ಮಿಲಿಟರಿ ಕ್ಷೇತ್ರದಲ್ಲಿ ನಮ್ಮ ದೇಶದ ಭವಿಷ್ಯ ಉಜ್ವಲವಾಗಿದೆ: ರಾಜನಾಥ್​ ಸಿಂಗ್​ 
ದೇಶ

ಮುಂದಿನ 30 ವರ್ಷದಲ್ಲಿ ಭಾರತವೇ ನಂ.1: ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ನಮ್ಮ ಭವಿಷ್ಯ ಉಜ್ವಲವಾಗಲಿದೆ; ರಾಜನಾಥ್​ ಸಿಂಗ್ ಘೋಷಣೆ! Rajnath Singh on Arms Export

ಪ್ರಮುಖ ಮುಖ್ಯಾಂಶಗಳು

  • ಮುಂದಿನ 30 ವರ್ಷದಲ್ಲಿ ಭಾರತ ನಂಬರ್​ 1 ಶಸ್ತ್ರಾಸ್ತ್ರ ರಫ್ತು ದೇಶವಾಗಲಿದೆ
  • ಶಿರಡಿಯಲ್ಲಿ ಮದ್ದುಗುಂಡುಗಳ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ
  • ಮಿಲಿಟರಿ ಕ್ಷೇತ್ರದಲ್ಲಿ ನಮ್ಮ ದೇಶದ ಭವಿಷ್ಯ ಉಜ್ವಲವಾಗಿದೆ: ರಾಜನಾಥ್​ ಸಿಂಗ್​
ಶಿರಡಿ: ಒಂದು ಕಾಲದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಮುಂದಿನ ದಿನಗಳಲ್ಲಿ ಜಗತ್ತಿಗೇ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ದೇಶವಾಗಿ ಹೊರಹೊಮ್ಮಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh on Arms Export) ಹೇಳಿಕೆ ನೀಡಿದ್ದಾರೆ.
ಶನಿವಾರ (ಮೇ.23) ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಅತ್ಯಾಧುನಿಕ ಮದ್ದುಗುಂಡುಗಳ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ 25 ರಿಂದ 30 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತುದಾರ (Largest Arms Exporter) ರಾಷ್ಟ್ರವಾಗುವುದನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ವಲಯದಲ್ಲಿ ಖಾಸಗಿ ಕಂಪನಿಗಳಿಗೆ ಬಂಪರ್ ಆಫರ್!

ಭಾರತವು ರಕ್ಷಣಾ ರಂಗದಲ್ಲಿ ಸ್ವಾವಲಂಬಿ ಆಗಬೇಕಾದರೆ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಮಾತ್ರ ಸಾಧ್ಯವಿಲ್ಲ, ಅದಕ್ಕೆ ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ರಕ್ಷಣಾ ಸಚಿವರು ಕರೆ ನೀಡಿದ್ದಾರೆ. ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಪಾತ್ರವನ್ನು ಶೇ. 50 ಕ್ಕೆ ಕೊಂಡೊಯ್ಯುವ ಬೃಹತ್ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ನಮ್ಮ ಖಾಸಗಿ ಕಂಪನಿಗಳು ರಕ್ಷಣಾ ವಲಯದಲ್ಲಿ ಕೇವಲ ನಟ್ ಮತ್ತು ಬೋಲ್ಟ್‌ಗಳನ್ನು ಸಪ್ಲೈ ಮಾಡುವ ಸಣ್ಣ ಉದ್ಯಮಗಳಾಗಿ ಉಳಿದಿಲ್ಲ. ಬದಲಿಗೆ, ದೇಶದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ತಯಾರಿಸುವ ಮಟ್ಟಿಗೆ ಬೆಳೆದಿದ್ದಾರೆ. ಸರ್ಕಾರದ ದೂರದೃಷ್ಟಿ ಮತ್ತು ಖಾಸಗಿ ವಲಯದ ಹೊಸ ಆಲೋಚನೆಗಳು ಒಟ್ಟಿಗೆ ಸೇರಿದರೆ ಭಾರತ ರಕ್ಷಣಾ ರಂಗದಲ್ಲಿ ಹೊಸ ಎತ್ತರ ತಲುಪಲಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಯಾರ ಹವಾ ಎಷ್ಟಿದೆ?

ಅಂತರರಾಷ್ಟ್ರೀಯ ರಕ್ಷಣಾ ಸಂಶೋಧನಾ ಸಂಸ್ಥೆಯಾದ SIPRI (Stockholm International Peace Research Institute) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಪ್ರಸ್ತುತ ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಅಮೆರಿಕ ನಂಬರ್ ಒನ್ ಸ್ಥಾನದಲ್ಲಿದೆ. ವಿಶ್ವದ ಒಟ್ಟು ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ.42 ರಷ್ಟು ಪಾಲು ಕೇವಲ ಅಮೆರಿಕ ಒಂದದ್ದೇ ಆಗಿದೆ. ಇದರ ನಂತರದ ಸ್ಥಾನದಲ್ಲಿ ಫ್ರಾನ್ಸ್ ಶೇ.10 ಇದ್ದರೆ, ರಷ್ಯಾ ಶೇ.7 ರಷ್ಟು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಜರ್ಮನಿ ಮತ್ತು ಚೀನಾ ತಲಾ ಶೇ.6 ರಷ್ಟು ಹಾಗೂ ಇಟಲಿ ಶೇ.5 ಮತ್ತು ಇಸ್ರೇಲ್ ಶೇ. 4 ರಷ್ಟು ರಫ್ತು ಮಾಡುತ್ತವೆ.

ಭಾರತದ ಮುಂದಿರುವ ಸವಾಲು ಮತ್ತು ಆಶಾಕಿರಣ

SIPRI ವರದಿಯ ಪ್ರಕಾರ, ಸದ್ಯಕ್ಕೆ ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತದ ಪಾಲು ಕೇವಲ ಶೇ. 0.2 ರಷ್ಟಿದೆ ಮತ್ತು ಭಾರತ ಇಂದಿಗೂ ವಿಶ್ವದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿದೆ. ಈ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಲು ಮೋದಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲೇ ಕ್ಷಿಪಣಿಗಳು, ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳನ್ನು ತಯಾರಿಸಲಾಗುತ್ತಿದೆ. ಬ್ರಹ್ಮೋಸ್ ಕ್ಷಿಪಣಿಯಂತಹ ಮಾರಕ ಶಸ್ತ್ರಾಸ್ತ್ರಗಳನ್ನು ಈಗಾಗಲೇ ಭಾರತ ಬೇರೆ ದೇಶಗಳಿಗೆ ರಫ್ತು ಮಾಡಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಈ ರಫ್ತಿನ ಪ್ರಮಾಣ ಏರಿಕೆಯಾದರೆ ಭಾರತ ಖಂಡಿತವಾಗಿ ಟಾಪರ್​ಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಮುದ್ರಿಸಲಿದೆ, (ಏಜನ್ಸೀಸ್​).