಷಯವನ್ನು ಹೇಳುತ್ತೇನೆ. ಜಸ್ಪ್ರಿತ್ ಬುಮ್ರಾ ರೂಪದಲ್ಲಿ ಭಾರತವು ಅದ್ಬುತ ಬೌಲರ್ ಅನ್ನು ಪಡೆದುಕೊಂಡಿದೆ. ಅದು ಪ್ರಸ್ತುತ ವಿಶ್ವದ ಬೇರೆ ಯಾವುದೇ ತಂಡಕ್ಕೆ ಇಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನ ಶ್ರೇಯವೂ ಅವರಿಗೆ ಸಲ್ಲುತ್ತದೆ ಎಂದು ಹಾಡಿ ಹೊಗಳಿದ್ದಾರೆ.
ಅದೇ ರೀತಿ ಆರಂಭಿಕವಾಗಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಬೃಹತ್ ಮೊತ್ತ ಕಲೆ ಹಾಕಲು ಸಹಾಯ ಮಾಡಿದ್ದ ಆರಂಭಿಕ ಆಟಗಾರ ಸ್ಯಾಮ್ಸನ್​ ಸಹ, ಇಂಗ್ಲೆಂಡ್ ವಿರುದ್ಧದ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಬುಮ್ರಾಗೆ ಅರ್ಪಿಸಿದ್ದಾರೆ.
ತಂಡ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ತುಂಬಾ ಸಂತೋಷವಾಗಿದೆ, ಎಲ್ಲಾ ಶ್ರೇಯಸ್ಸು ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ. ವಿಶ್ವದರ್ಜೆಯ ಬೌಲರ್ ಆಗಿರುವ ಅವರು ಇಂದು ಕೂಡ ಅದನ್ನು ಸಾಬೀತುಪಡಿಸಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ನಿಜಕ್ಕೂ ಅವರಿಗೆ ಸಲ್ಲಬೇಕು. ಬುಮ್ರಾ ಮಾಡಿದ ಆ ಎರಡು ಓವರ್‌ಗಳಿಂದ ಪಂದ್ಯದ ಗತಿಯೇ ಬದಲಾಯ್ತು, ಅವರು ಆ ರೀತಿ ಬೌಲಿಂಗ್ ಮಾಡದಿದ್ದರೆ ನನಗೆ ಈ ಗೌರವ ಸಿಗುತ್ತಿರಲಿಲ್ಲ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಫೈನಲ್‌ನಲ್ಲಿ ಕಿವೀಸ್ ಸವಾಲು

ಭಾರತ ತಂಡ ಭಾನುವಾರ (ಮಾ.8) ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ (ಏಜೆನ್ಸೀಸ್).