Missile Test | ಕಡಿಮೆ ವ್ಯಾಪ್ತಿಯ ಅಣು ಸಾಮರ್ಥ್ಯದ ಅಗ್ನಿ-1 ಕ್ಷಿಪಣಿ ಪ್ರಯೋಗ ಯಶಸ್ವಿ!
Missile Test: ಭಾರತವು ಶುಕ್ರವಾರದಂದು ಕಡಿಮೆ ವ್ಯಾಪ್ತಿಯ ಅಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-1 ರ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ಈ ಮಹತ್ವದ ಪ್ರಯೋಗವನ್ನು ಕೈಗೊಳ್ಳಲಾಗಿತ್ತು.
ಭಾರತದ ನ್ಯೂಕ್ಲಿಯರ್ ಕಮಾಂಡ್ ಅಥಾರಿಟಿ (NCA) ಯ ಪ್ರಮುಖ ಭಾಗವಾಗಿರುವ ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್ (SFC) ಉಸ್ತುವಾರಿಯಲ್ಲಿ ಈ ಉಡಾವಣೆ ನಡೆದಿದೆ. ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಈ ಕಾರ್ಯಾಚರಣೆಯು ಕ್ಷಿಪಣಿಯ ಎಲ್ಲಾ ತಾಂತ್ರಿಕ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಯಶಸ್ವಿಯಾಗಿ ಪ್ರಮಾಣೀಕರಿಸಿದೆ.
ಕಳೆದ ವರ್ಷದ ಜುಲೈ ತಿಂಗಳಿನಲ್ಲೂ ಇಂತಹದೇ ಒಂದು ಯಶಸ್ವಿ ಪರೀಕ್ಷೆಯನ್ನು ನಡೆಸಿ ಕ್ಷಿಪಣಿಯ ಸಾಮರ್ಥ್ಯವನ್ನು ಪರಿಶೀಲಿಸಲಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಈ ಅಗ್ನಿ-1 ಕ್ಷಿಪಣಿಯು, 700 ರಿಂದ 1,200 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗುರಿಗಳನ್ನು ನಿಖರವಾಗಿ ಧ್ವಂಸಗೊಳಿಸುವ ಶಕ್ತಿ ಹೊಂದಿದೆ. ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್ ಅಡಿಯಲ್ಲಿ ಸೇನೆಗೆ ಸೇರ್ಪಡೆಗೊಳಿಸಲಾದ ಇಂತಹ ಕ್ಷಿಪಣಿಗಳ ನಿಯಮಿತ ಪರೀಕ್ಷೆಗಳನ್ನು ಭಾರತವು ನಿರಂತರವಾಗಿ ನಡೆಸುತ್ತಾ ಬಂದಿದೆ.
ಇದೇ ತಿಂಗಳ ಆರಂಭದಲ್ಲಿ, ಮೇ 8 ರಂದು ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅತ್ಯಾಧುನಿಕ ತಂತ್ರಜ್ಞಾನದ ಮತ್ತೊಂದು ಅಗ್ನಿ ಕ್ಷಿಪಣಿಯ ಯಶಸ್ವಿ ಹಾರಾಟ ಪರೀಕ್ಷೆಯನ್ನು ಭಾರತ ನಡೆಸಿತ್ತು. ಈ ಅತ್ಯಾಧುನಿಕ ಕ್ಷಿಪಣಿಯನ್ನು ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಡ್ ರಿ-ಎಂಟ್ರಿ ವೆಹಿಕಲ್ ವ್ಯವಸ್ಥೆಯೊಂದಿಗೆ ಪರೀಕ್ಷಿಸಲಾಯಿತು. ಹಿಂದೂ ಮಹಾಸಾಗರದ ವಿಶಾಲ ಭೌಗೋಳಿಕ ಪ್ರದೇಶದಲ್ಲಿ ಹರಡಿಕೊಂಡಿದ್ದ ಬೇರೆ ಬೇರೆ ಗುರಿಗಳನ್ನು ತಲುಪಲು ಈ ಉಡಾವಣೆಯಲ್ಲಿ ಮಲ್ಟಿಪಲ್ ಪೇಲೋಡ್‌ಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
ಈ ಅದ್ಭುತ ಯಶಸ್ಸಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಎಂಆಯ್ಆರ್ವಿ ತಂತ್ರಜ್ಞಾನದ ಸೇರ್ಪಡೆಯು ದೇಶದ ಭದ್ರತೆಗೆ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಮತ್ತು ಭಾರತದ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಅವರು ಆಶಿಸಿದ್ದಾರೆ(ಏಜೆನ್ಸೀಸ್).