Russian Oil | ಪೆಟ್ರೋಲ್ ಬೆಲೆ ಏರಿಕೆ ಆತಂಕ ಬೇಡ ಎಂದ ಕೇಂದ್ರ ಸರ್ಕಾರ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನಲೆಯಲ್ಲಿ, ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ಏರುಪೇರಾಗುವ ಆತಂಕ ಎದುರಾಗಿತ್ತು. ಈ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ಭಾರತ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ರಷ್ಯಾದಿಂದ ಕಚ್ಚಾ ತೈಲವನ್ನು (Russian Oil) ಖರೀದಿಸಲು ಮುಂದಾಗಿದೆ ಎಂದು ಸರ್ಕಾರಿ ಮೂಲಗಳು ಶುಕ್ರವಾರ ಖಚಿತಪಡಿಸಿವೆ.
ವಿಶ್ವದ ವಿವಿಧ ರಾಷ್ಟ್ರಗಳ ಜೊತೆ ಭಾರತ ಸರ್ಕಾರ ನಡೆಸಿದ ನಿರಂತರ ಮಾತುಕತೆಗಳು ಸದ್ಯ ಫಲ ನೀಡುತ್ತಿದ್ದು, ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸ್ಥಿರವಾಗಿರಿಸಲು ಸಾಧ್ಯವಾಗಲಿದೆ ಮತ್ತು ಕಚ್ಚಾ ತೈಲದ ಪರಿಸ್ಥಿತಿ ಪ್ರಸ್ತುತ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸರ್ಕಾರಿ ಮೂಲಗಳು ಭರವಸೆ ನೀಡಿವೆ.
ಬೆಲೆ ಏರಿಕೆಗೆ ಅವಕಾಶ ನೀಡಲ್ಲ...
ವಿಶ್ವದ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಅಧಿಕೃತವಾಗಿ ಮುಚ್ಚಿದ್ದು, ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಹಡಗುಗಳಿಗೆ ಬೆಂಕಿ ಹಾಕಲಾಗುವುದು ಎಂದು ಇರಾನ್ ಕಟುವಾದ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿದ್ದರೂ, ಭಾರತ ಸರ್ಕಾರವು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ.
ಒಮಾನ್ ಕರಾವಳಿಯಲ್ಲಿ ಇತ್ತೀಚೆಗೆ ಕನಿಷ್ಠ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳು ಸಮುದ್ರ ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ದಾಳಿಗಳಿಂದಾಗಿ ಸಮುದ್ರ ವಿಮಾ ಪೂರೈಕೆದಾರರು ಹಿಂದೆ ಸರಿಯುತ್ತಿದ್ದಾರೆ. ಇದರಿಂದಾಗಿ ಪರ್ಷಿಯನ್ ಕೊಲ್ಲಿಯನ್ನು ಮುಕ್ತ ಸಾಗರಕ್ಕೆ ಸಂಪರ್ಕಿಸುವ ಈ ಕಿರಿದಾದ ಜಲಮಾರ್ಗದಲ್ಲಿ ತೈಲ ಸಾಗಾಟ ಸಂಪೂರ್ಣ ನಿಧಾನಗೊಂಡಿದೆ
ಇಷ್ಟೆಲ್ಲಾ ಅಡಚಣೆಗಳ ನಡುವೆಯೂ ದೇಶದ ಜನತೆಗೆ ಆತಂಕ ಬೇಡ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಟೆಹ್ರಾನ್ ನಿಯಂತ್ರಿತ ಹಾರ್ಮುಜ್ ಜಲಸಂಧಿಯಲ್ಲಿ ಮಿಲಿಟರಿ ಒತ್ತಡ ಹೆಚ್ಚಾದರೂ, ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಭಾರತದ ಬಳಿ ಸಾಕಷ್ಟು ತೈಲ ಇದೆ ಎಂದು ಸರ್ಕಾರಿ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
ಹಾರ್ಮುಜ್ ಜಲಸಂಧಿಯ ಮಹತ್ವ
ವಿಶ್ವದ ತೈಲ ವ್ಯಾಪಾರದ ಐದನೇ ಒಂದು ಭಾಗ ಮತ್ತು ನೈಸರ್ಗಿಕ ಅನಿಲ ವ್ಯಾಪಾರದ ಅರ್ಧಕ್ಕಿಂತ ಹೆಚ್ಚು ಭಾಗವು ಈ ಮಾರ್ಗದ ಮೂಲಕವೇ ಸಾಗುವುದರಿಂದ, ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ದಟ್ಟಣೆಯ ಸ್ಥಳಗಳಲ್ಲಿ ಒಂದಾಗಿದೆ. ಇರಾನ್ ಇದನ್ನು ಬಂದ್ ಮಾಡಿರುವುದು ಜಾಗತಿಕ ಇಂಧನ ಪೂರೈಕೆ ಸರಪಳಿಗೆ ದೊಡ್ಡ ಹೊಡೆತ ನೀಡಿದೆ. ಆದರೆ ಭಾರತವು ರಷ್ಯಾದಿಂದ ತೈಲ ಖರೀದಿ ಮತ್ತು ತನ್ನಲ್ಲಿರುವ ಮೀಸಲು ತೈಲದ ಮೂಲಕ ಈ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ(ಏಜೆನ್ಸೀಸ್).