ಕೇಂದ್ರ ಗೃಹಸಚಿವ ಅಮಿತ್ ಶಾ 
ದೇಶ

ಮಾರ್ಚ್ 31ರೊಳಗೆ ಭಾರತ ನಕ್ಸಲ್ ಮುಕ್ತ ದೇಶ; ಮಾವೋವಾದಿ ವಿರೋಧಿ ಹೋರಾಟದಲ್ಲಿ ಸಕರಾತ್ಮಕ ಫಲಿತಾಂಶ; ಅಮಿತ್ ಶಾ | Amit Shah

ಪ್ರಮುಖ ಮುಖ್ಯಾಂಶಗಳು

  • 2026 ಮಾರ್ಚ್​ 31ರೊಳಗೆ ಭಾರತ ನಕ್ಸಲ್ ಮುಕ್ತ ದೇಶವಾಗಲಿದೆ
  • ನಕ್ಸಲ್ ವಿರೋಧಿ ಆಪರೇಷನ್ ಆರಂಭಿಸಿರುವ ಕೇಂದ್ರ ಸರ್ಕಾರ
  • ದೇಶಕ್ಕೆ ವಿನಾಶಕಾರಿ ಕಮ್ಯೂನಿಸ್ಟ್ ಸಿದ್ದಾಂತದ ಅಗತ್ಯವಿಲ್ಲ ಎಂದ ಶಾ
ರಾಯ್​ಪುರ: 2026 ಮಾರ್ಚ್​ 31ರೊಳಗೆ ಭಾರತ ನಕ್ಸಲ್ ಮುಕ್ತ ದೇಶವಾಗಲಿದೆ. ಮಾವೋವಾದಿ ವಿರೋಧಿ ಹೋರಾಟದಲ್ಲಿ ನಮಗೆ ಸಕರಾತ್ಮಕ ಫಲಿತಾಂಶ ಬಂದಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ.
ಭಾನುವಾರ(ಫೆ. 08) ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಕುರಿತು ಛತ್ತೀಸ್‌ಗಢ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿರುವ ಅವರು, ಭದ್ರತಾ ಪಡೆಗಳ ಏಕೀಕರಣ, ಮೂಲಸೌಕರ್ಯ ವಿಸ್ತರಣೆ, ಮಾವೋವಾದಿಗಳ ಹಣಕಾಸು ಜಾಲವನ್ನು ಅಡ್ಡಿಪಡಿಸುವುದು ಹಾಗೂ ಶರಣಾಗತಿ ನೀತಿಗಳು ನಕ್ಸಲ್ ವಿರುದ್ಧದ ಹೋರಾಟದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ ಎಂದಿದ್ದಾರೆ.
ದೇಶಕ್ಕೆ ಇನ್ಮುಂದೆ ವಿನಾಶಕಾರಿ ಕಮ್ಯೂನಿಸ್ಟ್ ಸಿದ್ದಾಂತದ ಅಗತ್ಯವಿಲ್ಲ. ಕಮ್ಯುನಿಸ್ಟ್ ಆಡಳಿತ ಇರುವಲ್ಲಿ ಯಾವುದೇ ಅಭಿವೃದ್ಧಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಆ ಸಿದ್ಧಾಂತದ ಅವಧಿ ಮುಗಿದಿದೆ. ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಅವರ ಆಡಳಿತ ಕೊನೆಗೊಂಡಿದೆ. ಕೇರಳದಲ್ಲಿಯೂ ಸಹ ತಿರುವನಂತಪುರಂನಿಂದ ಬದಲಾವಣೆ ಪ್ರಾರಂಭವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಡಿಸಿಎಂ ವಿಜಯ್ ಶರ್ಮಾ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ನಿರ್ದೇಶಕ, ಗೃಹ ವ್ಯವಹಾರಗಳ ಇಲಾಖೆಯ ವಿಶೇಷ ಕಾರ್ಯದರ್ಶಿ, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಎನ್‌ಐಎ ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ, ಜಾರ್ಖಂಡ್, ತೆಲಂಗಾಣ ಪೊಲೀಸ್ ಮುಖ್ಯಸ್ಥರು ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ (ಏಜೆನ್ಸೀಸ್).