ಯುದ್ಧ ನಿಲ್ಲಿಸಿ ಮಾತುಕತೆ ನಡೆಸಿ ಎಂದ ಭಾರತ 
ದೇಶ

ರಣರಂಗವಾದ ಮಧ್ಯಪ್ರಾಚ್ಯ: ಯುದ್ಧ ನಿಲ್ಲಿಸಿ,ಮಾತುಕತೆ ನಡೆಸಿ;ಶಾಂತಿ ಮಂತ್ರ ಬೋಧಿಸಿದ ಭಾರತ | India Statement

ಪ್ರಮುಖ ಮುಖ್ಯಾಂಶಗಳು

  • ರಣರಂಗವಾದ ಮಧ್ಯಪ್ರಾಚ್ಯ
  • ಇರಾನ್​ ವಿರುದ್ಧ ಇಸ್ರೇಲ್​- ಅಮೆರಿಕ ಜಂಟಿ ಕಾರ್ಯಾಚರಣೆ
  • ಯುದ್ಧ ನಿಲ್ಲಿಸಿ ಮಾತುಕತೆ ನಡೆಸಿ ಎಂದ ಭಾರತ
ನವದೆಹಲಿ/ಟೆಹ್ರಾನ್: ಮಧ್ಯಪ್ರಾಚ್ಯ ಅಕ್ಷಶಃ ರಣರಂಗವಾಗಿ ಬದಲಾಗಿದ್ದು, ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ, ಇಡೀ ವಿಶ್ವದ ಕಣ್ಣು ಈಗ ಭಾರತದ ಮೇಲಿದೆ. ಈ ಸ್ಫೋಟಕ ಬೆಳವಣಿಗೆಯ ಬಗ್ಗೆ ಭಾರತ ಸರ್ಕಾರ (India Statement) ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂಯಮ ಕಾಯ್ದುಕೊಳ್ಳುವಂತೆ ಜಗತ್ತಿನ ರಾಷ್ಟ್ರಗಳಿಗೆ ಕರೆ ನೀಡಿದೆ.

ಭಾರತದ ಮೊದಲ ಪ್ರತಿಕ್ರಿಯೆ: ಯುದ್ಧ ಬೇಡ, ಸಂವಾದ ಇರಲಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ನಾಗರಿಕರ ಸುರಕ್ಷತೆ ನಮಗೆ ಮೊದಲ ಆದ್ಯತೆ. ಎಲ್ಲಾ ಕಡೆಯವರು ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು. ಯಾವುದೇ ಸಮಸ್ಯೆಯಿದ್ದರೂ ಅದನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು. ಪ್ರತಿಯೊಂದು ದೇಶದ ಸಾರ್ವಭೌಮತ್ವಕ್ಕೆ ಗೌರವ ನೀಡಬೇಕು ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇರಾನ್ ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಹೈಅಲರ್ಟ್
ಯುದ್ಧ ಭೂಮಿಯಂತಾಗಿರುವ ಇರಾನ್ ಮತ್ತು ಇಸ್ರೇಲ್‌ನಲ್ಲಿ ಲಕ್ಷಾಂತರ ಭಾರತೀಯರು ವಾಸಿಸುತ್ತಿದ್ದಾರೆ. ಅವರ ಸುರಕ್ಷತೆಗಾಗಿ ಭಾರತದ ರಾಯಭಾರ ಕಚೇರಿಗಳು ಹಗಲಿರುಳು ಶ್ರಮಿಸುತ್ತಿವೆ.
ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಜೆಗಳಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಅನಗತ್ಯವಾಗಿ ಹೊರಗೆ ಬರಬೇಡಿ, ಸಾಧ್ಯವಾದಷ್ಟು ಮನೆಯೊಳಗೇ ಇರಿ. ಸುದ್ದಿಗಳನ್ನು ಗಮನಿಸುತ್ತಿರಿ ಮತ್ತು ರಾಯಭಾರ ಕಚೇರಿಯ ಸಂಪರ್ಕದಲ್ಲಿರಿ ಎಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇನ್ನೂ ನೋಂದಾಯಿಸಿಕೊಳ್ಳದ ಭಾರತೀಯರು ತಕ್ಷಣವೇ ಆನ್‌ಲೈನ್ ಲಿಂಕ್ ಮೂಲಕ ತಮ್ಮ ವಿವರಗಳನ್ನು ನೀಡುವಂತೆ ವಿನಂತಿಸಿದೆ. ತುರ್ತು ಸಂದರ್ಭದಲ್ಲಿ ನೆರವಿಗೆ ಬರಲು ಇದು ಸಹಕಾರಿ ಎಂದು ತಿಳಿಸಿದೆ.

ಪೋಷಕರಲ್ಲಿ ಹೆಚ್ಚಿದ ಆತಂಕ

ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಈ ದೇಶಗಳಿಗೆ ಹೋಗಿರುವ ಸಾವಿರಾರು ಕನ್ನಡಿಗರು ಮತ್ತು ಭಾರತೀಯರ ಕುಟುಂಬಗಳು ಈಗ ತಾಯ್ನಾಡಿನಲ್ಲಿ ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾದರೆ ವಿಮಾನ ನಿಲ್ದಾಣಗಳು ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದ್ದು, ಅನಿವಾರ್ಯವಾದರೆ ಭಾರತ ಸರ್ಕಾರ ರಕ್ಷಣಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಶಸ್ತ್ರ ತ್ಯಜಿಸಿ ಇಲ್ಲವೇ ಸಾವನ್ನು ಎದುರಿಸಿ: ಡೊನಾಲ್ಡ್ ಟ್ರಂಪ್

ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರುತ್ ಸೋಶಿಯಲ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಯುದ್ಧದ ಘೋಷಣೆ ಮಾಡಿದ್ದಾರೆ. ಇರಾನ್ ಮೇಲೆ ಅಮೆರಿಕ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ ಎಂದು ಖಚಿತಪಡಿಸಿರುವ ಅವರು, ಇದನ್ನು ಒಂದು ಉದಾತ್ತ ಧ್ಯೇಯ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಶಸ್ತ್ರ ತ್ಯಜಿಸಿ ಇಲ್ಲವೇ ಸಾವನ್ನು ಎದುರಿಸಿ ಎಂದು ನೇರ ಎಚ್ಚರಿಕೆ ನೀಡಿದ್ದಾರೆ,(ಏಜನ್ಸೀಸ್).