ಚೇಸ್ ಮಾಸ್ಟರ್ ಇಲ್ಲದೆ ಭಾರತ ಜೀರೋ..; ಕೋಚ್ ಗಂಭೀರ್ ವಿರುದ್ಧ ಹಾರಿಹಾಯ್ದ ಪಾಕ್ ಕ್ರಿಕೆಟಿಗ
ನವದೆಹಲಿ: ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅನುಭವಿಸಿದ ಹೀನಾಯ ಸೋಲು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಅಹ್ಮದ್ ಶೆಹಜಾದ್(Ahmed Shehzad), ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿ ಮತ್ತು ತಂಡದ ಆಯ್ಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ಗಂಭೀರ್ ಅವರು ತಮ್ಮ ರಾಜಕೀಯ ಮನಸ್ಥಿತಿಯನ್ನು ಕ್ರಿಕೆಟ್ ತಂಡದೊಳಗೆ ತಂದಿದ್ದಾರೆ ಮತ್ತು ಇದು ಭಾರತೀಯ ಕ್ರಿಕೆಟ್‌ನ ಘನತೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ.
ಕೊಹ್ಲಿ ಇಲ್ಲದ ತಂಡ ಚೋಕರ್ಸ್ ಪಡೆಯೇ..?
ಈ ಬಗ್ಗೆ ಜಿಯೋ ನ್ಯೂಸ್ ಸಂವಾದದಲ್ಲಿ ಮಾತನಾಡಿದ ಶೆಹಜಾದ್, ವಿರಾಟ್ ಕೊಹ್ಲಿಯ ಅನಿವಾರ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಕೊಹ್ಲಿಯಂತಹ ರನ್ ಚೇಸ್ ರಾಜನ ಸ್ಥಾನವನ್ನು ತುಂಬುವುದು ಸುಲಭವಲ್ಲ. ಇಂದು ಭಾರತ ತಂಡವು ಒತ್ತಡದ ಸಮಯದಲ್ಲಿ ಹೇಗೆ ಕುಸಿಯುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ಈ ತಂಡಕ್ಕೆ ರನ್ ಚೇಸ್ ಮಾಡುವ ಕಲೆ ಗೊತ್ತಿಲ್ಲ, ಇವರು ಒತ್ತಡದಲ್ಲಿ ಉಸಿರುಗಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕೊಹ್ಲಿ ತಂಡದಿಂದ ಹೊರಹೋದ ಮೇಲೆ ಅವರ ಬೆಲೆ ಏನೆಂಬುದು ಮ್ಯಾನೇಜ್‌ಮೆಂಟ್‌ಗೆ ಈಗ ಅರಿವಾಗುತ್ತಿದೆ ಎಂದು ಶೆಹಜಾದ್ ಹೇಳಿದ್ದಾರೆ.
ಕುಲದೀಪ್ ಮತ್ತು ಅಕ್ಷರ್ ಕೈಬಿಟ್ಟಿದ್ದಕ್ಕೆ ಕಿಡಿ
ತಂಡದ ಆಯ್ಕೆಯ ಬಗ್ಗೆ ಮಾತನಾಡಿದ ಶೆಹಜಾದ್, ಮ್ಯಾಚ್ ವಿನ್ನರ್ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿರುವುದೇ ಸೋಲಿಗೆ ಮುಖ್ಯ ಕಾರಣ ಎಂದಿದ್ದಾರೆ. ನಿಮ್ಮಲ್ಲಿ ಕುಲದೀಪ್ ಯಾದವ್ ಅಂತಹ ಅದ್ಭುತ ಬೌಲರ್ ಇದ್ದರೂ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯು ರಾಜಕೀಯ ಪ್ರೇರಿತವಾಗಿದೆ ಎಂದು ಅನೇಕರು ಭಾವಿಸುತ್ತಿದ್ದಾರೆ. ಸೀನಿಯರ್ ಆಟಗಾರರಿಗೆ ಗೌರವ ನೀಡದೆ ಅವರನ್ನು ತಂಡದಿಂದ ದೂರ ಇಡಲಾಗುತ್ತಿದೆ ಎಂದು ಗಂಭೀರ್ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ.
ವಿರಾಟ್ ಕೊಹ್ಲಿ ಸಹೋದರನ ಟ್ವೀಟ್ ವಿವಾದ
ವಿರಾಟ್ ಕೊಹ್ಲಿ ಅವರನ್ನು ಮ್ಯಾನೇಜ್‌ಮೆಂಟ್ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಅವರ ಸಹೋದರ ವಿಕಾಸ್ ಕೊಹ್ಲಿ ಇತ್ತೀಚೆಗೆ ಮಾಡಿದ್ದ ಟ್ವೀಟ್ (ನಂತರ ಡಿಲೀಟ್ ಮಾಡಲಾಗಿತ್ತು) ಬಗ್ಗೆಯೂ ಶೆಹಜಾದ್ ಪ್ರಸ್ತಾಪಿಸಿದ್ದಾರೆ. ಮ್ಯಾನೇಜ್‌ಮೆಂಟ್‌ನಿಂದ ತಾರತಮ್ಯ ನಡೆಯುತ್ತಿದೆ ಎಂಬುದು ವಿಕಾಸ್ ಕೊಹ್ಲಿ ಅವರ ಟ್ವೀಟ್‌ನಿಂದ ಸ್ಪಷ್ಟವಾಗುತ್ತದೆ. ಗಂಭೀರ್ ಬಾಸ್ ಶೈಲಿಯು ತಂಡದ ಸೌಹಾರ್ದತೆಯನ್ನು ಹಾಳುಮಾಡುತ್ತಿದೆ ಎಂದು ಆಹ್ಮದ್ ಹೇಳಿದ್ದಾರೆ,(ಏಜೆನ್ಸೀಸ್).