ನೇಪಾಳ ಪ್ರವಾಹ ಪೀಡಿತರಿಗಾಗಿ ಭಾರತದಿಂದ 2ನೇ ಕಂತು ಪರಿಹಾರ ಸಾಮಗ್ರಿ ರವಾನೆ 
ದೇಶ

ನೇಪಾಳಕ್ಕೆ ಭಾರತ ಮತ್ತೆ ನೆರವಿನ ಹಸ್ತ; 37.5 ಟನ್ ಪರಿಹಾರ ಸಾಮಗ್ರಿ ಹೊತ್ತ 2ನೇ ವಿಮಾನ ರವಾನೆ | India Extends Aid to Nepal

ಪ್ರಮುಖ ಮುಖ್ಯಾಂಶಗಳು

  • ನೇಪಾಳದ ಪ್ರವಾಹ ಪೀಡಿತರ ನೆರವಿಗೆ ನಿಂತ ಭಾರತ
  • ನೇಪಾಳಕ್ಕೆ ಭಾರತದಿಂದ 2ನೇ ಕಂತು ಪರಿಹಾರ ಸಾಮಗ್ರಿ ರವಾನೆ
  • ಭಾರತದ ಮಾನವೀಯ ನೆರವಿಗೆ ನೇಪಾಳ ರಾಯಭಾರ ಕಚೇರಿ ಧನ್ಯವಾದ
Nepal Floods: ನೆರೆಯ ರಾಷ್ಟ್ರ ನೇಪಾಳದಲ್ಲಿ ರಕ್ಕಸ ಪ್ರವಾಹದಿಂದ ಪರಿಸ್ಥಿತಿ ಕೈಮೀರುತ್ತಿರುವ ಬೆನ್ನಲ್ಲೇ ಭಾರತ ಮತ್ತೊಮ್ಮೆ ನೆರವಿನ ಹಸ್ತ ಚಾಚಿದೆ. ಪ್ರವಾಹ ಪೀಡಿತರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ 37.5 ಟನ್ ಮಾನವೀಯ ನೆರವು, ಔಷಧಿ ಮತ್ತು ಆಹಾರ ಪ್ಯಾಕೆಟ್‌ಗಳನ್ನು ಹೊತ್ತ 2ನೇ ವಿಮಾನವನ್ನು ಭಾರತ ಕಳುಹಿಸಿದೆ. ಭಾರತದ ತಕ್ಷಣದ ನೆರವು ಮತ್ತು ಒಗ್ಗಟ್ಟಿಗೆ ನೇಪಾಳದ ನವದೆಹಲಿಯಲ್ಲಿರುವ ರಾಯಭಾರ ಕಚೇರಿ ಕೃತಜ್ಞತೆ ಸಲ್ಲಿಸಿದೆ.
ಇನ್ನು, ಭೀಕರ ಪ್ರವಾಹದಿಂದ ನೇಪಾಳ ತತ್ತರಿಸಿರುವ ಸಂದರ್ಭದಲ್ಲಿ ಭಾರತ ನೀಡುತ್ತಿರುವ ನೆರವಿಗೆ ನೇಪಾಳ ಧನ್ಯವಾದ ತಿಳಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಭಾರತದ ನಾಯಕರ ಸಂತಾಪ ಹಾಗೂ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ. ಸಂಕಷ್ಟದಲ್ಲಿರುವ ನೇಪಾಳದ ಜನರಿಗೆ ಭಾರತದ ಕಾಳಜಿ ಮತ್ತು ನೆರವು ಧೈರ್ಯ ತುಂಬಿದೆ ಎಂದು ರಾಯಭಾರ ಕಚೇರಿ ಹೇಳಿದೆ.

37.5 ಟನ್ ಪರಿಹಾರ ಸಾಮಗ್ರಿ ಹೊತ್ತ 2ನೇ ವಿಮಾನ

ವಿದೇಶಾಂಗ ಸಚಿವ ಎಸ್. ಜೈಶಂಕರ್, ನೇಪಾಳಕ್ಕೆ 37.5 ಟನ್ ಎಚ್‌ಎಡಿಆರ್ ಸಾಮಗ್ರಿ, ಔಷಧಿ ಮತ್ತು ಆಹಾರ ಪ್ಯಾಕೆಟ್‌ಗಳನ್ನು ಹೊತ್ತ 2ನೇ ಪರಿಹಾರ ವಿಮಾನವನ್ನು ಕಳಿಸಿದ್ದೇವೆ ಎಂದಿದ್ದಾರೆ. ನೇಪಾಳದ ಅಧಿಕಾರಿಗಳೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಕ್ಕೆ ಮುಂದುವರಿಯುತ್ತದೆ ಎಂದಿದ್ದಾರೆ. ಇದಕ್ಕೂ ಮುನ್ನ ಭಾರತ 10 ಟನ್ ಪರಿಹಾರ ಸಾಮಗ್ರಿ ಕಳುಹಿಸಿತ್ತು.

ವಿದೇಶಿಗರ ಬಗ್ಗೆಯೂ ನಿಗಾ

ವಿದೇಶಿ ಪ್ರಜೆಗಳ ಸುರಕ್ಷತೆ ಮತ್ತು ಪರಿಸ್ಥಿತಿಯ ಕುರಿತು ಭಾರತ ಹಾಗೂ ನೇಪಾಳದ ಅಧಿಕಾರಿಗಳು ಜೆತೆಗೂಡಿ ಕೆಲಸ ಮಾಡುತ್ತಿದ್ದಾರೆ. ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ಪರಿಗಣಿಸಿ, ಸುಳ್ಳು ಸುದ್ದಿಗಳು, ಸಂತ್ರಸ್ತರ ವೈಯಕ್ತಿಕ ವಿವರಗಳು ಅಥವಾ ಅನಧಿಕೃತ ದೇಣಿಗೆ ಮನವಿಗಳನ್ನು ಶೇರ್​ ಮಾಡಬೇಡಿ ಎಂದು ನೇಪಾಳ ರಾಯಭಾರ ಕಚೇರಿ ಮನವಿ ಮಾಡಿದೆ. ನೆರೆಯ ರಾಷ್ಟ್ರಗಳ ಸಂಕಷ್ಟದ ಸಂದರ್ಭದಲ್ಲಿ ನೆರವಾಗುವ ಭಾರತದ ‘ನೆರೆಹೊರೆ ಮೊದಲು’ ನೀತಿಯ ಭಾಗವಾಗಿ ಈ ಮಾನವೀಯ ನೆರವು ನೀಡಲಾಗಿದೆ,(ಏಜೆನ್ಸೀಸ್​).