ಮೋಹನ್ ಭಾಗವತ್ 
ದೇಶ

ಸೂರ್ಯ ಪೂರ್ವದಲ್ಲೇ ಹುಟ್ಟೋದು! ಅದೇ ರೀತಿ ಭಾರತ ಹಿಂದೂ ರಾಷ್ಟ್ರ, ಘೋಷಿಸುವ ಅಗತ್ಯವಿಲ್ಲ: ಮೋಹನ್ ಭಾಗವತ್ | Mohan Bhagwat

ಮುಂಬೈ: ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿರುವುದರಿಂದ, ಅದನ್ನು ಹೊಸದಾಗಿ ಹಿಂದೂ ರಾಷ್ಟ್ರವೆಂದು ಘೋಷಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ನಾಗ್ಪುರದ ರೇಶಿಂಬಾಗ್‌ನಲ್ಲಿ ಡಾ ಹೆಡ್ಗೆವಾರ್ ಸ್ಮಾರಕ ಸಮಿತಿಯು ಆಯೋಜಿಸಿದ್ದ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದವರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಅಧಿಕಾರದಲ್ಲಿರುವವರ ಬದ್ಧತೆ ಮತ್ತು ದೇಶಾದ್ಯಂತ ಜನರ ಬೆಂಬಲದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ದೇವಾಲಯವನ್ನು ಶ್ರೀರಾಮನ ಸ್ವಂತ ಇಚ್ಚೆಯಿಂದ ನಿರ್ಮಿಸಲಾಗಿದೆ. ಸಾಮೂಹಿಕ ಪ್ರಯತ್ನವು ತೊಡಗಿಸಿಕೊಂಡಾಗ ಮಾತ್ರ ಅಂತಹ ಕಾರ್ಯಗಳು ಸಾಧ್ಯ. ಸನಾತನ ಧರ್ಮದ ಪುನರುತ್ಥಾನಕ್ಕೆ ಭಾರತದ ಪುನರುತ್ಥಾನದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ, ದಿ ಗಾರ್ಡಿಯನ್ ಈ ದಿನ ಭಾರತೀಯರು ಅಂತಿಮವಾಗಿ ಬ್ರಿಟಿಷರಿಗೆ ವಿದಾಯ ಹೇಳಿದ್ದಾರೆ ಎಂದು ಲೇಖನ ಪ್ರಕಟಿಸಿತ್ತು. ತಾಂತ್ರಿಕವಾಗಿ ನಾವು 1947 ಆಗಸ್ಟ್ 15ರಂದು ವಿದಾಯ ಹೇಳಿದೆವು, ಆದರೆ ನಮಗೆ ಸಂಪೂರ್ಣವಾಗಿ ಖಚಿತವಿರಲಿಲ್ಲ ಎಂದಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಿದ್ದಾರೆ ಎಂದಿರುವ ಭಾಗವತ್, ಬದ್ಧ ನಾಯಕತ್ವವಿಲ್ಲದೆ ರಾಮ ಮಂದಿರ ನಿರ್ಮಾಣವಾಗುತ್ತಿದ್ದಿಲ್ಲ. ರಾಮ ಜನ್ಮಭೂಮಿ ಚಳುವಳಿ ಇಲ್ಲದಿದ್ದರೆ ದೇವಾಲಯ ನಿರ್ಮಾಣವಾಗುತ್ತಿರಲಿಲ್ಲ. ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಅದು ಸಾಧ್ಯವಾಗುತ್ತಿತ್ತೇ? ಭಾರತದ ಪ್ರತಿಯೊಬ್ಬ ವ್ಯಕ್ತಿಯು ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಭಾರತ ಹಿಂದೂ ರಾಷ್ಟ್ರ ಎಂಬ ಕಲ್ಪನೆಯನ್ನು ಹಿಂದೆ ಅಪಹಾಸ್ಯ ಮಾಡಲಾಗುತ್ತಿತ್ತು. ಯಾರು ಅಪಹಾಸ್ಯ ಮಾಡ್ತಿದ್ದರೋ ಅದೇ ಜನ ಇಂದು ಭಾರತವನ್ನು ಹಿಂದೂಗಳ ಭೂಮಿ ಎನ್ನುತ್ತಾರೆ. ಈಗಾಗಲೇ ಇರುವುದನ್ನು ಘೋಷಿಸುವ ಅಗತ್ಯವಿಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ನಾವು ಅದನ್ನು ಘೋಷಿಸಬೇಕೇ? ಅದೇ ರೀತಿ, ಭಾರತ ಹಿಂದೂ ರಾಷ್ಟ್ರ ಎಂದಿದ್ದಾರೆ (ಏಜೆನ್ಸೀಸ್).