ಭಾರತ vs ಬ್ರಿಟನ್... ಯಾವ ದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಉತ್ತಮವಾಗಿದೆ? ಈ ವೈದ್ಯೆ ಹೇಳಿದ ಮಾತು ಸಖತ್ ವೈರಲ್! India vs UK Healthcare
- ಬ್ರಿಟನ್‌ಗಿಂತ ಭಾರತದ ಆರೋಗ್ಯ ವ್ಯವಸ್ಥೆಯೇ ಮೇಲು ಎಂದು ಅಭಿಪ್ರಾಯಪಟ್ಟ ವೈದ್ಯೆ
- ರಾತ್ರಿ ವೇಳೆ ತುರ್ತು ಔಷಧಗಳು ಸುಲಭವಾಗಿ ಸಿಗುವುದರಿಂದ ಭಾರತವೇ ಬೆಸ್ಟ್ ಎಂದ ಡಾ. ದೀಪಾಂಜಲಿ
- ಪಾಶ್ಚಿಮಾತ್ಯ ದೇಶಗಳಲ್ಲಿ ತುರ್ತು ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಕಷ್ಟಕರ
- ವೈದ್ಯರ ಈ ವೈರಲ್ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ನವದೆಹಲಿ: ಭಾರತದ ಆರೋಗ್ಯ ವ್ಯವಸ್ಥೆ ಮತ್ತು ಪಾಶ್ಚಿಮಾತ್ಯ ದೇಶಗಳ ವೈದ್ಯಕೀಯ ಸೇವೆಗಳ ( India vs UK Healthcare ) ನಡುವಿನ ವ್ಯತ್ಯಾಸದ ಕುರಿತು ಭಾರತೀಯ ವೈದ್ಯೆಯೊಬ್ಬರು ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾತ್ರಿ ವೇಳೆ ಹಠಾತ್ತನೆ ಅಶಕ್ತರಾದ ತಮ್ಮ ಪತಿಗೆ ಔಷಧಿಗಳನ್ನು ತರಲು ಕಾರಿನಲ್ಲಿ ತೆರಳುವಾಗಲೇ ಭಾರತದಲ್ಲಿ ಸಿಗುವ ತುರ್ತು ವೈದ್ಯಕೀಯ ಸೌಲಭ್ಯಗಳ ಮಹತ್ವವನ್ನು ಈ ವೈದ್ಯೆ ಕೊಂಡಾಡಿದ್ದಾರೆ.
ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಡಾ. ದೀಪಾಂಜಲಿ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ತಮ್ಮ ಪತಿ (ಅವರೂ ಕೂಡ ವೈದ್ಯರು) ದಿಢೀರನೇ ತೀವ್ರ ತಲೆನೋವು ಹಾಗೂ ವಾಂತಿಯಿಂದ ಬಳಲಿದ ಘಟನೆಯನ್ನು ವಿವರಿಸಿದ್ದಾರೆ. ರಾತ್ರಿ 10 ಗಂಟೆಯ ಸಮಯದಲ್ಲಿ ಪತಿಗೆ ತುರ್ತಾಗಿ ಔಷಧ ಹಾಗೂ ಐವಿ ಇಂಜೆಕ್ಷನ್ ತರಲು ಹೊರಟಾಗ ಆದ ಅನುಭವದಿಂದಾಗಿ ಭಾರತದಲ್ಲಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ ಎಂದು ದೀಪಾಂಜಲಿ ಅವರು ಹೇಳಿದ್ದಾರೆ.
ಬ್ರಿಟನ್ ಅಥವಾ ಇತರೆ ಪಾಶ್ಚಿಮಾತ್ಯ ದೇಶಗಳಲ್ಲಿ ನೌಕರರ ಕೆಲಸದ ಸಮಯ ಮುಗಿದ ಬಳಿಕ ತುರ್ತು ವೈದ್ಯಕೀಯ ನೆರವು ಪಡೆಯುವುದು ಅಥವಾ ಸಾಮಾನ್ಯ ಔಷಧಗಳನ್ನು ತರುವುದು ಎಷ್ಟು ಕಷ್ಟಕರ ಎಂಬುದನ್ನು ದೀಪಾಂಜಲಿ ಅವರು ವಿವರಿಸಿದ್ದಾರೆ. ಅಲ್ಲಿನ ತುರ್ತು ಚಿಕಿತ್ಸಾ ವಿಭಾಗಗಳು ಸದಾ ಒತ್ತಡದಲ್ಲಿರುವುದರಿಂದ, ಸಾಮಾನ್ಯ ಸಮಯದಲ್ಲಿಯೂ ಗಂಟೆಗಟ್ಟಲೆ ಸಾಲಿನಲ್ಲಿ ಕಾಯಬೇಕು ಮತ್ತು ತಕ್ಷಣಕ್ಕೆ ವೈದ್ಯಕೀಯ ನೆರವು ಸಿಗುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಭಾರತದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದ್ದು, ರಾತ್ರಿಯ ಯಾವುದೇ ಸಮಯದಲ್ಲಿ ಬೇಕಾದರೂ ಹೊರಹೋಗಿ ಸುಲಭವಾಗಿ ಔಷಧಗಳನ್ನು ತಂದುಕೊಂಡು ರೋಗಿಯನ್ನು ಆರೈಕೆ ಮಾಡಬಹುದು ಎಂದು ದೀಪಾಂಜಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಎದುರಾಗುವ ಇಂತಹ ತುರ್ತು ಸಂದರ್ಭಗಳಲ್ಲಿ ಭಾರತದ 24 ಗಂಟೆಗಳ ಲಭ್ಯತೆಯುಳ್ಳ ವೈದ್ಯಕೀಯ ಸೇವೆಗಳು ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಅತಿ ದೊಡ್ಡ ನೆಮ್ಮದಿಯನ್ನು ನೀಡುತ್ತವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಹಾಗೆಂದು ಭಾರತದ ವೈದ್ಯಕೀಯ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳೇ ಇಲ್ಲ ಎಂದು ತಾವು ಹೇಳುತ್ತಿಲ್ಲ ಸ್ಪಷ್ಟಪಡಿಸಿರುವ ಡಾ. ದೀಪಾಂಜಲಿ, ನಮ್ಮ ದೇಶದಲ್ಲೂ ಕೂಡ ವ್ಯವಸ್ಥೆ ಸುಧಾರಣೆಯಾಗಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಯಾವ ದೇಶವೂ ಕೂಡ ಶೇ. ನೂರರಷ್ಟು ಪರಿಪೂರ್ಣವಾದ ಅನುಭವವನ್ನು ನೀಡುವುದಿಲ್ಲ ಎಂಬುದನ್ನು ನಾವು ಮರೆಯಬಾರದು ಎಂದಿರುವ ಅವರು, ಒಟ್ಟಾರೆಯಾಗಿ ಭಾರತದಲ್ಲಿ ತುರ್ತು ಚಿಕಿತ್ಸೆ ಮತ್ತು ಔಷಧಗಳು ಸಿಗುವ ಸುಲಭತೆಯು ಇಲ್ಲಿನ ವ್ಯವಸ್ಥೆಯ ದೊಡ್ಡ ಪ್ಲಸ್ ಪಾಯಿಂಟ್ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರ ಕಡೆಯಿಂದ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಭಾರತದಲ್ಲಿ 24 ಗಂಟೆಗಳ ಕಾಲ ಲಭ್ಯವಿರುವ ಮೆಡಿಕಲ್ ಶಾಪ್‌ಗಳು ಮತ್ತು ಸುಲಭವಾಗಿ ಸಿಗುವ ವೈದ್ಯಕೀಯ ಸೇವೆಗಳ ಬಗ್ಗೆ ಅನೇಕರು ಧ್ವನಿಗೂಡಿಸಿದ್ದರೆ, ಇನ್ನು ಕೆಲವರು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸುಲಭವಾಗಿ ಔಷಧ ಸಿಗುವುದರ ಬಗ್ಗೆಯೂ ಕಳವಳಗಳನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಭಾರತ ಮತ್ತು ಬ್ರಿಟನ್‌ನ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಕುರಿತ ಈ ಚರ್ಚೆ ಸದ್ಯ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ, (ಏಜೆನ್ಸೀಸ್).