ನವದೆಹಲಿ: ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಮೈತ್ರಿಕೂಟದ ಬೃಹತ್ ಪ್ರತಿಭಟನಾ ರ್ಯಾಲಿ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜೆಪಿ ನಡ್ಡಾ, ಇದು ಭಾರತ ಯಾವುದೋ 'ಬನಾನಾ ರಿಪಬ್ಲಿಕ್' ಅಲ್ಲ. ಆಡಳಿತ ಬದಲಾವಣೆಯ ಕನಸು ಕಾಣಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿರುವ ಅವರು, ಭಾರತವು ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಬಲವಾದ ಪ್ರಜಾಪ್ರಭುತ್ವವಾಗಿದೆ. ಇಲ್ಲಿ ನಿಮಗೆ ಇಷ್ಟ ಬಂದಾಗಲೆಲ್ಲಾ ಬೆಂಕಿ ಹಚ್ಚಲು, ಗಲಭೆಗಳನ್ನು ಸೃಷ್ಟಿಸಲು ಅಥವಾ 'ಸರ್ಕಾರ ಬದಲಾವಣೆ'ಯ ಅಜೆಂಡಾವನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ, ಇಂತಹ ಹಗಲುಗನಸು ಕಾಣುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.
ನ. 01 ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಮತ್ತು ಕರಾಳ ಅಧ್ಯಾಯ ದಿನವಾಗಿದೆ. ಇದೇ ದಿನ ಕಾಂಗ್ರೆಸ್ ಪೋಷಿಸಿದ ಗೂಂಡಾಗಳು ನಮ್ಮ ಅಮಾಯಕ ಸಿಖ್ ಸಹೋದರರ ಹತ್ಯಾಕಾಂಡ ನಡೆಸಿದರು. ಒಂದೇ ರಾತ್ರಿಯಲ್ಲಿ ಸಾವಿರಾರು ಸಿಖ್ ಕುಟುಂಬಗಳು ನಿರಾಶ್ರಿತರಾದವು. ಮತ್ತು ಸಾವಿರಾರು ಮಹಿಳೆಯರು ವಿಧವೆಯರಾದರು. ದೇಶವು ಇದನ್ನು ಮರೆತಿಲ್ಲ. ಇಂದಿಗೂ ದೆಹಲಿಯಲ್ಲಿರುವ 'ವಿಡೋ ಕಾಲೋನಿ'(ವಿಧವೆಯರ ಕಾಲೋನಿ) ಕಾಂಗ್ರೆಸ್ ಇತಿಹಾಸದ ಆ ಭಯಾನಕ ಮತ್ತು ರಕ್ತಸಿಕ್ತ ಅಧ್ಯಾಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಖ್ ಹತ್ಯಕಾಂಡದಂತಹ ಘೋರ ಪಾಪಕ್ಕಾಗಿ ಗಾಂಧಿ ಕುಟುಂಬವು ಇಂದಿನವರೆಗೂ ಸಿಖ್ ಸಮುದಾಯದ ಕ್ಷಮೆ ಕೋರಿಲ್ಲ. ಕಾಂಗ್ರೆಸ್ನ ಸಂವೇದನಾಹೀನತೆಯನ್ನು ಮತ್ತು ರಾಹುಲ್ ಗಾಂಧಿಯವರ ಸಂಕುಚಿತ ಮನಸ್ಥಿತಿಯನ್ನು ಗಮನಿಸಿ. ದೇಶವು ತನ್ನ ಹುತಾತ್ಮರನ್ನು ಮತ್ತು ಸಂತ್ರಸ್ತರನ್ನು ಸ್ಮರಿಸಬೇಕಾದ ಈ ಕರಾಳ ದಿನದಂದು, ರಾಹುಲ್ ಗಾಂಧಿ ರಾಮಲೀಲಾ ಮೈದಾನದಲ್ಲಿ ನಿಂತು ಕೇವಲ ತಮ್ಮ ಸ್ವಂತ ರಾಜಕೀಯ ಅಜೆಂಡಾವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ (ಏಜೆನ್ಸೀಸ್).