ದೇಶದಲ್ಲಿ ತಗ್ಗಿದ ನಿರುದ್ಯೋಗ ಸಮಸ್ಯೆ! ಈ ವರ್ಷದಲ್ಲಿ ಪ್ರಮಾಣ ಶೇ.5.1ಕ್ಕೆ ಇಳಿಕೆ; ಹೀಗಿದೆ ವರದಿ | Unemployment Rate 2026 
ದೇಶ

ದೇಶದಲ್ಲಿ ತಗ್ಗಿದ ನಿರುದ್ಯೋಗ ಸಮಸ್ಯೆ! ಈ ವರ್ಷದಲ್ಲಿ ಪ್ರಮಾಣ ಶೇ.5.1ಕ್ಕೆ ಇಳಿಕೆ; ಹೀಗಿದೆ ವರದಿ | Unemployment Rate 2026

Unemployment Rate 2026: ಭಾರತದಲ್ಲಿ ನಿರುದ್ಯೋಗ ಸಮಸ್ಯೆಯು ಅತಿದೊಡ್ಡ ಸಮಸ್ಯೆಯಾಗಿ ಕಾಡಿದ್ದು, ಇದಕ್ಕೆ ಸೂಕ್ತ ಪರಿಹಾರ ಯಾವಾಗ? ಇಳಿಕೆ ಅನ್ನೋದು ಕಾಣೋದೇ ಇಲ್ವಾ? ಎಂಬ ಹತ್ತಾರು ಪ್ರಶ್ನೆಗಳು ಯುವಜನತೆಯಲ್ಲಿ ಕಾಡುತ್ತಿತ್ತು. ಅಂತೆಯೇ, ಈ ವರ್ಷ ಜುಲೈ ಮತ್ತು ಸೆಪ್ಟೆಂಬರ್ ತ್ರೈಮಾಸಿಕದ ನಡುವೆ ದೇಶದಲ್ಲಿ ನಿರುದ್ಯೋಗ ದರವು ಶೇ.5.1ಕ್ಕೆ ಇಳಿಕೆಯಾಗಿದೆ.

ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ

ಈ ಮೊದಲು, ಈ ದರವು ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಶೇ.5.4ರಷ್ಟಿತ್ತು. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿರುದ್ಯೋಗ ದರ ಶೇ.5.2 ರಷ್ಟಿತ್ತು. ಇತ್ತೀಚಿನ ಬಿಡುಗಡೆಯಾದ ಅಂಕಿ-ಅಂಶಗಳು ದೇಶದಲ್ಲಿ ಉದ್ಯೋಗ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಎಂದು ಸೂಚಿಸುತ್ತದೆ. ಹೊಸ ವರದಿಯಲ್ಲಿನ ಪ್ರಮುಖ ಬೆಳವಣಿಗೆಗಳು ನಿರುದ್ಯೋಗದ ಕುಸಿತ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ಹೆಚ್ಚಳವಾಗಿದೆ ಎಂದು ತೋರಿಸಿದೆ. ಅಲ್ಲಿಗೆ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ಸ್ವಲ್ಪ ಹೆಚ್ಚಾಗಿದೆ.

ಮಹಿಳೆಯರ ಶೇಕಡಾವಾರು ಪ್ರಮಾಣ

ರಾಷ್ಟ್ರೀಯ ಅಂಕಿ-ಅಂಶ ಕಚೇರಿ (ಎನ್‌ಎಸ್‌ಒ) ಮಂಗಳವಾರ ಬಿಡುಗಡೆಗೊಳಿಸಿದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್) ಡೇಟಾದಲ್ಲಿ ಈ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಇದರಲ್ಲಿ, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯಲ್ಲಿ ಹೆಚ್ಚಳವಾಗಿದೆ. ಕೆಲಸ ಮಾಡುತ್ತಿರುವ ಅಥವಾ ಕೆಲಸಕ್ಕೆ ಪ್ರಯತ್ನಿಸುತ್ತಿರುವ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ.

2026ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರವು (LFPR) 33.2 ಶೇಕಡಾದಿಂದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 34.7 ಶೇಕಡಾಕ್ಕೆ ಏರಿದೆ. ಈ ಅಂಕಿ-ಅಂಶಗಳು ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಪ್ರವೇಶಿಸುತ್ತಿದ್ದಾರೆ ಎಂಬುದನ್ನು ಸೂಚಿಸಿದೆ. ಈ ಡೇಟಾ ಪ್ರಕಾರ, ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಬರುತ್ತಿದ್ದಾರೆ.

ಹಳ್ಳಿಗಳಲ್ಲಿ ನಿರುದ್ಯೋಗ ಕುಸಿತ! ನಗರಗಳಲ್ಲಿ?

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಿರುದ್ಯೋಗದ ಅಂಕಿ-ಅಂಶಗಳನ್ನು ನೋಡಿದಾಗ, ವಿಭಿನ್ನ ಸನ್ನಿವೇಶಗಳು ಕಂಡುಬಂದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.4.8ರಷ್ಟಿದ್ದ ನಿರುದ್ಯೋಗ ದರವು ಜುಲೈ-ಸೆಪ್ಟೆಂಬರ್ ವೇಳೆಗೆ ಶೇ.4.3ಕ್ಕೆ ಇಳಿದಿದೆ. ಮತ್ತೊಂದೆಡೆ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು 6.7 ಶೇ.ದಿಂದ 6.8ಕ್ಕೆ ಸ್ವಲ್ಪ ಹೆಚ್ಚಾಗಿದೆ.

ನಿರುದ್ಯೋಗ ದರ ವಿವರ ಈ ಕೆಳಕಂಡಂತಿವೆ

  • ಗ್ರಾಮೀಣ ಭಾಗದ ಪುರುಷರಲ್ಲಿ ನಿರುದ್ಯೋಗವು ಶೇ.4.7ರಿಂದ 4.4ಕ್ಕೆ ಇಳಿಕೆ

  • ನಗರ ಪ್ರದೇಶದ ಪುರುಷರಲ್ಲಿ ನಿರುದ್ಯೋಗವು ಶೇ.6.2ರಿಂದ 6.1ಕ್ಕೆ ಕುಸಿತ

  • ನಗರ ಪ್ರದೇಶದ ಮಹಿಳೆಯರಲ್ಲಿ ನಿರುದ್ಯೋಗವು ಶೇ.9ರಿಂದ 8.8ಕ್ಕೆ ಇಳಿಕೆ

ಹಳ್ಳಿಗಳಲ್ಲಿ ಸ್ವಯಂ ಉದ್ಯೋಗ ಹೆಚ್ಚಳ

ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಏಪ್ರಿಲ್-ಜೂನ್ 2026 ತ್ರೈಮಾಸಿಕದಲ್ಲಿ, ಶೇ.61.4ರಷ್ಟು ಗ್ರಾಮೀಣ ಉದ್ಯೋಗಿಗಳು ಸ್ವಯಂ ಉದ್ಯೋಗಿಗಳಾಗಿದ್ದರು. ಆದಾಗ್ಯೂ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಪಾಲು ಶೇ.62.7ಕ್ಕೆ ಏರಿತು. ಕೃಷಿ, ಸಣ್ಣ ಉದ್ಯಮಗಳು ಮತ್ತು ಸ್ವಯಂ ವೃತ್ತಿಗಳಂತಹ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಪಾಲು ಹೆಚ್ಚಾಗಿದೆ ಎಂದು ಈ ಅಂಕಿ ಅಂಶಗಳು ತಿಳಿಸಿವೆ.

ನಗರಗಳಲ್ಲಿ ಉದ್ಯೋಗಗಳು ಹೆಚ್ಚಳ

ನಗರ ಪ್ರದೇಶಗಳಲ್ಲಿ ನಿಯಮಿತ ಕೂಲಿ ಉದ್ಯೋಗದಲ್ಲಿರುವವರ ಪಾಲು ಕೂಡ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನಗರ ಪ್ರದೇಶಗಳಲ್ಲಿನ ಸಾಮಾನ್ಯ ವೇತನ ನೌಕರರ ಪಾಲು ಶೇ.49.3ರಷ್ಟಿತ್ತು. ಆದರೆ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದು ಶೇ.49.6ಕ್ಕೆ ಏರಿದೆ. ಅದೇ ಸಮಯದಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದೈನಂದಿನ ಕೂಲಿ ಕಾರ್ಮಿಕರ ಪಾಲು ಕುಸಿದಿದೆ.

  • ಗ್ರಾಮೀಣ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರ ಪಾಲು ಶೇ.21.7ಕ್ಕೆ ಇಳಿದಿದೆ

  • ನಗರ ಪ್ರದೇಶಗಳಲ್ಲಿ ದಿನಗೂಲಿ ಕಾರ್ಮಿಕರ ಪಾಲು ಶೇ.10.7ಕ್ಕೆ ಕುಸಿದಿದೆ.

ಉದ್ಯೋಗ ಅಂಕಿಅಂಶಗಳಲ್ಲಿನ ಪ್ರಮುಖ ಬದಲಾವಣೆಗಳು

ಇತ್ತೀಚಿನ PLFS ವರದಿಯ ಪ್ರಕಾರ, ದೇಶದಲ್ಲಿ ಒಟ್ಟಾರೆ ನಿರುದ್ಯೋಗ ದರವು ಶೇ.5.1ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಪರಿಸ್ಥಿತಿಗಳು ಸುಧಾರಿಸಿದೆ ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ಹೆಚ್ಚಾಗಿದೆ. ಆದಾಗ್ಯೂ, ನಗರ ಪ್ರದೇಶಗಳಲ್ಲಿ ನಿರುದ್ಯೋಗದಲ್ಲಿ ಸ್ವಲ್ಪ ಹೆಚ್ಚಳ, ಸ್ವಯಂ ಉದ್ಯೋಗದಲ್ಲಿ ಹೆಚ್ಚಳ, ಜತೆಗೆ ಕೆಲಸದ ಗುಣಮಟ್ಟ ಮತ್ತು ಆದಾಯದ ಸ್ಥಿರತೆಯಂತಹ ವಿಷಯಗಳನ್ನು ಪರಿಶೀಲಿಸಬೇಕಾಗಿದೆ,(ಏಜೆನ್ಸೀಸ್).