ನವದೆಹಲಿ: ಜಾಗತಿಕ ಸಂಕಷ್ಟದ ನಡುವೆಯೂ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರೆದಿದ್ದು, ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) 2026-27ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಶೇಕಡಾ 7ರಷ್ಟು ಹೆಚ್ಚಾಗಲಿದೆ ಎಂದು ಪ್ರಕಟಿಸಿದೆ.
ಜುಲೈನಲ್ಲಿ ಶೇ 6.4 ರಷ್ಟಿತ್ತು ಎಂದು ಹೇಳಿದ್ದ ಸಂಸ್ಥೆ, ಈಗ ತನ್ನ ಅಂದಾಜನ್ನು ಪರಿಷ್ಕರಿಸಿ 7ಕ್ಕೆ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹ ವರ್ಷದ ತನ್ನ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇಕಡಾ 7.1ಕ್ಕೆ ನಿರೀಕ್ಷೆಯಿದೆ ಎಂದು ಹೇಳಿತ್ತು. ಈಗ ಐಎಂಎಫ್ ಕೂಡ ಭಾರತದ ಜಿಡಿಪಿ ಬೆಳವಣಿಗೆ ಶೇ. 7ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ.
ಐಎಂಎಫ್ ಸಂಸ್ಥೆಯ ಪ್ರಕಾರ, ಅಮೆರಿಕ-ಇರಾನ್ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆಯ ಮುನ್ಸೂಚನೆಯಲ್ಲಿ ಮೇಲ್ಮುಖವಾಗಿದೆ. ಹೆಚ್ಚುತ್ತಿರುವ ಆಂತರಿಕ ಮಾರುಕಟ್ಟೆ ಬೇಡಿಕೆ, ಬಲವಾದ ಸೇವಾ ಚಟುವಟಿಕೆ ಮತ್ತು ಅನುಕೂಲಕರ ಜನಸಂಖ್ಯಾ ಪ್ರವೃತ್ತಿಗಳು ಹಾಗೂ ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳು ಈ ಬೆಳವಣಿಗೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಪಂಚದಾದ್ಯಂತ ತೈಲ ಬೆಲೆಗಳು ಏರುತ್ತಿದ್ದರೂ ಭಾರತದ ಆರ್ಥಿಕತೆಯು ಹೇಗೆ ವಿಸ್ತರಿಸುತ್ತಲೇ ಇತ್ತು ಎಂಬುದನ್ನು ವರದಿ ಎತ್ತಿ ತೋರಿಸಿದೆ. ತೈಲ ಬೆಲೆಗಳು ಹೆಚ್ಚಿದ್ದರೂ ದೇಶೀಯ ಬೇಡಿಕೆ ಮತ್ತು ಸೇವೆಗಳಿಂದ ಭಾರತದ ಬೆಳವಣಿಗೆಯು ದೃಢವಾಗಿ ಉಳಿದಿದೆ ಎಂದು ತಿಳಿಸಿದೆ.
ಇನ್ನೂ ಐಎಂಎಫ್ನ ಮುನ್ಸೂಚನೆಗಳ ಪ್ರಕಾರ, ಬ್ರೆಂಟ್, ದುಬೈ ಫತೇಹ್ ಮತ್ತು ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್‌ನಾದ್ಯಂತ ಕಚ್ಚಾ ತೈಲದ ಸರಾಸರಿ ಬೆಲೆ 2026 ರಲ್ಲಿ ಪ್ರತಿ ಬ್ಯಾರೆಲ್‌ಗೆ $95.74 ಆಗಲಿದೆ. ಇದು 2025ಕ್ಕೆ ಹೋಲಿಸಿದ್ರೆ ಶೇ. 41 ರಷ್ಟು ಹೆಚ್ಚಾಗಿದೆ. ಆದ್ರೆ 2027ರಲ್ಲಿ, ತೈಲ ಬೆಲೆ ಸುಮಾರು ಶೇ. 9 ರಷ್ಟು ಇಳಿಕೆಯಾಗಲಿದ್ದು, $87.39 ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ (ಏಜೆನ್ಸೀಸ್).