ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಕೂಟದ ಸರಣಿ ಪ್ರತಿಭಟನೆಗಳು ಸದ್ಯ ದೆಹಲಿಯ ವ್ಯಾಪಾರಿಗಳಿಗೆ ತೀವ್ರ ಹೊಡೆತ ನೀಡುತ್ತಿವೆ. ವಿಪಕ್ಷಗಳು ಮತ್ತು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕೈಗೊಂಡಿರುವ ಪ್ರತಿಭಟನೆಯೂ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ, ಇಂಡಿಯಾ ಒಕ್ಕೂಟವು ಭಾನುವಾರ ಅಂದರೆ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದು, ಚುನಾವಣಾ ಆಯೋಗದ ಅಕ್ರಮಗಳ ಆರೋಪದ ವಿರುದ್ಧ ಧರಣಿ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ. ಇದರ ಬೆನ್ನಲ್ಲೇ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (ಸಿಟಿಐ), ದೀಪಾವಳಿ ಹಬ್ಬದ ಸಮಯದಲ್ಲಿ ಸುಮಾರು 2.5 ಲಕ್ಷ ಅಂಗಡಿಗಳನ್ನು ಮುಚ್ಚಲಾಗಿದೆ ಮತ್ತು ರ್ಯಾಲಿಯಿಂದಾಗಿ ಶೇ.80ರಷ್ಟು ವ್ಯಾಪಾರಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದೆ.
ಈ ಬೆಳವಣಿಗೆಗಳನ್ನು ಉಲ್ಲೇಖಿಸಿ ಸಿಟಿಐ ನಾಲ್ಕನೇ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರವನ್ನು ಬರೆದಿರುವುದಾಗಿಯೂ ಹೇಳಿದೆ. ರಾಮಲೀಲಾ ಮೈದಾನದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಪ್ರದೇಶದಲ್ಲಿ ವ್ಯಾಪಾರ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಮಧ್ಯೆ, ಉದ್ಯಮಿಗಳು ರಾಹುಲ್ಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಅವರು ಶನಿವಾರ ವಿಡಿಯೋವನ್ನು ರಿಲೀಸ್ ಮಾಡಿದರು ಎನ್ನಲಾಗಿದೆ.
ಈ ವಿಡಿಯೋದಲ್ಲಿ, ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವವರು ಸಣ್ಣ ವ್ಯಾಪಾರಿಗಳಲ್ಲಿ ಶಾಪಿಂಗ್ ಮಾಡುವಂತೆ ಕೇಳಿಕೊಂಡರು. ಇದರಿಂದ ಅವರ ವ್ಯವಹಾರವು ಸುಧಾರಿಸುತ್ತದೆ. ಉದ್ಯಮಗಳು ಸಂಕಷ್ಟದಲ್ಲಿವೆ ಎಂಬ ತಪ್ಪು ಕಲ್ಪನೆಯನ್ನು ಬಿಜೆಪಿ ಸೃಷ್ಟಿಸುತ್ತಿದೆ ಎಂದು ಇದೇ ವೇಳೆ ರಾಹುಲ್ ಆರೋಪಿಸಿದ್ದಾರೆ,(ಏಜೆನ್ಸೀಸ್).